ಪತ್ರಕರ್ತನಿಗೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರು

Update: 2019-02-03 17:04 GMT

ರಾಯ್‌ಪುರ,ಫೆ.3: ಪರಿಶೀಲನೆ ಸಭೆಯಲ್ಲಿ ನಡೆದ ವಾಗ್ವಾದದ ಚಿತ್ರೀಕರಣ ನಡೆಸಿದ ಕಾರಣಕ್ಕೆ ನಾಲ್ವರು ಬಿಜೆಪಿ ಕಾರ್ಯಕರ್ತರು ಪತ್ರಕರ್ತನ ಮೇಲೆ ಹಲ್ಲೆ ಮಾಡಿದ ಘಟನೆ ಛತ್ತೀಸ್‌ಗಡದ ರಾಯ್‌ಪುರದಲ್ಲಿ ನಡೆದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಬಿಜೆಪಿ ಜಿಲ್ಲಾಧ್ಯಕ್ಷ ರಾಜೀವ್ ಅಗರ್ವಾಲ್, ವಿಜಯ್ ವ್ಯಾಸ್, ಉತ್ಕರ್ಷ್ ತ್ರಿವೇದಿ ಮತ್ತು ದೀನಾ ದೋಂಗ್ರೆ ಪತ್ರಕರ್ತ ಸೌರಭ್ ಪಾಂಡೆ ಮೇಲೆ ಹಲ್ಲೆ ನಡೆಸಿದ್ದು ವಿಡಿಯೊ ತುಣುಕನ್ನು ಅಳಿಸಿ ಹಾಕುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಭೆಯಲ್ಲಿ ಬಿಜೆಪಿ ಪಾಳಯದಲ್ಲಿ ವಾಗ್ವಾದ ಉಂಟಾಗಿ ಪರಸ್ಪರ ತಳ್ಳುವ ಮತ್ತು ದೂಡುವ ಮೂಲಕ ಹೊಕೈ ನಡೆಯುವ ಹಂತಕ್ಕೆ ತಲುಪಿತ್ತು. ಈ ವೇಳೆ ಸುದ್ದಿ ಜಾಲವೊಂದಕ್ಕೆ ದುಡಿಯುವ ಪಾಂಡೆ ಈ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಇದನ್ನು ಕಂಡ ಬಿಜೆಪಿ ಕಾರ್ಯಕರ್ತರು ಪಾಂಡೆಯನ್ನು ಸುತ್ತುವರಿದು ಹಲ್ಲೆ ನಡೆಸಿದರು ಮತ್ತು ಅವರು ಆ ವಿಡಿಯೊ ತುಣುಕನ್ನು ಅಳಿಸಿ ಹಾಕುವವರೆಗೆ ಹೋಗಲು ಬಿಡಲಿಲ್ಲ ಎಂದು ಸ್ಥಳದಲ್ಲಿ ಪತ್ರಕರ್ತರು ತಿಳಿಸಿದ್ದಾರೆ ಎಂದು ವರದಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News