ಪೌರ ಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಸಿದ ಇಂಜಿನಿಯರ್‌ ಗಳು!

Update: 2019-02-06 16:52 GMT

ಚೆನ್ನೈ,ಫೆ.6: ತಮಿಳುನಾಡು ಕಾರ್ಯನಿರ್ದೇಶನಾಲಯದಲ್ಲಿರುವ ಹದಿನಾಲ್ಕು ಸ್ವಚ್ಛತಾ ಕಾರ್ಮಿಕ ಮತ್ತು ಜಾಡಮಾಲಿ ಹುದ್ದೆಗೆ ರಾಜ್ಯದ ಇಂಜಿನಿಯರ್‌ ಗಳು, ಎಂಬಿಎ ಪದವೀಧರರ ಸೇರಿದಂತೆ ವಾಣಿಜ್ಯ, ಕಲೆ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಪಡೆದಿರುವ 4,600 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಹತ್ತು ಸ್ವಚ್ಛತಾ ಕಾರ್ಮಿಕ ಹುದ್ದೆ ಮತ್ತು ನಾಲ್ಕು ಜಾಡಮಾಲಿ ಹುದ್ದೆ ಖಾಲಿ ಬಿದ್ದಿದೆ. ಇಲಾಖೆಗೆ ಬಂದಿರುವ 4,607 ಅರ್ಜಿಗಳ ಪೈಕಿ ವಯಸ್ಸಿನ ನಿಬಂಧನೆಯನ್ನು ಪೂರೈಸದ ಕಾರಣಕ್ಕೆ 677 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಈ ಹುದ್ದೆಗಳಿಗೆ 15,700 ರೂ.ನಿಂದ 50,000 ರೂ.ವರೆಗೆ ವೇತನ ನಿಗದಿಪಡಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಸಮಾಜದ ಎಲ್ಲ ವರ್ಗ, ಜಾತಿ ಮತ್ತು ಸಮುದಾಯ ಹಾಗೂ ಭೌಗೋಳಿಕ ಪ್ರದೇಶದ ಜನರು ಅರ್ಜಿ ಸಲ್ಲಿಸಿದ್ದಾರೆ. ಕೆಲವರು ನಗರ ಪ್ರದೇಶದಿಂದ ಬಂದರೆ ಇನ್ನು ಕೆಲವರು ಉಪನಗರ ಹಾಗೂ ಗ್ರಾಮೀಣ ಭಾಗಗಳಿಂದ ಬಂದವರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಈ ಎರಡು ಹುದ್ದೆಗಳಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅರ್ಜಿಗಳು ಬಂದಿರುವುದನ್ನು ಕಂಡು ಆಶ್ಚರ್ಯವಾಯಿತು. ಅದರಲ್ಲೂ ವೃತ್ತಿಪರ ಪದವಿ ಹೊಂದಿರುವವರು ಅರ್ಜಿ ಹಾಕಿರುವುದನ್ನು ಕಂಡಾಗ ದುಃಖವಾಯಿತು ಎಂದು ತಮಿಳುನಾಡು ವಿಧಾನಸಭೆಯ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

ಈ ಹುದ್ದೆಗಳಿಗೆ 17,000 ರೂ.ನಿಂದ ವೇತನ ಆರಂಭವಾಗುವುದು ಇಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಬರಲು ಕಾರಣವಾಗಿರಬಹುದು. ಆದರೆ ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಲೋಕಸಭಾ ಚುನಾವಣೆಯ ನಂತರವೇ ನಡೆಯಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಮಿಳುನಾಡು ಕೈಗಾರೀಕರಣಗೊಂಡ ರಾಜ್ಯವಾದರೂ ಕಂಪೆನಿಗಳು ಕಾರ್ಮಿಕ ಆಧಾರಿತದಿಂದ ಯಂತ್ರ ಆಧಾರಿತಕ್ಕೆ ಬದಲಾಗುತ್ತಿರುವುದರಿಂದ ಇಂಜಿನಿಯರ್ ‌ಗಳು ಮತ್ತು ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಕಾರ್ಮಿಕ ಅರ್ಥಶಾಸ್ತ್ರಜ್ಞ ಎಂ. ವಿಜಯಭಾಸ್ಕರ್ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News