ಅತ್ಯಾಚಾರ ಆರೋಪಿ ಅಸಾರಾಂ ಆಶ್ರಮದ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಬಿಜೆಪಿ ಸಚಿವ !

Update: 2019-01-30 17:22 GMT

ಗಾಂಧೀನಗರ, ಜ.30: ಅತ್ಯಾಚಾರ ಪ್ರಕರಣದಲ್ಲಿ ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ 2018ರಿಂದ ಜೈಲಿನಲ್ಲಿರುವ ಅಸಾರಾಂ ನಡೆಸುತ್ತಿರುವ ಯೋಗ ಆಶ್ರಮದ ಕಾರ್ಯಕ್ರಮಕ್ಕೆ ಗುಜರಾತ್‌ನ ಬಿಜೆಪಿ ಸಚಿವ ಶುಭ ಹಾರೈಸಿರುವುದು ವಿವಾದಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಫೆಬ್ರವರಿ 14ನ್ನು ಪ್ರೇಮಿಗಳ ದಿನ ಎಂದು ಆಚರಿಸಲಾಗುತ್ತದೆ. ಆದರೆ ಅಹ್ಮದಾಬಾದ್‌ನ ಸಾಬರಮತಿ ಪ್ರದೇಶದಲ್ಲಿರುವ ಅಸಾರಾಂನ ಆಶ್ರಮದಲ್ಲಿರುವ ವೇದಾಂತ ಸಮಿತಿಯು ಫೆ.14ರ ದಿನವನ್ನು ‘ಮಾತೃ-ಪಿತೃ ಪೂಜನ ದಿನ’ ಎಂದು ಆಚರಿಸುತ್ತಿದೆ. ಇತ್ತೀಚೆಗೆ ಈ ಆಶ್ರಮದಲ್ಲಿ ಮಾಟ ಮಂತ್ರದ ಹೆಸರಲ್ಲಿ ಇಬ್ಬರು ವಿದ್ಯಾರ್ಥಿಗಳ ಹತ್ಯೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮಾತೃ-ಪಿತೃ ಪೂಜನ ಕಾರ್ಯಕ್ರಮವು ಮಾತಾಪಿತರನ್ನು ಗೌರವಿಸುವ ಸಂಪ್ರದಾಯವನ್ನು ಮಕ್ಕಳಲ್ಲಿ ಮೂಡಿಸಲು ಸಹಕಾರಿಯಾಗಿದೆ. ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನಾರ್ಹ. ಈ ಕಾರ್ಯಕ್ರಮ ಯಶಸ್ವಿಯಾಗಲಿ ಮತ್ತು ಮಕ್ಕಳು ತಂದೆ ತಾಯಿಯ ಮಹತ್ವವನ್ನು ಅರಿತು ಅವರನ್ನು ಗೌರವಿಸುವಂತಾಗಲಿ ಎಂದು ಗುಜರಾತ್‌ನ ಶಿಕ್ಷಣ ಸಚಿವ ಭೂಪೇಂದ್ರಸಿನ್ಹ ಚುಡಾಸಾಮ ಅಭಿನಂದನಾ ಸಂದೇಶದಲ್ಲಿ ಹಾರೈಸಿದ್ದಾರೆ.

ಆದರೆ ಈ ಬಗ್ಗೆ ವ್ಯಾಪಕ ಟೀಕೆ ಕೇಳಿಬಂದಿದೆ. ಅಸಾರಾಂನಂತಹ ಕುಖ್ಯಾತ ಕ್ರಿಮಿನಲ್‌ನನ್ನು ರಾಜ್ಯದ ಶಿಕ್ಷಣ ಸಚಿವರು ಶ್ಲಾಘಿಸಿರುವುದು ದುರದೃಷ್ಟಕರ. ಇದು ಬಿಜೆಪಿ ಮತ್ತು ಸ್ವಯಂಘೋಷಿತ ದೇವಮಾನವನ ನಡುವಿರುವ ಸಂಬಂಧಕ್ಕೆ ದೃಷ್ಟಾಂತವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಆದರೆ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಸಚಿವ ಚುಡಾಸಾಮ, ನಾನು ಕಾರ್ಯಕ್ರಮಕ್ಕೆ ಶುಭ ಹಾರೈಸುವ ಸಂದೇಶ ಕಳುಹಿಸಿದ್ದೇನೆ. ಆಶ್ರಮದ ವಿವಾದಕ್ಕೂ ನನಗೂ ಸಂಬಂಧವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News