ನಿರುದ್ಯೋಗ ವರದಿ ಬಿಡುಗಡೆ ಮಾಡದ ಕೇಂದ್ರ: ರಾಷ್ಟ್ರೀಯ ಅಂಕಿಅಂಶ ಆಯೋಗದ ಅಧ್ಯಕ್ಷ ರಾಜೀನಾಮೆ

Update: 2019-01-30 16:24 GMT

ಹೊಸದಿಲ್ಲಿ, ಜ.30: ದೇಶದಲ್ಲಿ ಉದ್ಯೋಗಿಗಳು ಮತ್ತು ನಿರುದ್ಯೋಗಿಗಳ ಪ್ರಮಾಣದ ಬಗ್ಗೆ ಮಾಹಿತಿ ನೀಡುವ ರಾಷ್ಟ್ರೀಯ ಅಂಕಿಅಂಶಗಳ ಆಯೋಗದ ವರದಿಯನ್ನು ಬಿಡುಗಡೆ ಮಾಡಲು ಕೇಂದ್ರ ಸರಕಾರ ಹಿಂಜರಿಯುತ್ತಿರುವುದನ್ನು ವಿರೋಧಿಸಿ ಆಯೋಗದಲ್ಲಿದ್ದ ಇಬ್ಬರು ಸರಕಾರೇತರ ಸದಸ್ಯರು ಪದತ್ಯಾಗ ಮಾಡಿದ್ದಾರೆ ಎಂದು ವರದಿಯಾಗಿದೆ.

ಚುನಾವಣಾ ವರ್ಷವಾಗಿರುವ ಕಾರಣ ಈ ವರದಿಯನ್ನು ಸದ್ಯಕ್ಕೆ ಮುಚ್ಚಿಡುವ ಸಾಧ್ಯತೆಯೇ ಹೆಚ್ಚಿದೆ . ಅಲ್ಲದೆ ಕಳೆದ ಕೆಲ ತಿಂಗಳಲ್ಲಿ ತಮ್ಮನ್ನು ನಿರ್ಲಕ್ಷ ಮಾಡಲಾಗುತ್ತಿದೆ. ತಮ್ಮ ವರದಿಯನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಸರಕಾರದ ನಿರ್ಧಾರಕ್ಕೆ ಅಸಮಾಧಾನ ಸೂಚಿಸಿರುವ ಆಯೋಗದ ಸದಸ್ಯರಾದ ಪಿಸಿ ಮೋಹನನ್ ಹಾಗೂ ಜೆವಿ ಮೀನಾಕ್ಷಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ ವರದಿಯನ್ನು ಆಯೋಗವು ಕಳೆದ ಡಿಸೆಂಬರ್‌ನಲ್ಲಿ ಅನುಮೋದಿಸಿದ್ದರೂ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬಕ್ಕೆ ಮೋಹನನ್ ಅತೃಪ್ತಿ ಸೂಚಿಸಿದ್ದಾರೆ. ಮೋಹನನ್ ಭಾರತೀಯ ಅಂಕಿಅಂಶ ಸಂಸ್ಥೆಯ ಮಾಜಿ ಸದಸ್ಯರಾಗಿದ್ದರೆ ಮೀನಾಕ್ಷಿ ‘ದಿಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್’ನಲ್ಲಿ ಉಪನ್ಯಾಸಕರಾಗಿದ್ದಾರೆ. ಮೋಹನನ್ ಅಂಕಿಅಂಶ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇವರಿಬ್ಬರ ಸೇವಾವಧಿ 2020ರ ಜೂನ್‌ವರೆಗಿತ್ತು.

ಈ ಮಧ್ಯೆ, ಅಸಮಾಧಾನ ದೂರಗೊಳಿಸಲು ಪ್ರಯತ್ನಿಸಿರುವ ಸರಕಾರ ಇಬ್ಬರು ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದೆ.

 ಆಯೋಗದಲ್ಲಿ 7 ಸದಸ್ಯರು ಇರಬೇಕಿದ್ದು ಒಟ್ಟು ಐದು ಸದಸ್ಯರು ರಾಜೀನಾಮೆ ನೀಡಿದಂತಾಗಿದೆ. ಇದೀಗ ಕೇವಲ ಇಬ್ಬರು ಸದಸ್ಯರು- ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರವೀಣ್ ಶ್ರೀವಾಸ್ತವ ಹಾಗೂ ನೀತಿ ಆಯೋಗದ ಅಮಿತಾಬ್ ಕಾಂತ್ ಮಾತ್ರ ಉಳಿದುಕೊಂಡಿದ್ದಾರೆ. ಸದಸ್ಯರ ಆಕ್ಷೇಪಣೆಯನ್ನು ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ನಿರಾಕರಿಸಿದ್ದು, ಇದೀಗ ತ್ರೈಮಾಸಿಕ ಅಂಕಿಅಂಶದ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು ಆ ಬಳಿಕ ವರದಿ ಬಿಡುಗಡೆಯಾಗುತ್ತದೆ ಎಂದು ತಿಳಿಸಿದೆ.

ಭಾರತದ ಜನಸಂಖ್ಯಾ ಬಲವನ್ನು ಹಾಗೂ ಉದ್ಯೋಗಿಗಳಲ್ಲಿ ಶೇ.93ರಷ್ಟು ಅನೌಪಚಾರಿಕ ವಲಯದವರು ಎಂಬುದನ್ನು ಗಮನದಲ್ಲಿಟ್ಟುಕೊಂಡು, ಆವರ್ತಕ ಸಮೀಕ್ಷೆಗಳು ಹಾಗೂ ಆಡಳಿತಾತ್ಮಕ ಅಂಕಿಅಂಶದ ಮೂಲಕ ಉದ್ಯೋಗ ಕ್ರಮವನ್ನು ಸುಧಾರಿಸುವುದಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ರಾಷ್ಟ್ರೀಯ ಅಂಕಿಅಂಶಗಳ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡಲು ಕೇಂದ್ರ ಸರಕಾರ ಬಯಸುತ್ತಿದೆ ಎಂದು ಕಳೆದ ವರ್ಷದ ಮೇ ತಿಂಗಳಲ್ಲಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕೇಂದ್ರ ಸರಕಾರ ಅಂಕಿ ಅಂಶಗಳನ್ನೂ ತನಗೆ ಬೇಕಿರುವಂತೆ ತಿರುಚುತ್ತಿದೆ ಎಂದು ವಿಪಕ್ಷಗಳು ಟೀಕಿಸುತ್ತಿವೆ.

ಕಳೆದ ನವೆಂಬರ್‌ನಲ್ಲಿ ನೀತಿ ಆಯೋಗವು, ಈ ಹಿಂದಿನ ಯುಪಿಎ ಸರಕಾರದ ಜಿಡಿಪಿ ಅಂಕಿಅಂಶವನ್ನು ಪರಿಷ್ಕರಿಸಿ ಪರಿಷ್ಕೃತ ಜಿಡಿಪಿ ಅಂಕಿಅಂಶವನ್ನು ಪ್ರಕಟಿಸಿತ್ತು. ಇದರಲ್ಲಿ ನಾಲ್ಕು ವರ್ಷದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಜಿಡಿಪಿ ಯುಪಿಎ ಸರಕಾರದ ಅವಧಿಯಲ್ಲಿ ಇದ್ದುದಕ್ಕಿಂತ ಅಧಿಕ ಎಂದು ತೋರಿಸಲಾಗಿದೆ. ಸರಕಾರ ಬಿಡುಗಡೆಗೊಳಿಸಿರುವ ನಿರುದ್ಯೋಗ ಪ್ರಮಾಣ, ಜಿಡಿಪಿ ಮುಂತಾದ ಅಂಕಿಅಂಶ ವಾಸ್ತವಾಂಶದ ನೈಜ ಚಿತ್ರಣವಾಗಿಲ್ಲ ಎಂದು ವಿಪಕ್ಷಗಳು ಟೀಕಿಸುತ್ತಾ ಬಂದಿವೆ. ಇದೀಗ ಸರಕಾರದ ಕಾರ್ಯವೈಖರಿಯಿಂದ ಬೇಸತ್ತು ರಾಷ್ಟ್ರೀಯ ಅಂಕಿ ಅಂಶ ಆಯೋಗದ 7 ಸದಸ್ಯರಲ್ಲಿ ಐವರು ರಾಜೀನಾಮೆ ನೀಡಿರುವುದು ಈ ಆರೋಪಗಳಿಗೆ ಪುಷ್ಟಿ ನೀಡಿದಂತಾಗಿದೆ.

ಚಿದಂಬರಂ ‘ಶೋಕ ಸಂದೇಶ’

 ರಾಷ್ಟ್ರೀಯ ಅಂಕಿ ಅಂಶ ಆಯೋಗದ ವಿಷಯದಲ್ಲಿ ಸರಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ಟೀಕಿಸಿ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಸರಣಿ ಟ್ವೀಟ್ ಮಾಡಿದ್ದಾರೆ. ಕಳಂಕರಹಿತ ಜಿಡಿಪಿ ಮತ್ತು ನಿರುದ್ಯೋಗ ಅಂಕಿಅಂಶ ಬಿಡುಗಡೆಗೆ ಉಗ್ರ ಹೋರಾಟ ನಡೆಸುತ್ತಾ ಮೃತಪಟ್ಟ ರಾಷ್ಟ್ರೀಯ ಅಂಕಿ ಅಂಶ ಆಯೋಗದ ನಿಧನಕ್ಕೆ ನಾವು ಸಂತಾಪ ವ್ಯಕ್ತಪಡಿಸುತ್ತಿದ್ದೇವೆ. ಸರಕಾರದ ದುರುದ್ದೇಶಪೂರಿತ ನಿರ್ಲಕ್ಷದ ಧೋರಣೆಯಿಂದಾಗಿ ಮತ್ತೊಂದು ಗೌರವಾನ್ವಿತ ಸಂಸ್ಥೆ 2019ರ ಜನವರಿ 29ರಂದು ಕೊನೆಯುಸಿರೆಳೆದಿದೆ ಎಂದು ಮಾಜಿ ವಿತ್ತ ಸಚಿವರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News