ಪ್ರಧಾನಿ ಉಡುಗೊರೆಗಳ ಹರಾಜು: ಮರದ ಬೈಕ್ ಬಿಕರಿಯಾದ್ದು ಎಷ್ಟಕ್ಕೆ ಗೊತ್ತೇ ?

Update: 2019-01-29 03:45 GMT

ಹೊಸದಿಲ್ಲಿ, ಜ. 29: ರೈಲು ನಿಲ್ದಾಣದಲ್ಲಿ ನರೇಂದ್ರ ಮೋದಿ ಬ್ಯಾಗ್ ಹಿಡಿದು ನಿಂತಿರುವ ಕಲಾಕೃತಿಯೊಂದು 50 ಸಾವಿರ ರೂಪಾಯಿಗೆ ಹರಾಜಾಗಿದೆ.

ಅಂತೆಯೇ 40 ಸಾವಿರ ರೂಪಾಯಿ ಮೂಲಬೆಲೆಯ ವುಡನ್ ಬೈಕ್ 5 ಲಕ್ಷ ರೂಪಾಯಿಗೆ ಮಾರಾಟವಾಗಿವೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಕ್ಕಿದ ಉಡುಗೊರೆಗಳ ಹರಾಜು ಎರಡು ದಿನಗಳ ಕಾಲ ನಡೆಯುತ್ತಿದ್ದು, ಈ ಎರಡು ಉಡುಗೊರೆಗಳು ಗರಿಷ್ಠ ಮೌಲ್ಯಕ್ಕೆ ಹರಾಜಾಗಿವೆ ಎಂದು ಸಂಸ್ಕೃತಿ ಖಾತೆ ಸಚಿವ ಮಹೇಶ್ ಶರ್ಮಾ ಪ್ರಕಟಿಸಿದ್ದಾರೆ.

ಸೋಮವಾರ ನಡೆದ ಹರಾಜಿನಲ್ಲಿ, 1900 ವಸ್ತುಗಳ ಪೈಕಿ 270 ವಸ್ತುಗಳು ಮಾರಾಟವಾಗಿವೆ. ಉಳಿದ ವಸ್ತುಗಳ ಹರಾಜು ಇ-ಹರಾಜು ಪ್ರಕ್ರಿಯೆ ಮೂಲಕ ಮಾರಾಟವಾಗಲಿವೆ. ಆಸಕ್ತರು ವೆಬ್‌ಪೋರ್ಟೆಲ್ www.pmmementos.gov.in ಮೂಲಕ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. ಜನವರಿ 31ರ ವರೆಗೆ ಹರಾಜು ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ ಎಂದು ವಿವರಿಸಿದ್ದಾರೆ.

ಹರಾಜಿನ ಬಳಿಕ ಬಂದ ಹಣವನ್ನು ಗಂಗಾ ಸ್ವಚ್ಛತೆ ಕುರಿತ ನಮಾಮಿ ಗಂಗಾ ಯೋಜನೆಗೆ ನೀಡಲಾಗುವುದು ಎಂದು ಹೇಳಿದ್ದಾರೆ. ಸಾರ್ವಜನಿಕರಿಂದ ಈ ಹರಾಜಿಗೆ ಅದ್ಭುತ ಸ್ಪಂದನೆ ದೊರಕಿದ್ದು, 40 ಸಾವಿರ ರೂಪಾಯಿ ಮೂಲಬೆಲೆಯ ಮರದ ಬೈಕ್ 5 ಲಕ್ಷಕ್ಕೆ ಮಾರಾಟವಾಗಿರುವುದೇ ಇದನ್ನು ಬಿಂಬಿಸುತ್ತದೆ ಎಂದು ಶರ್ಮಾ ಹೇಳಿದ್ದಾರೆ.

ಅಂತೆಯೇ 10 ಸಾವಿರ ಮೂಲಬೆಲೆ ಹೊಂದಿದ್ದ ಸ್ವರ್ಣಮಂದಿರದ ಸ್ಮರಣಿಕೆ 3.5 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ಅಷ್ಟಮಂಗಲ ಕುರಿತ ಒಂದು ಫೋಟೊ ಫ್ರೇಮ್ 1500 ರೂಪಾಯಿ ಮುಖಬೆಲೆ ಹೊಂದಿತ್ತು. ಇದು 28 ಸಾವಿರ ರೂಪಾಯಿಗೆ ಮಾರಾಟವಾಗಿದೆ. 5 ಸಾವಿರ ರೂಪಾಯಿ ಮೂಲಬೆಲೆಯ ಲೋಹದ ಖಡ್ಗ ಒಂದು ಲಕ್ಷ ರೂಪಾಯಿಗೆ ಮಾರಾಟವಾಗಿದೆ. 10 ಸಾವಿರ ರೂಪಾಯಿ ಮೂಲಬೆಲೆ ಹೊಂದಿದ್ದ ಮಹಾತ್ಮ ಬಸವೇಶ್ವರರ ಪುತ್ಥಳಿ 70 ಸಾವಿರಕ್ಕೆ ಬಿಕರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News