ಅಸ್ಸಾಂನಲ್ಲಿ ವಿದೇಶೀಯರ ಸ್ಥಾನಬದ್ಧತೆ: ಮಾಹಿತಿ ಕೇಳಿದ ಸುಪ್ರೀಂ

Update: 2019-01-28 14:26 GMT

ಹೊಸದಿಲ್ಲಿ, ಜ.29: ಅಸ್ಸಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಾನಬದ್ಧತೆ ಕೇಂದ್ರಗಳೆಷ್ಟು ಮತ್ತು ಕಳೆದ 10 ವರ್ಷಗಳಲ್ಲಿ ಈ ಕೇಂದ್ರಗಳಲ್ಲಿ ಸ್ಥಾನಬದ್ಧತೆಯಲ್ಲಿರುವ ವಿದೇಶೀಯರು ಎಷ್ಟು ಮತ್ತು ಅವರ ಸಾಮಾಜಿಕ ಸ್ಥಾನಮಾನದ ಬಗ್ಗೆ ವಿವರ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಅಸ್ಸಾಂನಲ್ಲಿರುವ ಸ್ಥಾನಬದ್ಧತೆ ಕೇಂದ್ರ(ಸೂಕ್ತ ದಾಖಲೆಗಳಿಲ್ಲದೆ ದೇಶ ಪ್ರವೇಶಿಸುವ ವಿದೇಶಿಯರನ್ನು ಬಂಧನದಲ್ಲಿಡುವ ಸ್ಥಳ)ಗಳ ಪರಿಸ್ಥಿತಿ ಹಾಗೂ ಇಲ್ಲಿ ಸುದೀರ್ಘಾವಧಿಯಿಂದ ವಿದೇಶೀಯರನ್ನು ಬಂಧನಲ್ಲಿಟ್ಟಿರುವ ಕುರಿತು ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾ. ಸಂಜೀವ್ ಖನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.

ಅಲ್ಲದೆ ಸ್ಥಾನಬದ್ಧತೆ ಕೇಂದ್ರದಲ್ಲಿರುವವರಲ್ಲಿ ಇದುವರೆಗೆ ಎಷ್ಟು ಮಂದಿಯನ್ನು ವಿದೇಶೀಯರೆಂದು ಘೋಷಿಸಲಾಗಿದೆ, ಗಡೀಪಾರು ಆಗಿರುವವರೆಷ್ಟು ಎಂಬ ಕುರಿತೂ ಮಾಹಿತಿ ಒದಗಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ನ್ಯಾಯಾಲಯ ಸೂಚಿಸಿದೆ. ಕಳೆದ 10 ವರ್ಷಗಳಲ್ಲಿ ಪ್ರತೀ ವರ್ಷ ಎಷ್ಟು ಮಂದಿ ವಿದೇಶೀಯರು ಅಕ್ರಮ ಪ್ರವೇಶ ಮಾಡಿದ್ದಾರೆ ಎಂಬ ಬಗ್ಗೆಯೂ ವಿವರ ಕೇಳಿರುವ ನ್ಯಾಯಾಲಯ, ಮೂರು ವಾರಗಳೊಳಗೆ ಉತ್ತರಿಸುವಂತೆ ತಿಳಿಸಿ ಮುಂದಿನ ವಿಚಾರಣೆಯನ್ನು ಫೆ.19ಕ್ಕೆ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News