Visit Our Mosque: ಮತೀಯ ಸೌಹಾರ್ದ ಉತ್ತೇಜಿಸಲು ಹೀಗೊಂದು ವಿಶಿಷ್ಟ ಕಾರ್ಯಕ್ರಮ

Update: 2019-02-06 07:32 GMT
ಸಾಂದರ್ಭಿಕ ಚಿತ್ರ

ಪುಣೆ, ಫೆ.6: ನಗರದ ಶೈಕ್ಷಣಿಕ ಕೇಂದ್ರವಾದ ಆಝಂ ಕಾಂಪ್ಲೆಕ್ಸ್ ಆವರಣದಲ್ಲಿರುವ ಮಸೀದಿಯಲ್ಲಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಡೆದ ವಿಶಿಷ್ಟ 'Visit Our Mosque' ಕಾರ್ಯಕ್ರಮದನ್ವಯ ಇತರ ಧರ್ಮೀಯರಿಗೆ ಮಸೀದಿಗೆ ಪ್ರವೇಶಾವಕಾಶ ಒದಗಿಸಲಾಯಿತಲ್ಲದೆ ಇಸ್ಲಾಮಿಕ್ ಪ್ರಾರ್ಥನಾ ಕೇಂದ್ರದಲ್ಲಿನ ಪದ್ಧತಿಗಳು ಹಾಗೂ ಕ್ರಮಗಳ ಬಗ್ಗೆ ಅವರಿಗೆ ಮನವರಿಕೆ ಮಾಡುವ ಮೂಲಕ ಮತೀಯ ಸೌಹಾರ್ದಕ್ಕೆ ಒತ್ತು ನೀಡಲಾಯಿತು.

ಎರಡು ದಿನದ ಈ ಕಾರ್ಯಕ್ರಮವನ್ನು ಇಸ್ಲಾಮಿಕ್ ಇನ್ಫಾರ್ಮೇಶನ್ ಸೆಂಟರ್, ಪುಣೆ ಆಯೋಜಿಸಿತ್ತು. ಸುಮಾರು 350 ಮಂದಿ ಮಸೀದಿಗೆ ಈ ಸಂದರ್ಭ ಭೇಟಿ ನೀಡಿದ್ದಾರೆ. ಇಸ್ಲಾಂ ಧರ್ಮದ ಬಗ್ಗೆ ಅನ್ಯ ಧರ್ಮೀಯರಿಗೆ ಇರುವ ಎಲ್ಲಾ ತಪ್ಪು ಅಭಿಪ್ರಾಯಗಳನ್ನು ದೂರಗೊಳಿಸುವ ಪ್ರಯತ್ನವೂ ಇದಾಗಿತ್ತು.

ಈ ಕಾರ್ಯಕ್ರಮ ಆಯೋಜಿಸಲು ಶ್ರಮ ಪಟ್ಟಿದ್ದ ಇಸ್ಲಾಮಿಕ್ ಇನ್ಫಾರ್ಮೇಶನ್ ಸೆಂಟರ್ ನ ಕರೀಮುದ್ದೀನ್ ಶೇಖ್ ಮಾತನಾಡುತ್ತಾ, ''ಮಸೀದಿಗಳು ಹಿಂಸೆ ಮತ್ತು ದ್ವೇಷ ಪಸರಿಸುತ್ತವೆ ಹಾಗೂ ಮಸೀದಿಗಳಲ್ಲಿ ಉಗ್ರರನ್ನು ತಯಾರಿಸಲಾಗುತ್ತಿದೆಯೆಂಬ ಅಪ್ಪಟ ಸುಳ್ಳು ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸಿದರಲ್ಲದೆ, ಇಂತಹ ಕಾರ್ಯಕ್ರಮ ತಪ್ಪು ಅಭಿಪ್ರಾಯಗಳನ್ನು ದೂರಗೊಳಿಸಲು ಸಹಕಾರಿ ಎಂದರು. ಆಧಾರರಹಿತ ಸುದ್ದಿಗಳನ್ನು ಪಸರಿಸುವುದರಿಂದ ಆಗುವ ಪರಿಣಾಮಗಳನ್ನು ವಿವರಿಸುವ ಪೋಸ್ಟರುಗಳನ್ನು ಅಳವಡಿಸಿ ವದಂತಿಗಳಿಗೆ ಕಡಿವಾಣ ಹಾಕುವ ಯತ್ನವನ್ನೂ ಸಂಘಟಕರು ಮಾಡಿದ್ದರು.

ಕ್ರೀಡಾ ಉಡುಗೆಗಳ ತಯಾರಿ ಉದ್ಯಮದಲ್ಲಿರುವ ಶೇಖ್, ಮಸೀದಿಗಳಿಗೆ ಎಲ್ಲರ ಪ್ರವೇಶಕ್ಕೆ ಅನುಮತಿಸುವ ಇಂತಹ ಒಂದು ಕ್ರಮವನ್ನು ಒತ್ತಿ ಹೇಳುತ್ತಾರಲ್ಲದೆ ‘‘ಮಸೀದಿಗಳು ಏಕೆ ಎಲ್ಲರಿಗೂ ತೆರೆದಿಲ್ಲ? ನೀವೇನು ಅಡಗಿಸುತ್ತಿದ್ದೀರಿ?’’ ಎಂಬಿತ್ಯಾದಿ ಪ್ರಶ್ನೆಗಳಿಗೆ ಇದು ಉತ್ತರವಾಗಬಹುದು ಎನ್ನುತ್ತಾರೆ.

ಇಂಗ್ಲೆಂಡಿನಲ್ಲಿ ಮಸೀದಿಗಳು ಕೆಲ ದಿನ ಎಲ್ಲಾ ಜನರಿಗೂ ಪ್ರವೇಶಾವಕಾಶ ನೀಡುವ ಓಪನ್ ಡೇ ಪದ್ಧತಿಗಳನ್ನು ಅನುಸರಿಸಿದ್ದರೆ, ಸದ್ಯ ಈ Visit My Mosque ಆಂದೋಲನದಲ್ಲಿ ಇಂಗ್ಲೆಂಡಿನಲ್ಲಿ 200 ಮಸೀದಿಗಳು ಭಾಗಿಯಾಗಿವೆ.

ಭಾರತದಲ್ಲಿ ಕೂಡ ಮುಂಬೈಯ ಅಲ್-ಫುರ್ಖಾನ್ ಮಸೀದಿ, ಅಹ್ಮದಾಬಾದ್ ನಗರದ ಮಸ್ಜಿದ್ ಉಮರ್ ಬಿನ್ ಖತ್ತಾಬ್ ಹಾಗೂ ಹೈದರಾಬಾದ್ ನ ಮೂರು ಮಸೀದಿಗಳು ಇಂತಹ ಕಾರ್ಯಕ್ರಮ ನಡೆಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News