ಹೆಬ್ರಾನ್ ‌ನಲ್ಲಿ ಅಂತರ್‌ ರಾಷ್ಟ್ರೀಯ ನಿಗಾ ಗುಂಪಿಗೆ ನಿಷೇಧ: ಟರ್ಕಿ ಪ್ರಬಲ ಖಂಡನೆ

Update: 2019-02-02 15:55 GMT

ಇಸ್ತಾಂಬುಲ್, ಫೆ. 2: ಆಕ್ರಮಿತ ಪಶ್ಚಿಮ ಬ್ಯಾಂಕ್‌ನ ನಗರ ಹೆಬ್ರಾನ್‌ನಲ್ಲಿರುವ ಅಂತಾರಾಷ್ಟ್ರೀಯ ನಿಗಾ ಗುಂಪೊಂದರ ಉಪಸ್ಥಿತಿಯನ್ನು ನವೀಕರಿಸದಿರಲು ಇಸ್ರೇಲ್ ತೆಗೆದುಕೊಂಡಿರುವ ನಿರ್ಧಾರವನ್ನು ಟರ್ಕಿ ‘ಬಲವಾಗಿ’ ಖಂಡಿಸಿದೆ.

‘‘‘ಟೆಂಪರರಿ ಇಂಟರ್‌ನ್ಯಾಶನಲ್ ಪ್ರೆಸೆನ್ಸ್ ಇನ್ ಹೆಬ್ರಾನ್’ (ಟಿಐಪಿಎಚ್)ಗೆ ನೀಡಲಾಗಿರುವ ಉಪಸ್ಥಿತಿ ಅನುಮೋದನೆಯನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿರುವುದಕ್ಕಾಗಿ ನಾವು ಇಸ್ರೇಲನ್ನು ಪ್ರಬಲವಾಗಿ ಖಂಡಿಸುತ್ತೇವೆ. ಈ ರಾಜಕೀಯ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ’’ ಎಂದು ಟರ್ಕಿಯ ವಿದೇಶ ಸಚಿವಾಲಯವು ಶುಕ್ರವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

1994ರಲ್ಲಿ ನಡೆದ ಫೆಲೆಸ್ತೀನಿಯರ ಹತ್ಯಾಕಾಂಡದ ಬಳಿಕ ಟಿಐಪಿಎಚ್‌ನ್ನು ಸ್ಥಾಪಿಸಲಾಗಿತ್ತು.

ಟಿಐಪಿಎಚ್ ಪಕ್ಷಪಾತಪೂರಿತವಾಗಿದೆ ಎಂದು ಆರೋಪಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅದರ ಉಪಸ್ಥಿತಿಯನ್ನು ನಾನು ವಿಸ್ತರಿಸುವುದಿಲ್ಲ ಎಂದು ಸೋಮವಾರ ಹೇಳಿದ್ದರು.

ಆದರೆ, ಇಸ್ರೇಲ್‌ನ ಆರೋಪವನ್ನು ಟರ್ಕಿ ತಳ್ಳಿ ಹಾಕಿದೆ.

‘‘ಟಿಐಪಿಎಚ್ ಇಸ್ರೇಲ್ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂಬ ಆರೋಪವನ್ನು ನಾವು ನಿರ್ಣಾಯಕವಾಗಿ ವಿರೋಧಿಸುತ್ತೇವೆ. ತನ್ನ ನಿರ್ಧಾರಕ್ಕೆ ಸಮರ್ಥನೆಯಾಗಿ ಇಸ್ರೇಲ್ ಈ ಕಾರಣವನ್ನು ಬಳಸುತ್ತಿದೆ’’ ಎಂದು ಟರ್ಕಿ ಹೇಳಿದೆ.

ಇಸ್ರೇಲ್‌ನ ನಿರ್ಧಾರದ ಬಗ್ಗೆ ಫೆಲೆಸ್ತೀನ್ ಮತ್ತು ಐರೋಪ್ಯ ಅಧಿಕಾರಿಗಳೂ ಕಳವಳ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News