ಉಪ ಚುನಾವಣೆ: ಜಿಂದ್ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿ ಬಿಜೆಪಿಗೆ ಜಯ

Update: 2019-01-31 11:12 GMT

ಜಿಂದ್(ಹರ್ಯಾಣ), ಜ.31: ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ಕೃಷ್ಣ ಮಿಧಾ ಹರ್ಯಾಣದ ಜಿಂದ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಜನ್‌ನಾಯಕ್ ಜನತಾ ಪಾರ್ಟಿ(ಜೆಜೆಪಿ)ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಚೌಟಾಲಾರನ್ನು 12,935 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಪಕ್ಷ ರಾಜಸ್ಥಾನದ ರಾಮಗಢ ಅಸೆಂಬ್ಲಿ ಚುನಾವಣೆಯಲ್ಲಿ ಜಯ ದಾಖಲಿಸಿ 200 ಸದಸ್ಯರನ್ನು ಒಳಗೊಂಡ ವಿಧಾನಸಭೆಯಲ್ಲಿ ಒಟ್ಟು 100 ಸೀಟುಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಶಾಫಿಯಾ ಖಾನ್ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಸುಖ್‌ವಂತ್ ಸಿಂಗ್‌ರನ್ನು 12,228 ಮತಗಳಿಂದ ಸೋಲಿಸಿದ್ದಾರೆ.

ಆಯುರ್ವೇದ ಔಷಧ ಶಾಸ್ತ್ರದಲ್ಲಿ ಪದವಿ ಪಡೆದಿರುವ ಕೃಷ್ಣ ಮಿಧಾ ಒಟ್ಟು 50,566 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಜೆಜೆಪಿಯ ದಿಗ್ವಿಜಯ್ 37,631 ಮತಗಳನ್ನು ಪಡೆದರು. ಇದೇ ಮೊದಲ ಬಾರಿ ಬಿಜೆಪಿ ಜಿಂದ್ ಅಸೆಂಬ್ಲಿ ಕ್ಷೇತ್ರವನ್ನು ಗೆದ್ದುಕೊಂಡಿದೆ. ಈ ಹಿಂದೆ ಐಎನ್‌ಎಲ್‌ಡಿ ಅಥವಾ ಕಾಂಗ್ರೆಸ್ ಪಕ್ಷಗಳು ಈ ಕ್ಷೇತ್ರವನ್ನು ಗೆಲ್ಲುತ್ತಾ ಬಂದಿವೆ.

ಈ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಆಘಾತ ತಂದಿದೆ. ಕಣದಲ್ಲಿದ್ದ ಕಾಂಗ್ರೆಸ್ ವಕ್ತಾರ ಹಾಗೂ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಒಟ್ಟು 24,740 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಹರ್ಯಾಣದ ವಿಪಕ್ಷ ಐಎನ್‌ಎಲ್‌ಡಿ ಅಭ್ಯರ್ಥಿ ಉಮೇದ್ ರೆಧು ಕೇವಲ 3,454 ಮತಗಳನ್ನು ಪಡೆದಿದ್ದಾರೆ.

ಜಿಂದ್ ಉಪ ಚುನಾವಣೆ ಜ.28 ರಂದು ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News