ಎಪ್ರಿಲ್ 1ರಿಂದ ಆದಾಯ ತೆರಿಗೆ ರಿಯಾಯಿತಿ : ಸುಶೀಲ್‌ ಚಂದ್ರ

Update: 2019-02-01 17:51 GMT

ಹೊಸದಿಲ್ಲಿ, ಫೆ.1: ಕೇಂದ್ರ ಸರಕಾರದ 2019-20ರ ಬಜೆಟ್‌ನಲ್ಲಿ ಘೋಷಿಸಿದ ವಾರ್ಷಿಕ 5 ಲಕ್ಷ ರೂ.ವರೆಗಿನ ಆದಾಯ ಇರುವವರಿಗೆ 12,500 ರೂ. ಆದಾಯ ತೆರಿಗೆ ರಿಯಾಯಿತಿಯನ್ನು ಮುಂದಿನ ಆರ್ಥಿಕ ವರ್ಷದ ಪ್ರಾರಂಭದ ದಿನವಾಗಿರುವ ಎಪ್ರಿಲ್ 1ರಿಂದ ನೀಡಲಾಗುತ್ತದೆ ಎಂದು ಸಿಬಿಡಿಟಿ ಅಧ್ಯಕ್ಷ ಸುಶೀಲ್‌ಚಂದ್ರ ತಿಳಿಸಿದ್ದಾರೆ.

ವಾರ್ಷಿಕವಾಗಿ 5 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಹಳೆಯ ತೆರಿಗೆ ದರವೇ ಅನ್ವಯಿಸುತ್ತದೆ. ಅಲ್ಲದೆ ವಾರ್ಷಿಕವಾಗಿ 6.5 ಲಕ್ಷ ರೂ. ತೆರಿಗೆಗೆ ಅರ್ಹವಾದ ಆದಾಯ ಹೊಂದಿರುವವರೂ 1.5 ಲಕ್ಷ ರೂ.ಗಳನ್ನು ನಿರ್ದಿಷ್ಟ ಹೂಡಿಕೆಗಳಲ್ಲಿ (ಪಿಪಿಎಫ್, ಜಿಪಿಎಫ್, ವಿಮಾ ಪಾಲಿಸಿ) ವಿನಿಯೋಗಿಸಿದರೆ ಅವರೂ ತೆರಿಗೆ ವಿನಾಯಿತಿ ಲಾಭ ಪಡೆಯಬಹುದು ಎಂದು ‘ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್(ಸಿಬಿಡಿಟಿ) ಅಧ್ಯಕ್ಷರು ತಿಳಿಸಿದ್ದಾರೆ.

ಈಗಿರುವ ನಿಯಮದ ಪ್ರಕಾರ 5 ಲಕ್ಷ ರೂ. ಆದಾಯಕ್ಕೆ 12,500 ರೂ. ತೆರಿಗೆ ಪಾವತಿಸಬೇಕು. ಈಗ 5 ಲಕ್ಷ ರೂ. ಆದಾಯ ಉಲ್ಲೇಖಿಸಿ ತೆರಿಗೆ ರಿಟರ್ನ್ಸ್ ಸಲ್ಲಿಸಿದವರಿಗೆ 12,500 ರೂ. ತೆರಿಗೆ ವಿನಾಯಿತಿ ದೊರಕುತ್ತದೆ. ತೆರಿಗೆ ಪಾವತಿ ಆದಾಯ 5 ಲಕ್ಷ ರೂ. ಇದ್ದವರಿಗೆ ಸರಕಾರ ಘೋಷಿಸಿದ ಯೋಜನೆಯ ಲಾಭ ದೊರಕುತ್ತದೆ ಎಂದು ಸುಶೀಲ್‌ಚಂದ್ರ ತಿಳಿಸಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಧ್ಯಂತರ ಬಜೆಟ್‌ಗೆ ಅನುಮೋದನೆ ದೊರೆತ ಬಳಿಕ ಈ ಪ್ರಸ್ತಾವನೆಯನ್ನು ಎಪ್ರಿಲ್ 1ರಿಂದ ಅನ್ವಯಿಸಲಾಗುತ್ತದೆ. ಇದರಿಂದ ಮೂರು ಕೋಟಿ ಜನತೆಗೆ ಪ್ರಯೋಜನವಾಗಲಿದ್ದು 18,500 ಕೋಟಿ ರೂ. ಆದಾಯ ಬಿಟ್ಟುಕೊಡಬೇಕಾಗುತ್ತದೆ. ವೇತನ ಪಡೆಯುವ ಉದ್ಯೋಗಿಗಳಿಗೆ ಸ್ಟಾಂಡರ್ಡ್ ಡಿಡಕ್ಷನ್ ರೂಪದಲ್ಲಿ ಹೆಚ್ಚುವರಿ 10 ಸಾವಿರ ರೂ.ಗಳ ಲಾಭ ದೊರೆಯಲಿದೆ. ಎರಡೂ ವರ್ಗದ ಜನತೆ ತಮಗೆ ದೊರೆತ ಲಾಭವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸುಶೀಲ್‌ಚಂದ್ರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News