ಅಂಬಾನಿಗೆ 30,000 ಕೋಟಿ ರೂ. ನೀಡಿದ ಮೋದಿ ರೈತರಿಗೆ ನೀಡಿದ್ದು 17 ರೂ.: ರಾಹುಲ್ ಗಾಂಧಿ

Update: 2019-02-03 16:52 GMT

ಪಾಟ್ನಾ,ಫೆ.3: ಪ್ರಧಾನಿ ಮೋದಿ ಅನಿಲ್ ಅಂಬಾನಿಗೆ ನೀಡಿರುವ ಹಣ ಮೂರು ಎಂನರೆಗಾ ಯೋಜನೆಗಳ ನಿಧಿಗೆ ಸಾಕಾಗುವಷ್ಟಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಎಲ್ಲರಿಗೂ ಗೊತ್ತು ಕಾವಲುಗಾರನೇ ಕಳ್ಳನಾಗಿದ್ದಾನೆ ಎಂದು ಅವರು ಇದೇ ವೇಳೆ ವ್ಯಂಗ್ಯವಾಡಿರುವುದಾಗಿ ಆಂಗ್ಲ ಮಾಧ್ಯಮ ವರದಿ ಮಾಡಿದೆ.

ರವಿವಾರ ಬಿಹಾರದ ಪಾಟ್ನಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣಾ ಭರವಸೆಯನ್ನು ಈಡೇರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲವಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯ ನಂತರ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಭಾರತದ ಪ್ರತಿ ಬಡವರಿಗೆ ನಿಶ್ಚಿತ ಕನಿಷ್ಟ ಆದಾಯವನ್ನು ನೀಡುವುದಾಗಿ ಇದೇ ವೇಳೆ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ, ರಾಷ್ಟ್ರೀಯ ಜನತಾದಳ, ರಾಷ್ಟ್ರೀಯ ಲೋಕದಳ ಸಮತಾ ಪಕ್ಷ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ ಮೈತ್ರಿಯ ಭಾಗವಾಗಿದೆ. ಇತ್ತೀಚಿನ ಬಜೆಟ್‌ನಲ್ಲಿ ರೈತರಿಗಾಗಿ ಐತಿಹಾಸಿಕ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಬಿಜೆಪಿ ಹೇಳಿಕೊಂಡಿದೆ. ರೈತರಿಗೆ ದಿನಕ್ಕೆ 17 ರೂ. ನೀಡುವುದು ಅವರಿಗೆ ಐತಿಹಾಸಿಕವಾಗಿರಬಹುದು. ಹಾಗಾದರೆ, ಅಂಬಾನಿಗೆ 30,000 ಕೋಟಿ ರೂ. ನೀಡಿರುವುದು, ಮೆಹುಲ್ ಚೋಕ್ಸಿಗೆ 35,000 ಕೋಟಿ ರೂ. ಮತ್ತು ನೀರವ್ ಮೋದಿಗೆ 30,000 ಕೋಟಿ ರೂ. ನೀಡಿರುವುದು ಏನು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಉದ್ಯೋಗ ನೀಡುವ ಬಿಜೆಪಿಯ ಭರವಸೆಯನ್ನು ಟೀಕಿಸಿದ ಗಾಂಧಿ, ಬಿಹಾರದ ಯುವಜನತೆ ಉದ್ಯೋಗಕ್ಕಾಗಿ ದೇಶಾದ್ಯಂತ ಅಲೆದಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಬಿಹಾರದ ಯಾವುದೇ ಗ್ರಾಮಕ್ಕೆ ತೆರಳಿ ಅಲ್ಲಿನ ಯುವಕರು ಏನು ಮಾಡುತ್ತಿದ್ದಾರೆ ಎಂದು ಕೇಳಿ. ನಾವು ಉದ್ಯೋಗ ಹುಡುಕುತ್ತಿದ್ದೇವೆ ಎಂದು ಅವರಿಂದ ಉತ್ತರ ಬರುತ್ತದೆ. ಉದ್ಯೋಗವನ್ನು ಅರಸಿ ಬಿಹಾರದ ಯುವಕರು ಮೋದಿಯ ಗುಜರಾತ್‌ಗೆ ಹೋದರೆ ಅಲ್ಲಿಂದ ಅವರನ್ನು ಹೊಡೆದು ಓಡಿಸಲಾಗುತ್ತದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News