ಉಡುಪಿ ಜಿಲ್ಲೆಯಾದ್ಯಂತ ಮಂಗನ ಕಾಯಿಲೆ ಭೀತಿ
ಉಡುಪಿ, ಜ.26: ಮಂಗನ ಕಾಯಿಲೆ ಭೀತಿಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಜಲಪಾತ ಸೇರಿದಂತೆ ವಿವಿಧ ಪ್ರವಾಸಿ ತಾಣಗಳ ಪ್ರವೇಶವನ್ನು ಅರಣ್ಯ ಇಲಾಖೆ ವನ್ಯಜೀವಿ ವಿಭಾಗವು ತಾತ್ಕಾಲಿಕವಾಗಿ ನಿಷೇಧಿಸಿದೆ.
ಉಡುಪಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಕಾರ್ಕಳ ಹಾಗೂ ಕುಂದಾಪುರ ತಾಲೂಕು ವ್ಯಾಪ್ತಿಯ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ರುವ ಎಲ್ಲ ಜಲಪಾತ ಹಾಗೂ ಟ್ರೆಕ್ಕಿಂಗ್ ಸ್ಥಳಗಳಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಎಲ್ಲ ಸ್ಥಳಗಳಲ್ಲಿ ಪ್ರವೇಶ ನಿಷೇಧ ಹಾಗೂ ಕಾಯಿಲೆ ಬಗ್ಗೆ ಎಚ್ಚರಿಕೆ ಕುರಿತಂತೆ ಮಾಹಿತಿ ಫಲಕಗಳನ್ನು ಆಳವಡಿಸಲಾಗಿದೆ. ಹೆಬ್ರಿ ವಲಯ ಅರಣ್ಯಾಧಿಕಾರಿ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ ಒಟ್ಟು ಆರು ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರು ತೆರಳುವುದನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಸೋಮೇಶ್ವರ ವನ್ಯಜೀವಿ ವಲಯದಲ್ಲಿರುವ ಕೂಡ್ಲು ಜಲಪಾತ, ಹೆಬ್ರಿ ಸಂತೆಕಟ್ಟೆ ಸಮೀಪ ದಲ್ಲಿರುವ ಜೋಮ್ಲು ತೀರ್ಥ, ಆಗುಂಬೆ ಸಮೀಪದ ನರಸಿಂಹ ಪರ್ವತ, ಒನಕೆ ಅಬ್ಬಿ ಜಲಪಾತ, ಮಡಾಮಕ್ಕಿ ಮೂಲಕ ತೆರಳುವ ಟ್ರೆಕ್ಕಿಂಗ್ ಸ್ಥಳ ಹಾಗೂ ಬರ್ಣಕ, ಜೋಗಿ ಗುಂಡಿ ಸೇರಿದಂತೆ ಆಗುಂಬೆ ಸುತ್ತಮುತ್ತಲಿನ ಎಲ್ಲ ಜಲಪಾತಗಳಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಪಕ್ಷಿ, ಚಿಟ್ಟೆ ಪ್ರಿಯರು, ಛಾಯಾಚಿತ್ರಗ್ರಾಹಕರು ಸೇರಿದಂತೆ ಹೆಚ್ಚಿನ ಸಂಖ್ಯೆ ಯಲ್ಲಿ ಪ್ರವಾಸಿಗರು ಆಗಮಿಸುವ ಕೂಡ್ಲು ಜಲಪಾತಕ್ಕೆ ತೆರಳುವ ಪ್ರವೇಶ ದ್ವಾರದಲ್ಲಿ ತಾತ್ಕಾಲಿಕ ನಿಷೇಧದ ಫಲಕಗಳನ್ನು ಆಳವಡಿಸಲಾಗಿದೆ. ಮಂಗನ ಕಾಯಿಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾಡಿಗೆ ಪ್ರವೇಶ ನಿಷೇಧಿಸಲಾಗಿದೆ ಎಂಬ ಎಚ್ಚರಿಕೆ ಫಲಕವನ್ನು ಹೆಬ್ರಿ ಸೋಮೇಶ್ವರ ವನ್ಯಜೀವಿ ವಲಯ, ನಾಡ್ಪಾಲು ಮೇಗದ್ದೆ- ಕೂಡ್ಲು ಪರಿಸರ ಅಭಿವೃದ್ಧಿ ಸಮಿತಿಯು ಹಾಕಿದೆ.
ಅದೇ ರೀತಿ ಕುಂದಾಪುರ ತಾಲೂಕಿನ ಕೊಲ್ಲೂರು, ಅಮಾಸೆಬೈಲು, ಸಿದ್ಧಾಪುರ ವಲಯ ಅರಣ್ಯಾಧಿಕಾರಿ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಜಲಪಾತ ಹಾಗೂ ಕೊಡಚಾದ್ರಿ ಬೆಟ್ಟ ಸೇರಿದಂತೆ ವಿವಿಧ ಟ್ರೆಕ್ಕಿಂಗ್ ಸ್ಥಳಗಳಲ್ಲೂ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಈ ಎಲ್ಲ ಸ್ಥಳ ಗಳಿಗೆ ತೆರಳದಂತೆ ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ವೈರಾಣುಗಳಿಂದ ಹರಡುವ ಮಂಗನ ಕಾಯಿಲೆ ಮಾರಣಾಂತಿಕ ರೋಗವಾಗಿದ್ದು, ಸಾಮಾನ್ಯವಾಗಿ ಮಂಗನಿಂದ ಮಾನವನಿಗೆ ಉಣ್ಣಿಯಿಂದ ಹರಡುತ್ತದೆ. ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ಉಣ್ಣೆಯ ಹಾವಳಿ ಹೆಚ್ಚಾಗಿರುವುದರಿಂದ ಅತ್ಯವಶ್ಯಕ ಕೆಲಸಗಳ ಹೊರತಾಗಿ ಕಾಡಿಗೆ ಹೋಗದಂತೆ ಸೂಚಿಸಲಾಗಿದೆ. ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಲಸಿಕೆ ಇಲ್ಲದ ಕಾರಣ ಜನ ಸಾಮಾನ್ಯರು ಕಾಡಿಗೆ ಹೋಗುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಮಂಗಗಳಿಗೆ ಆಹಾರ ನೀಡುವುದನ್ನು ಕೂಡ ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆ ವನ್ಯಜೀವಿ ವಿಭಾಗವು ಫಲಕದಲ್ಲಿ ಪ್ರವಾಸಿಗರಿಗೆ ಮಾಹಿತಿಗಳನ್ನು ನೀಡಿದೆ.
ಮಂಗನ ಕಾಯಿಲೆ ಹಾಗೂ ಬೆಂಕಿಯ ಕಾರಣಕ್ಕಾಗಿ ಸದ್ಯಕ್ಕೆ ಪಶ್ಚಿಮ ಘಟ್ಟಗಳ ಲ್ಲಿರುವ ಪ್ರವಾಸಿ ತಾಣಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಅಲ್ಲದೆ ಟ್ರೆಕ್ಕಿಂಗ್ ಸ್ಥಳಗಳಿಗೂ ಪ್ರವಾಸಿಗರು ತೆರಳುವುದನ್ನು ನಿಲ್ಲಿಸಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕೊಡಚಾದ್ರಿ ಬೆಟ್ಟ ಸೇರಿದಂತೆ ಜಿಲ್ಲೆಯ ಪ್ರಮುಖ ಟ್ರೆಕ್ಕಿಂಗ್ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳನ್ನು ಆಳವಡಿಸಲಾಗಿದೆ. - ರುದ್ರನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ
ಮಂಗಗಳಿಗೆ ಆಹಾರ ನೀಡುವುದಕ್ಕೂ ನಿಷೇಧ
ಕೇವಲ ಪ್ರವಾಸಿ ತಾಣಗಳ ಪ್ರವೇಶ ಮಾತ್ರ ವಲ್ಲ ಅರಣ್ಯ ಪ್ರದೇಶಗಳ ದಾರಿಯಲ್ಲಿ ಸಿಗುವ ಮಂಗಗಳಿಗೆ ಆಹಾರ ನೀಡುವುದನ್ನು ಕೂಡ ಇಲಾಖೆ ತಾತ್ಕಾಲಿಕವಾಗಿ ನಿಷೇಧಿಸಿದೆ. ಆಗುಂಬೆ ಘಾಟಿಯಲ್ಲಿ ಸಿಗುವ ಸನ್‌ಸೆಟ್ ಪಾಯಿಂಟ್ ರಸ್ತೆಯಲ್ಲೇ ಸಿಗುವುದರಿಂದ ಅಲ್ಲಿಗೆ ಪ್ರವೇಶವನ್ನು ನಿಷೇಧಿಸಿಲ್ಲ. ಆದರೆ ಪ್ರವಾಸಿಗರು ಮಂಗಗಳಿಂದ ಆದಷ್ಟು ದೂರ ಇರಬೇಕು. ಅಲ್ಲಿ ಸಿಗುವ ಮಂಗಗಳಿಗೆ ಯಾವುದೇ ಆಹಾರಗಳನ್ನು ನೀಡಬಾರದೆಂದು ಸೂಚನೆ ನೀಡಲಾಗಿದೆ. ಈ ಸಂಬಂಧ ಆಗುಂಬೆ ಘಾಟಿಯಲ್ಲೂ ಫಲಕಗಳನ್ನು ಆಳವಡಿಸಲಾಗಿದೆ ಎಂದು ಹೆಬ್ರಿ ವಲಯ ಅರಣ್ಯಾಧಿಕಾರಿ(ವನ್ಯಜೀವಿ ವಿಭಾಗ) ವಾಣಿ ಹೆಗ್ಡೆ ತಿಳಿಸಿದ್ದಾರೆ.
ಮತ್ತೆ 3 ಮಂಗಗಳ ಕಳೇರ ಪತ್ತೆ
ಜಿಲ್ಲೆಯಲ್ಲಿ ಶನಿವಾರ ಮತ್ತೆ ಮೂರು ಸತ್ತ ಮಂಗಗಳ ಕಳೇಬರ ಪತ್ತೆಯಾಗಿದೆ. ಇದರೊಂದಿಗೆ ಜ.8ರ ಬಳಿಕ ಜಿಲ್ಲೆಯಲ್ಲಿ ಸತ್ತ ಮಂಗಗಳ ಸಂಖ್ಯೆ 78ಕ್ಕೇರಿದೆ. ಇಂದು ಉಡುಪಿ ತಾಲೂಕಿನ ಕೊಕ್ಕರ್ಣೆ, ಮಂದಾರ್ತಿ ಹಾಗೂ ಕುಂದಾಪುರ ತಾಲೂಕಿನ ಹಳ್ಳಿಹೊಳೆ ಎಳೆಬೇರು ಎಂಬಲ್ಲಿ ಈ ಕಳೇಬರ ಪತ್ತೆಯಾಗಿವೆ. ಅವುಗಳು ಸಂಪೂರ್ಣ ಕೊಳೆತು ಹೋಗಿದ್ದು, ಅವುಗಳ ಪೋಸ್ಟ್ ಮಾರ್ಟಂ ನಡೆಸದೇ ಸುಟ್ಟು ಹಾಕಲಾಗಿದೆಎಂದು ಮಂಗನಕಾಯಿಲೆ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಶುಕ್ರವಾರ ಮಣಿಪಾಲ ಪ್ರಯೋಗಾಲ ಯಕ್ಕೆ ಕಳುಹಿಸಲಾದ ಹಳ್ಳಿಹೊಳೆ ಕಬ್ಬಿನಾಲೆ ಮತ್ತು ಬ್ರಹ್ಮಾವರ ಹೇರೂರಿನ ಇಬ್ಬರು ರೋಗಿಗಳ ರಕ್ತದ ಸ್ಯಾಂಪಲ್‌ನಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾಗಿಲ್ಲ. ಇಂದು ಬೆಳ್ವೆ ಅಲ್ಬಾಡಿಯಿಂದ ರೋಗಿಯೊಬ್ಬರು ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದು, ಅವರ ರಕ್ತದ ಸ್ಯಾಂಪಲನ್ನು ಮಂಗನಕಾಯಿಲೆಗಾಗಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದವರು ತಿಳಿಸಿದರು.