ಎಸ್ಸಿ, ಎಸ್ಟಿ ಕಾಯ್ದೆ ತಿದ್ದುಪಡಿ ತಡೆಯಾಜ್ಞೆಗೆ ಮತ್ತೆ ಸುಪ್ರೀಂ ನಕಾರ

Update: 2019-01-30 16:22 GMT

ಹೊಸದಿಲ್ಲಿ, ಜ.30: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶ ನೀಡದ ಅಂಶವನ್ನು ಮರುಸ್ಥಾಪಿಸಿದ ಎಸ್ಸಿ/ಎಸ್ಟಿ ಕಾಯ್ದೆ ತಿದ್ದುಪಡಿಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಮತ್ತೆ ನಿರಾಕರಿಸಿದೆ. ಈ ಪ್ರಕರಣದ ವಿಸ್ತೃತ ವಿಚಾರಣೆ ನಡೆಯಬೇಕಿರುವುದರಿಂದ ಫೆ.19ರಂದು ಪ್ರಕರಣದ ವಿಚಾರಣೆ ನಡೆಯುವುದು ಸೂಕ್ತ ಎಂದು ನ್ಯಾಯಮೂರ್ತಿ ಯುಯು ಲಲಿತ್ ಅವರಿದ್ದ ನ್ಯಾಯಪೀಠ ತಿಳಿಸಿದೆ.

ಕಾಯ್ದೆಗೆ ತಿದ್ದುಪಡಿ ನಡೆಸಿರುವುದನ್ನು ಪ್ರಶ್ನಿಸಿ ಹಿರಿಯ ವಕೀಲ ವಿಕಾಸ್ ಸಿಂಗ್ ಅರ್ಜಿ ಸಲ್ಲಿಸಿದ್ದು ತಿದ್ದುಪಡಿಗೆ ತಕ್ಷಣ ತಡೆಯಾಜ್ಞೆ ವಿಧಿಸಬೇಕೆಂದು ಕೋರಿದ್ದರು. ಎಸ್ಸಿ/ಎಸ್ಟಿ ಕಾಯ್ದೆ 2018ಕ್ಕೆ ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಹಾಗೂ ಕೇಂದ್ರ ಸರಕಾರದ ಪರಿಶೀಲನಾ ಅರ್ಜಿ ಎರಡನ್ನೂ ಒಟ್ಟಿಗೆ ಸೂಕ್ತ ಪೀಠವೊಂದರಲ್ಲಿ ಲಿಸ್ಟ್ ಮಾಡುವ ಬಗ್ಗೆ ಪರಿಗಣಿಸುತ್ತಿರುವುದಾಗಿ ಸುಪ್ರೀಂಕೋರ್ಟ್ ಜನವರಿ 25ರಂದು ತಿಳಿಸಿದೆ. ಎಸ್ಸಿ/ಎಸ್ಟಿ ಕಾಯ್ದೆಯನ್ನು ದುರುಪಯೋಗಿಸಿಕೊಂಡು ಸುಳ್ಳು ದೂರು ದಾಖಲಿಸುವ ಹಲವು ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ, ಈ ಕಾಯ್ದೆಯಡಿ ದೂರು ದಾಖಲಾಗಿರುವ ಆರೋಪಿಗಳಿಗೆ ತಕ್ಷಣ ಬಂಧನದಿಂದ ವಿನಾಯಿತಿ ನೀಡಬೇಕು. ಅವರಿಗೆ ನಿರೀಕ್ಷಣಾ ಜಾಮೀನು ಪಡೆಯುವ ಅವಕಾಶ ಇರಬೇಕು ಎಂದು 2018ರ ಮಾರ್ಚ್ 20ರಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು.

ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಎಸ್ಸಿ/ಎಸ್ಟಿ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ನಿರ್ಣಯಿಸಲಾಗಿದ್ದು, ಅದರಂತೆ ನಿರೀಕ್ಷಣಾ ಜಾಮೀನು ಪಡೆಯುವ ಅವಕಾಶವನ್ನು ರದ್ದುಗೊಳಿಸಲಾಗಿತ್ತು.

ಆದರೆ ಸರಕಾರದ ಈ ಕ್ರಮದಿಂದ ಅಮಾಯಕರಿಗೆ ನಿರೀಕ್ಷಣಾ ಜಾಮೀನು ಪಡೆಯುವ ಅವಕಾಶ ರದ್ದುಗೊಳಿಸಲಾಗಿದೆ. ಆದ್ದರಿಂದ ತಿದ್ದುಪಡಿ ಕಾಯ್ದೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News