2018 ನಾಲ್ಕನೇ ಅತಿ ಹೆಚ್ಚು ಉಷ್ಣತೆಯ ವರ್ಷ: ವಿಶ್ವಸಂಸ್ಥೆ

Update: 2019-02-07 15:45 GMT

ಕ್ಯಾಲಿಫೋರ್ನಿಯ, ಫೆ. 7: ಉಷ್ಣತೆ ದಾಖಲಾತಿ ಆರಂಭ ಗೊಂಡ ಬಳಿಕ, ಕಳೆದ ವರ್ಷದ ಜಾಗತಿಕ ಉಷ್ಣತೆಯು ನಾಲ್ಕನೇ ಗರಿಷ್ಠ ಉಷ್ಣತೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಬುಧವಾರ ಹೇಳಿದೆ.

2018ರ ಹವಾಮಾನ ವೈಪರೀತ್ಯವು ಕ್ಯಾಲಿಫೋರ್ನಿಯ ಮತ್ತು ಗ್ರೀಸ್‌ಗಳಲ್ಲಿ ಕಾಡ್ಗಿಚ್ಚುಗಳು, ದಕ್ಷಿಣ ಆಫ್ರಿಕದಲ್ಲಿ ಬರಗಾಲ ಮತ್ತು ಕೇರಳದಲ್ಲಿ ಭೀಕರ ಪ್ರವಾಹದ ಮೂಲಕ ಜನರ ಅನುಭವಕ್ಕೆ ಬಂತು. ಮಾನವ ಚಟುವಟಿಕೆಗಳಿಂದಾಗಿ ಉತ್ಪತ್ತಿಯಾಗುವ ಅಗಾಧ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಅನಿಲವು ಶಾಖವನ್ನು ಭೂಮಿಯಲ್ಲಿ ಹಿಡಿದಿಡುವುದು, ಜಾಗತಿಕ ಉಷ್ಣತೆ ಹೆಚ್ಚಲು ಕಾರಣವಾಗಿದೆ.

2018ರಲ್ಲಿ ಸರಾಸರಿ ಜಾಗತಿಕ ಮೇಲ್ಮೈ ಉಷ್ಣತೆಯು ಕೈಗಾರಿಕಾ ಪೂರ್ವ ಕಾಲದಲ್ಲಿ ಇದ್ದ ಉಷ್ಣತೆಗಿಂತ ಒಂದು ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ ಎಂದು ವಿಶ್ವಸಂಸ್ಥೆಯ ಹವಾಮಾನ ಸಂಘಟನೆ (ಡಬ್ಲುಎಂಒ) ಹೇಳಿದೆ.

ಅಮೆರಿಕ, ಬ್ರಿಟನ್, ಜಪಾನ್ ಮತ್ತು ಯುರೋಪ್ ಹವಾಮಾನ ಸಂಸ್ಥೆಗಳಿಂದ ಪಡೆದುಕೊಂಡ ದತ್ತಾಂಶಗಳನ್ನು ಆಧರಿಸಿ ಅದು ಈ ತೀರ್ಮಾನಕ್ಕೆ ಬಂದಿದೆ.

‘‘ಒಂದೊಂದು ವರ್ಷದ ಸ್ಥಿತಿಗತಿಗಿಂತ ದೀರ್ಘಾವಧಿಯ ಉಷ್ಣತಾ ಪ್ರವೃತ್ತಿಯು ಹೆಚ್ಚಿನ ಮಹತ್ವವನ್ನು ಹೊಂದಿದೆ ಹಾಗೂ ಈ ಪ್ರವೃತ್ತಿಯು ಮೇಲ್ಮುಖವಾಗಿದೆ’’ ಎಂದು ವಿಶ್ವಸಂಸ್ಥೆಯ ಹವಾಮಾನ ಸಂಘಟನೆಯ ಮಹಾ ಕಾರ್ಯದರ್ಶಿ ಪೆಟ್ಟಾರಿ ತಾಲಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ದಾಖಲಾಗಿರುವ 20 ಅತ್ಯಂತ ಬಿಸಿ ವರ್ಷಗಳು ಕಳೆದ 22 ವರ್ಷಗಳಲ್ಲೇ ಇವೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News