ಭಾರತಕ್ಕೆ ವಿಜಯ್ ಮಲ್ಯ ಗಡೀಪಾರಿಗೆ ಬ್ರಿಟನ್ ಒಪ್ಪಿಗೆ

Update: 2019-02-04 17:37 GMT

ಹೊಸದಿಲ್ಲಿ,ಫೆ.4: ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡಲು ಬ್ರಿಟನ್ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್ ಸೋಮವಾರ ಸಮ್ಮತಿ ಸೂಚಿಸಿದ್ದು, ದೇಶಭ್ರಷ್ಟ ಸಾಲಗಾರನನ್ನು ಸ್ವದೇಶಕ್ಕೆ ಮರಳಿ ತರುವ ತನಿಖಾ ಸಂಸ್ಥೆಗಳ ಪ್ರಯತ್ನಕ್ಕೆ ಕೊನೆಗೂ ಫಲ ದೊರೆತಂತಾಗಿದೆ.

ಎಲ್ಲ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ನಂತರ ವಿಜಯ್ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡುವ ಆದೇಶಕ್ಕೆ ಫೆಬ್ರವರಿ ಮೂರರಂದು ಗೃಹ ಕಾರ್ಯದರ್ಶಿ ಸಹಿ ಹಾಕಿದ್ದಾರೆ ಎಂದು ಬ್ರಿಟನ್ ಗೃಹ ಕಚೇರಿಯ ವಕ್ತಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಬ್ರಿಟನ್ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಮಲ್ಯಗೆ ಫೆಬ್ರವರಿ 4ರಿಂದ ಹದಿನಾಲ್ಕು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ಗಾಗಿ ಮಲ್ಯಾ ವಿವಿಧ ಬ್ಯಾಂಕ್‌ಗಳಿಂದ ಸಾಲಪಡೆದು ಅದರಲ್ಲಿ 9,000 ಕೋಟಿ ರೂ. ಬಾಕಿಯಿರಿಸಿ 2016ರ ಮಾರ್ಚ್ 2ರಂದು ದೇಶ ಬಿಟ್ಟು ವಿದೇಶಕ್ಕೆ ಪಲಾಯನ ಮಾಡಿದ್ದರು. ಸದ್ಯದ ಬೆಳವಣಿಗೆಯ ಬಗ್ಗೆ ಮಾತನಾಡಿರುವ ಅರುಣ್ ಜೇಟ್ಲಿ, ಮಲ್ಯಾರನ್ನು ಸ್ವದೇಶಕ್ಕೆ ಕರೆತರುವತ್ತ ಮೋದಿ ಸರಕಾರದ ಇನ್ನೊಂದು ಹೆಜ್ಜೆ ಎಂದು ವ್ಯಾಖ್ಯಾನಿಸಿದ್ದಾರೆ. ಒಂದೆಡೆ ವಿಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ಶಾರದಾ ಹಗರಣಕೋರರ ಸುತ್ತ ಜಮಾಯಿಸುತ್ತಿದ್ದರೆ ಇನ್ನೊಂದೆಡೆ ಮೋದಿ ಸರಕಾರ ಮಲ್ಯಾರ ಗಡಿಪಾರಿಗೆ ಅಗತ್ಯವಿರುವ ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News