5ನೇ ದಿನ ಪ್ರವೇಶಿಸಿದ ಹಜಾರೆ ನಿರಶನ: ರೈತರಿಂದ ರಾಜ್ಯ ಹೆದ್ದಾರಿಯಲ್ಲಿ ತಡೆ

Update: 2019-02-03 14:33 GMT

ರಾಲೆಗಣ ಸಿದ್ಧಿ(ಮಹಾರಾಷ್ಟ್ರ),ಫೆ.3: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಕೇಂದ್ರದಲ್ಲಿ ಲೋಕಪಾಲ ಮತ್ತು ಮಹಾರಾಷ್ಟ್ರದಲ್ಲಿ ಲೋಕಾಯುಕ್ತರನ್ನು ನೇಮಿಸಬೇಕು ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬ ಬೇಡಿಕೆಗಳೊಂದಿಗೆ ಕೈಗೊಂಡಿರುವ ಅನಿರ್ದಿಷ್ಟಾವಧಿ ನಿರಶನ ಸತ್ಯಾಗ್ರಹವು ರವಿವಾರ ಐದನೇ ದಿನಕ್ಕೆ ಕಾಲಿರಿಸಿದೆ. ಇದೇ ವೇಳೆ ಅವರನ್ನು ಬೆಂಬಲಿಸಿ ಗ್ರಾಮಸ್ಥರು ರಾಜ್ಯ ಹೆದ್ದಾರಿಯಲ್ಲಿ ತಡೆಗಳನ್ನೊಡ್ಡಿದ್ದು,ವಾಹನಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು.

81ರ ಹರೆಯದ ಹಝಾರೆ ತನ್ನ ಸ್ವಗ್ರಾಮವಾಗಿರುವ ಇಲ್ಲಿ ಕಳೆದ ಬುಧವಾರ ನಿರಶನವನ್ನಾರಂಭಿಸಿದ್ದರು.

ಇಲ್ಲಿಂದ 38 ಕಿ.ಮೀ.ದೂರದ ಪಾರ್ನೇರ್ ತಾಲೂಕಿನ ಸುಪಾ ಗ್ರಾಮದಲ್ಲಿ ಬೆಳಿಗ್ಗೆ ರೈತರು ಮತ್ತು ಯುವಜನರು ಹಝಾರೆಯವರನ್ನು ಬೆಂಬಲಿಸಿ ರಾಜ್ಯ ಹೆದ್ದಾರಿಯನ್ನು ತಡೆದ ಬಳಿಕ ಎರಡೂ ಕಡೆಗಳಲ್ಲಿ ಸುಮಾರು ಆರು ಕಿ.ಮೀ.ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ತಡೆಯನ್ನು ತೆರವುಗೊಳಿಸಲು ತಾವು ನಡೆಸಿದ ಸಂಧಾನ ವಿಫಲಗೊಂಡ ಬಳಿಕ ಮಧ್ಯಾಹ್ನ ಸುಮಾರು 110 ಪ್ರತಿಭಟನಾಕಾರರನ್ನು ತಮ್ಮ ವಶಕ್ಕೆ ಪಡೆದಿದ್ದ ಪೊಲೀಸರು ಬಳಿಕ ಅವರನ್ನು ಬಿಡುಗಡೆಗೊಳಿಸಿದ್ದಾರೆ.

ಬೆಳಿಗ್ಗೆ ಹಝಾರೆಯವರ ವೈದ್ಯಕೀಯ ತಪಾಸಣೆಯನ್ನು ನಡೆಸಿದ ಡಾ.ಧನಂಜಯ ಪೋತೆ ಅವರು,ಕಳೆದ ಐದು ದಿನಗಳಲ್ಲಿ ಅವರ ದೇಹತೂಕ ಸುಮಾರು 3.5 ಕೆ.ಜಿ.ಕಡಿಮೆಯಾಗಿದೆ. ರಕ್ತದೊತ್ತಡ,ರಕ್ತದಲ್ಲಿ ಸಕ್ಕರೆ ಮತ್ತು ಮೂತ್ರದಲ್ಲಿ ಕ್ರಿಯಾಟಿನೈನ್ ಮಟ್ಟಗಳು ಹೆಚ್ಚಿವೆ ಎಂದು ತಿಳಿಸಿದರು.

ಹಜಾರೆಯವರ ಸತ್ಯಾಗ್ರಹವನ್ನು ಬೆಂಬಲಿಸಿ ಸುಮಾರು 5,000 ರೈತರು ಸೋಮವಾರ ಅಹ್ಮದ್‌ನಗರ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಲಿದ್ದು,ಶನಿವಾರ ರಾತ್ರ್ತಿ ಇಲ್ಲಿ ನಡೆದ ಗ್ರಾಮಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಅಹಿಂಸಾತ್ಮಕವಾಗಿ ಪ್ರತಿಭಟನೆಯನ್ನು ನಡೆಸುವಂತೆ ಮತ್ತು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಾಗ ಸಭ್ಯ ಮತ್ತು ಗೌರವಯುತ ಭಾಷೆಯನ್ನು ಬಳಸುವಂತೆ ಹಝಾರೆ ತನ್ನ ಬೆಂಬಲಿಗರನ್ನು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News