ಉ. ಕೊರಿಯದ ಸಾಮಗ್ರಿಗಳಿಂದ ತಯಾರಿಸಿದ ಕೃತಕ ಕಣ್ಣುರೆಪ್ಪೆಗಳ ಆಮದು: ಅಮೆರಿಕದ ಕಂಪೆನಿಗೆ 7 ಕೋಟಿ ರೂ. ದಂಡ
ಲಾಸ್ ಏಂಜಲಿಸ್, ಫೆ. 2: ಉತ್ತರ ಕೊರಿಯದಿಂದ ಪಡೆಯಲಾದ ವಸ್ತುಗಳನ್ನು ಬಳಸಿ ತಯಾರಿಸಲಾದ ಕೃತಕ ಕಣ್ಣುರೆಪ್ಪೆಗಳನ್ನು ಆಮದು ಮಾಡಿರುವುದಕ್ಕಾಗಿ ಒಂದು ಮಿಲಿಯ ಡಾಲರ್ (ಸುಮಾರು 7.15 ಕೋಟಿ ರೂಪಾಯಿ) ದಂಡ ಪಾವತಿಸಲು ಕ್ಯಾಲಿಫೋರ್ನಿಯದ ಕಂಪೆನಿ ‘ಇ.ಎಲ್.ಎಫ್. ಕಾಸ್ಮೆಟಿಕ್ಸ್’ ಒಪ್ಪಿಕೊಂಡಿದೆ ಎಂದು ಅಮೆರಿಕದ ಖಜಾನೆ ಇಲಾಖೆ ಪ್ರಕಟಿಸಿದೆ.
ಚೀನಾದ ಎರಡು ಪೂರೈಕೆದಾರರಿಂದ ಕಂಪೆನಿಯು 2012 ಮತ್ತು 2017ರ ನಡುವೆ 156 ಹಡಗು ಕೃತಕ ಕಣ್ಣುರೆಪ್ಪೆ ಕಿಟ್‌ಗಳನ್ನು ಆಮದು ಮಾಡಿಕೊಂಡಿತ್ತು. ಆ ಕೃತಕ ಕಣ್ಣುರೆಪ್ಪೆಗಳಲ್ಲಿ ಬಳಸಲಾದ ಕೆಲವು ಸಾಮಗ್ರಿಗಳನ್ನು ಚೀನಾದ ಕಂಪೆನಿಗಳು ಉತ್ತರ ಕೊರಿಯದಿಂದ ಪಡೆದುಕೊಂಡಿದ್ದವು ಎಂದು ಖಜಾನೆ ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಚೀನಾದ ಕಂಪೆನಿಗಳು ಪೂರೈಸಿರುವ ಕೃತಕ ಕಣ್ಣು ರೆಪ್ಪೆ ಕಿಟ್‌ಗಳ ಪೈಕಿ ಸುಮಾರು 80 ಶೇಕಡ ಕಣ್ಣು ರೆಪ್ಪೆಗಳಲ್ಲಿ ಉತ್ತರ ಕೊರಿಯದ ಸಾಮಗ್ರಿಗಳಿವೆ ಎನ್ನುವುದನ್ನು ಪತ್ತೆಹಚ್ಚಲು ಇ.ಎಲ್.ಎಫ್.ಗೆ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ’’ ಎಂದು ಅದು ಹೇಳಿದೆ.