ಸರ್ದಾರ್ ಪಟೇಲ್ ಪ್ರತಿಮೆ ಬಳಿ ಆದಿವಾಸಿಗಳ ಬೃಹತ್ ಪ್ರತಿಭಟನೆ

Update: 2019-01-28 17:30 GMT

ಗಾಂಧೀನಗರ, ಜ.28: ಗುಜರಾತ್‌ನಲ್ಲಿ ಏಕತೆಯ ಪ್ರತಿಮೆ(ಪಟೇಲ್ ಪ್ರತಿಮೆ)ಯ ಸುತ್ತಮುತ್ತ ನಿರ್ಮಾಣ ಕಾರ್ಯವನ್ನು ವಿರೋಧಿಸಿ ರಾಜ್ಯದ ಆದಿವಾಸಿಗಳು ಸೋಮವಾರ ಕೆವಾಡಿಯಾದಿಂದ ನರ್ಮದಾ ಜಿಲ್ಲೆಯ ರಾಜ್‌ಪಿಪ್ಲದವರೆಗೆ (30 ಕಿ.ಮೀ. ದೂರ) ಕಾಲ್ನಡಿಗೆಯ ಜಾಥಾ ನಡೆಸಿ ಪ್ರತಿಭಟಿಸಿದರು.

ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಹೊಂದಿರುವ ಪಟೇಲ್ ಪ್ರತಿಮೆ ಇಲ್ಲಿ ಸ್ಥಾಪನೆಯಾದ ಸಂದರ್ಭದಲ್ಲೇ ತಮ್ಮ ಜಮೀನಿಗೆ ಬಹಳ ಹಾನಿಯಾಗಿದೆ. ಇದೀಗ ಈ ಪ್ರತಿಮೆಯಿರುವ ಸ್ಥಳವನ್ನು ಆಕರ್ಷಕ ಪ್ರವಾಸೀ ತಾಣವಾಗಿಸುವ ನಿಟ್ಟಿನಲ್ಲಿ ಪ್ರತಿಮೆಯ ಸುತ್ತಮುತ್ತ ತಮ್ಮ ರಾಜ್ಯದ ಅತಿಥಿಗೃಹಗಳನ್ನು ನಿರ್ಮಿಸುವಂತೆ ಕೇಂದ್ರ ಸರಕಾರ ಕರೆ ನೀಡಿದ್ದು ಇದರಿಂದ ತಮ್ಮ ಜಮೀನಿಗೆ ಇನ್ನಷ್ಟು ಹಾನಿಯಾಗಲಿದೆ ಎಂದು ಆದಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಹೊಸ ರಸ್ತೆ ನಿರ್ಮಿಸಲು ಹಲವು ಮರಗಳನ್ನು ಕಡಿಯಲಾಗಿದೆ. ಅತಿಥಿಗೃಹಗಳನ್ನು ನಿರ್ಮಿಸಲು ಅಲ್ಲಿದ್ದ ಆದಿವಾಸಿಗಳನ್ನು ಬಲವಂತದಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಇಲ್ಲಿ ಅತಿಥಿಗೃಹ ನಿರ್ಮಿಸುವುದನ್ನು ವಿರೋಧಿಸಿ ಕೆವಾಡಿಯಾ ಗ್ರಾಮಪಂಚಾಯತ್ ನಿರ್ಣಯ ಕೈಗೊಂಡಿದ್ದರೂ, ಹರ್ಯಾಣ ಸರಕಾರದ ಕಾರ್ಯಕ್ರಮವನ್ನು ರಾಜ್ಯ ಸರಕಾರ ಆಯೋಜಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ಪ್ರತಿಮೆಯ ಪರಿಸರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಹರ್ಯಾಣ ಭವನಕ್ಕೆ ಶಿಲಾನ್ಯಾಸದ ಸಮಾರಂಭದಲ್ಲಿ ಪೊಲೀಸರು ಹಾಗೂ ಆದಿವಾಸಿಗಳ ಮಧ್ಯೆ ಘರ್ಷಣೆ ನಡೆದಿತ್ತು. ಇಲ್ಲಿ ಇನ್ನಷ್ಟು ನಿರ್ಮಾಣ ಕಾಮಗಾರಿಗಳನ್ನು ಕೈಬಿಡಬೇಕು ಹಾಗೂ ಕಳೆದ ವಾರ ಹರ್ಯಾಣ ಭವನ ಶಿಲಾನ್ಯಾಸ ಸಮಾರಂಭದ ವೇಳೆ ಪ್ರತಿಭಟನೆ ನಡೆಸಿರುವ ಆದಿವಾಸಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಾಥಾದಲ್ಲಿ ಪಾಲ್ಗೊಂಡಿದ್ದ ಭಿಲಿಸ್ತಾನ್ ಟೈಗರ್ ಸೇನೆ, ಆದಿವಾಸಿ ಏಕತಾ ಪರಿಷದ್, ಸಮಸ್ತ ಆದಿವಾಸಿ ಸಮಾಜ, ಇಂಡಿಜೀನಸ್ ಆರ್ಮಿ ಆಫ್ ಇಂಡಿಯಾ, ರಾಯಲ್ ರಥ್ವಾ ಗ್ರೂಫ್, ಜಮೀನ್ ಆದಿವಾಸಿ ಬಚಾವೊ ಅಂದೋಲನ್ ಸಮಿತಿ, ಆದಿವಾಸಿ ಮಹಾಸಭಾ ಸಹಿತ ಹಲವು ಸಂಘಟನೆಗಳ ಸದಸ್ಯರು ನರ್ಮದಾ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದರು. ಏಕತೆಯ ಪ್ರತಿಮೆ ಇರುವ ಸ್ಥಳದಲ್ಲಿ ಈಗಾಗಲೇ ಗುಜರಾತ್ ಸರಕಾರ ಪಂಚತಾರಾ ಹೋಟೆಲ್‌ಗಳನ್ನು ನಿರ್ಮಿಸಿದೆ. ಅಲ್ಲದೆ ಜಲವಿಮಾನಗಳ ಹಾರಾಟಕ್ಕೆ ಅನುಕೂಲ ಮಾಡಿಕೊಡಲು ಸರ್ದಾರ್ ಸರೋವರ್ ಆಣೆಕಟ್ಟಿನ ಕೊಳದ ನೀರಿನಲ್ಲಿ ವಿಮಾನನಿಲ್ದಾಣ ನಿರ್ಮಿಸುವ ಯೋಜನೆಯನ್ನೂ ರೂಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News