ದಕ್ಷಿಣ ಭಾರತದ ಖ್ಯಾತ ನಟಿಯ ನಿವಾಸದಲ್ಲಿ ಮೂವರು ಅಪ್ರಾಪ್ತ ವಯಸ್ಸಿನ ಬಾಲಕಿಯರು ಪತ್ತೆ

Update: 2019-02-04 08:49 GMT

ಚೆನ್ನೈ, ಫೆ.4: ದಕ್ಷಿಣದ ಜನಪ್ರಿಯ ಹಿರಿಯ ನಟಿ ಭಾನುಪ್ರಿಯಾ ಅವರ ಚೆನ್ನೈ ಟಿ ನಗರ್ ನಿವಾಸದಲ್ಲಿ ಮೂವರು ಅಪ್ರಾಪ್ತ ವಯಸ್ಸಿನ ಬಾಲಕಿಯರು ಪತ್ತೆಯಾಗಿರುವುದು ಭಾರೀ ಸುದ್ದಿಯಾಗಿದೆ. ಬಾಲಕಿಯರ ಪೈಕಿ ಒಬ್ಬಾಕೆಯ ತಾಯಿ ಸಮಲ್ಕೋಟ್ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಚೈಲ್ಡ್ ಲೈನ್ ಅಧಿಕಾರಿಗಳು ನಟಿಯ ಮನೆಗೆ ಭೇಟಿ ನೀಡಿದಾಗ ಮೂವರು ಬಾಲಕಿಯರು ಪತ್ತೆಯಾಗಿದ್ದಾರೆ. 

ಮನೆಗೆಲಸಕ್ಕಾಗಿ ತನ್ನ ಪುತ್ರಿಯನ್ನು ಮನೆಯಲ್ಲಿರಿಸಿಕೊಂಡಿರುವ ನಟಿ ಸಂಬಳ ನೀಡಿಲ್ಲ ಹಾಗೂ ಆಕೆಯನ್ನು ಭೇಟಿಯಾಗಲು ಅನುಮತಿಸಿಲ್ಲ ಎಂದು ಬಾಲಕಿಯ ತಾಯಿ ದೂರಿದ್ದಳು.

ಮಕ್ಕಳ ಹಕ್ಕು ಕಾರ್ಯಕರ್ತ ಅಚ್ಯುತ ರಾವ್ ಈ ಬಗ್ಗೆ ರಾಷ್ಟ್ರೀಯ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳಿಗೆ ದೂರಿದ ನಂತರ ರಾಷ್ಟ್ರೀಯ ಆಯೋಗವು ದಾಳಿಗೆ ಸೂಚಿಸಿತ್ತೆನ್ನಲಾಗಿದೆ. ಬಾಲ ಕಾರ್ಮಿಕ ವಿರೋಧಿ ಕಾಯಿದೆಯ ಉಲ್ಲಂಘನೆಗಾಗಿ ನಟಿಯನ್ನು ಬಂಧಿಸಬೇಕೆಂದೂ ರಾವ್ ತಮ್ಮ ದೂರಿನಲ್ಲಿ ಆಗ್ರಹಿಸಿದ್ದರು.

ನಟಿಯ ಮನೆಯಲ್ಲಿ ಪತ್ತೆಯಾದ ಬಾಲಕಿಯರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರಿರುವುದರಿಂದ ಹೆಣ್ಣು ಮಕ್ಕಳ ಮಾರಾಟ ಜಾಲವೇನಾದರೂ ಇದೆಯೇ ಎಂದು ತನಿಖೆ ನಡೆಸುವ ಅಗತ್ಯವನ್ನು ರಾವ್ ಒತ್ತಿ ಹೇಳಿದ್ದಾರೆ.

ದೂರು ನೀಡಿದಾಕೆಯ ಮಗಳ ವಯಸ್ಸು 15ಕ್ಕಿಂತ ಹೆಚ್ಚಿಗಿರಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳುತ್ತಿದ್ದರೆ, ಭಾನುಪ್ರಿಯಾ ಮಾತ್ರ ಆಕೆಗೆ 18 ಆಗಿದೆ ಎಂದು ಆಕೆಯ ಕುಟುಂಬ ತನಗೆ ತಿಳಿಸಿತ್ತು ಎಂದಿದ್ದಾರೆ. ಬಾಲಕಿಯನ್ನು ಹಿಂಸಿಸಲಾಗಿಲ್ಲ ಎಂದೂ ಆಕೆ ಹೇಳಿಕೊಂಡಿದ್ದಾರೆ. ಬಾಲಕಿ ತನ್ನ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಕೆಲ ಇಲೆಕ್ಟ್ರಾನಿಕ್ ಸಾಧನಗಳನ್ನು ಕದ್ದು ತನ್ನ ತಾಯಿಗೆ ನೀಡಿದ್ದಳೆಂದು ಹಾಗೂ ಇದರ ವಿರುದ್ದ ಪೊಲೀಸ್ ದೂರು ನೀಡಿದ್ದಾಗಿ ಭಾನುಪ್ರಿಯಾ ಹೇಳಿದ್ದಾರೆ. ಕದ್ದ ವಸ್ತುಗಳನ್ನು ವಾಪಸ್ ತರುವಂತೆ ತಾನು ಆಕೆಯ ತಾಯಿಗೆ ಹೇಳಿದಾಗ ಆಕೆ ಐಪ್ಯಾಡ್, ಕ್ಯಾಮರಾ, ವಾಚ್ ತಂದಿತ್ತು ಉಳಿದವನ್ನೂ ವಾಪಸ್ ತಂದು ಕೊಡುವುದಾಗಿ ಹೇಳಿದ್ದಳು, ಹಿಂಸೆ ನೀಡಲಾಗಿದೆ ಎಂಬುದು ಸುಳ್ಳು ಎಂದೂ ಭಾನುಪ್ರಿಯಾ ಹೇಳಿದ್ದಾರೆ.

ತನ್ನ ಮಗಳಿಗೆ ಮಾಸಿಕ ರೂ.10,000 ವೇತನ ನೀಡುವುದಾಗಿ ತಿಳಿಸಿದ್ದ ಭಾನುಪ್ರಿಯಾ ಕಳೆದ 18 ತಿಂಗಳಿಂದ ವೇತನ ನೀಡಿಲ್ಲ, ಮಗಳು ಬೇರೆ ಮೊಬೈಲ್ ಫೋನ್ ನಿಂದ ಕರೆ ಮಾಡಿ ತನಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ ನಂತರ ಆಕೆಯನ್ನು ಭೇಟಿಯಾಗಲು ಹೋಗಿದ್ದೆ ಎಂದು ಬಾಲಕಿಯ ತಾಯಿ ಹೇಳಿದ್ದಾರೆ.

ಪೊಲೀಸರು ಭಾನುಪ್ರಿಯ ಮತ್ತಾಕೆಯ ಸೋದರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News