​ಮಹಾರಾಷ್ಟ್ರ ಮೂಲದ ಪ್ರತಿಷ್ಠಿತ ಕುಟುಂಬದ ಈ ಮಹಿಳೆ ಸ್ವಿಡಿಷ್ ಪಿಎಂಓ ಸಲಹೆಗಾರ್ತಿ

Update: 2019-02-07 03:42 GMT

ಮುಂಬೈ, ಫೆ.7: ಏಷ್ಯಾದ ಮೊಟ್ಟಮೊದಲ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಸ್ಥಾಪಕ ವಿಠಲರಾವ್ ಅವರ ಮರಿಮೊಮ್ಮಗಳು ಮತ್ತು ಮಾಜಿ ಸಂಸದ, ಸಕ್ಕರೆ ಉದ್ಯಮಿ ಬಾಬಾ ಸಾಹೇಬ್ ವಿಖೇ ಪಾಟೀಲ್ ಅವರ ಮೊಮ್ಮಗಳು ನೀಲಾ ವಿಖೇ ಪಾಟೀಲ್ ಅವರನ್ನು ಸ್ವೀಡನ್ ಸರ್ಕಾರ ಅಲ್ಲಿನ ಪ್ರಧಾನಿ ಕಚೇರಿಯ ರಾಜಕೀಯ ಸಲಹೆಗಾರ್ತಿಯನ್ನಾಗಿ ನೇಮಕ ಮಾಡಿದೆ.

ಬಾಬಾ ಸಾಹೇಬ್ ಅವರ ಮಗ ಹಾಗೂ ಪ್ರವರ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಅಶೋಕ್ ಅವರ ಪುತ್ರಿಯಾದ ನೀಲಾ ವಿಖೇ ಪಾಟೀಲ್ (33) ಅವರನ್ನು ಎರಡು ವರ್ಷಗಳ ಆರಂಭಿಕ ಅಧಿಕಾರಾವಧಿ ಬಳಿಕ ರಾಜಕೀಯ ಸಲಹೆಗಾರರನ್ನಾಗಿ ಮರು ನೇಮಕ ಮಾಡಲಾಗಿದೆ.

ತಾಯಿ ಇವಾ ಲಿಲ್, ಸ್ವೀಡನ್‌ನವರಾಗಿದ್ದರಿಂದ ನೀಲಾ ಕೂಡಾ ಹುಟ್ಟಿದ್ದು ಸ್ವೀಡನ್ ನೆಲದಲ್ಲಿ. ಅಹ್ಮದ್‌ ನಗರದ ಕೂಡುಕುಟುಂಬದಲ್ಲಿ ನೀಲಾ ಶಾಲಾ ಪೂರ್ವ ದಿನಗಳನ್ನು ಕಳೆದಿದ್ದರು. ನೀಲಾ ಪೋಷಕರು ಬೇರ್ಪಟ್ಟಾಗ ನೀಲಾ ತಾಯಿ ಜತೆ ಸ್ವೀಡನ್‌ಗೆ ತೆರಳಿದ್ದರು. ಆದರೆ ಮರಾಠಿ ಭಾಷೆ ಹಾಗೂ ಮಹಾರಾಷ್ಟ್ರದ ತಿನಿಸುಗಳ ಬಗ್ಗೆ ಅವರು ವಿಶೇಷ ಪ್ರೀತಿ ಹೊಂದಿದ್ದರು. "ಪಿತ್ಲಾ, ಭಕ್ರಿ ವರನ್‌ಬಾತ್ ನನಗೆ (ದಾಲ್ ರೈಸ್) ತೀರಾ ಇಷ್ಟ" ಎಂದು ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ಅವರು ತಿಳಿಸಿದ್ದಾರೆ.

ಪ್ರತಿ ದಿನ ತಂದೆ ಜತೆ ದೂರವಾಣಿ ಮೂಲಕ ಸಂಭಾಷಿಸುವ ನೀಲಾಗೆ ಅಜ್ಜನೇ ಆದರ್ಶ. 2016ರ ಮುನ್ನ ಅಜ್ಜ ಕೊನೆಯುಸಿರೆಳೆಯುವ ಮುನ್ನ ಹಲವು ರಾಜಕೀಯ ವಿಷಯಗಳ ಬಗ್ಗೆ ಅವರ ಜತೆ ಚರ್ಚಿಸುತ್ತಿದ್ದರು. ಆ ಬಳಿಕ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಆದರ್ಶ ಎಂದು ಅವರು ಹೇಳಿದರು.

"ಸ್ವಿಡಿಷ್ ಪ್ರಧಾನಿ ಸ್ಟೀಫನ್ ಲೋಫೆನ್ ಕಚೇರಿಯಲ್ಲಿ ನನ್ನ ಪ್ರಾಥಮಿಕ ಜವಾಬ್ದಾರಿ ಹಣಕಾಸು ವಿಷಯಗಳಾದ ಬಜೆಟ್, ತೆರಿಗೆ, ಬ್ಯಾಂಕಿಂಗ್ ಮತ್ತು ನಿಯಂತ್ರಣ, ಸಂವಿಧಾನಿಕ ವಿಷಯಗಳು ಮತ್ತು ವಿತ್ತ ನೀತಿ" ಎಂದು ಅವರು ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News