ಹಿಂದುತ್ವ ಪ್ರಭಾವಿತ ಪುಸ್ತಕ ಸಂವಿಧಾನದ ಜಾಗವನ್ನು ಪಡೆದುಕೊಳ್ಳುವ ಅಪಾಯವಿದೆ: ಚಿದಂಬರಂ

Update: 2019-02-06 16:16 GMT

ಹೊಸದಿಲ್ಲಿ,ಫೆ.6: ಇಂದು ದೇಶವನ್ನು ಭಯ ಆಳುತ್ತಿದೆ ಮತ್ತು ಸಂವಿಧಾನದ ಜಾಗವನ್ನು ಹಿಂದುತ್ವದಿಂದ ಪ್ರಭಾವಿತ ಪುಸ್ತಕ ಪಡೆದುಕೊಳ್ಳುವ ಅಪಾಯವಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ.

“ಈ ಬೆಳವಣಿಗೆಯಿಂದ ನಮ್ಮ ಹಿರಿಯರು ನಮಗೆ ನೀಡಿರುವ ಭಾರತದ ಕಲ್ಪನೆ ಕೊನೆಯಾಗಲಿದೆ” ಎಂದು ಚಿಂತೆ ವ್ಯಕ್ತಪಡಿಸಿರುವ ಮಾಜಿ ವಿತ್ತ ಸಚಿವ, ಆ ಪರಿಕಲ್ಪನೆಯನ್ನು ಪುನರ್‌ಸ್ಥಾಪಿಸಲು ಮತ್ತೊಂದು ಸ್ವಾತಂತ್ರ್ಯ ಹೋರಾಟ ಮತ್ತು ಇನ್ನೊಬ್ಬರು ಮಹಾತ್ಮಾ ಗಾಂಧಿಯ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಅವರು ಈ ಹೇಳಿಕೆಯನ್ನು ಕಳೆದ ವರ್ಷ ಬಿಡುಗಡೆಯಾದ ಪ್ರಬಂಧಗಳ ಸಂಗ್ರಹ ‘ಸೇವಿಂಗ್ ದ ಐಡಿಯ ಆಫ್ ಇಂಡಿಯಾ’ ಪುಸ್ತಕದಲ್ಲಿ ನಮೂದಿಸಿದ್ದಾರೆ.

ಹಳಿತಪ್ಪಿದ ಆರ್ಥಿಕತೆಯನ್ನು ಮರಳಿ ಹಳಿಗೆ ತರಬಹುದು ಮತ್ತು ಪ್ರತ್ಯೇಕಗೊಂಡ ಸಮಾಜವನ್ನು ಒಟ್ಟಾಗಿಸಬಹುದು. ಆದರೆ ಸರಿ ಮಾಡಲಾಗದ ಒಂದು ವಿಷಯವೆಂದರೆ ನಾಶಮಾಡಲಾದ ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳು ಎಂದು ರಾಜ್ಯ ಸಭಾ ಸದಸ್ಯರೂ ಆಗಿರುವ ಚಿದಂಬರಂ ಅಭಿಪ್ರಾಯಿಸಿದ್ದಾರೆ. ಸದ್ಯ ಸ್ವಾತಂತ್ರ್ಯ, ಸಮಾನತೆ, ಉದಾರವಾದ, ಜಾತ್ಯತೀತತೆ, ಖಾಸಗಿತನ, ವೈಜ್ಞಾನಿಕ ಮನೋಭಾವ ಸೇರಿದಂತೆ ಸಂವಿಧಾನದ ಎಲ್ಲ ಮೌಲ್ಯಗಳು ದಾಳಿಗೊಳಗಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.

“ಇಂದು ಭಾರತವನ್ನು ಭಯ ಆಳುತ್ತಿದೆ ಎಂದು ಹೇಳಲು ನನಗೆ ಯಾವುದೇ ಅಂಜಿಕೆಯಿಲ್ಲ. ಪ್ರತಿಯೊಬ್ಬ ಭಾರತೀಯ ಭಯದಲ್ಲಿ ಜೀವಿಸುತ್ತಿದ್ದಾನೆ. ನೆರೆಹೊರೆಯವರ ಭಯ, ಸ್ವಘೋಷಿತ ನೈತಿಕ ಗುಂಪುಗಳ ಭಯ, ಕ್ರೂರ ಮನಸ್ಸಿನಿಂದ ಜಾರಿ ಮಾಡಲಾದ ಕಾನೂನಿನ ಭಯ ಮತ್ತು ಎಲ್ಲದಕ್ಕೂ ಮಿಗಿಲಾಗಿ ಕಳ್ಳ ನಿಗಾವಣೆಯ ಭಯ” ಎಂದು ಚಿದಂಬರಂ ತಿಳಿಸಿದ್ದಾರೆ. ಸ್ವಾತಂತ್ರವನ್ನು ಮರುಪಡೆಯಲು ಭಯವನ್ನು ಓಡಿಸಬೇಕು. ಅದು ಅಷ್ಟು ಸುಲಭದ ಕೆಲಸವಲ್ಲ, ಆದರೆ ಹಾಗೆಂದು ನಾವು ಸುಮ್ಮನಿರುವಂತಿಲ್ಲ ಎಂದು ಚಿದಂಬರಂ ತನ್ನ ಪುಸ್ತಕದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News