ಮಮತಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿಗಳ ಪದಕ ಕಿತ್ತುಕೊಳ್ಳಲಿರುವ ಕೇಂದ್ರ: ವರದಿ

Update: 2019-02-07 17:30 GMT

ಹೊಸದಿಲ್ಲಿ,ಫೆ.7: ಕೋಲ್ಕತಾದಲ್ಲಿ ಸಿಬಿಐ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಐವರು ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರಕಾರಕ್ಕೆ ಸೂಚಿಸಿದೆ. ಅಖಿಲ ಭಾರತ ಸೇವೆಗಳ ನಿಯಮಾವಳಿಗಳಿಗೆ ಅನುಗುಣವಾಗಿ ಅವರು ಪಡೆದಿರುವ ಪದಕಗಳನ್ನು ಕಿತ್ತುಕೊಳ್ಳಲೂ ಸರಕಾರವು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರಕಾರವು ಸೂಚಿತ ಪಟ್ಟಿಯಿಂದ ಈ ಅಧಿಕಾರಿಗಳ ಹೆಸರುಗಳನ್ನು ತೆಗೆದು ಹಾಕಬಹುದು ಮತ್ತು ಕೇಂದ್ರ ಮಟ್ಟದಲ್ಲಿ ಅವರು ಸೇವೆ ಸಲ್ಲಿಸುವುದನ್ನು ನಿರ್ದಿಷ್ಟ ಅವಧಿಗೆ ನಿಷೇಧಿಸಬಹುದು ಎಂದೂ ಮೂಲಗಳು ತಿಳಿಸಿವೆ.

ಪ.ಬಂಗಾಳದ ಡಿಜಿಪಿ ವೀರೇಂದ್ರ,ಹೆಚ್ಚುವರಿ ಡಿಜಿಪಿ ವಿನೀತ ಕುಮಾರ ಗೋಯಲ್,ಎಜಿಪಿ ಅನುಜ್ ಶರ್ಮಾ,ವಿಧಾನ ನಗರ ಕಮಿಷನರೇಟ್‌ನ ಪೊಲೀಸ್ ಆಯುಕ್ತ ಜ್ಞಾನವಂತ ಸಿಂಗ್ ಮತ್ತು ಕೋಲ್ಕತಾದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಪ್ರತಿಮ ದರ್ಕಾರ್ ಕೇಂದ್ರದ ಕೆಂಗಣ್ಣಿಗೆ ಸಿಲುಕಿರುವ ಪೊಲೀಸ್ ಅಧಿಕಾರಿಗಳಾಗಿದ್ದಾರೆ.

ತಟಸ್ಥ ನಿಲುವು ಹೊಂದಿರಬೇಕಿದ್ದ ಈ ಪೊಲೀಸ್ ಅಧಿಕಾರಿಗಳು ಪ್ರತಿಭಟನೆೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಜಕೀಯ ನಿಲುವನ್ನು ತಳೆದಿದ್ದರು ಎಂದು ಗೃಹ ಸಚಿವಾಲಯದಲ್ಲಿನ ಮೂಲಗಳು ತಿಳಿಸಿವೆ.

ಕೇಂದ್ರದ ಆದೇಶವನ್ನು ಪಾಲಿಸುವ ಬಾಧ್ಯತೆಯು ಪ.ಬಂಗಾಳ ಸರಕಾರಕ್ಕಿಲ್ಲವಾದರೂ ಈ ಆದೇಶವು ಕೇಂದ್ರ ಮತ್ತು ರಾಜ್ಯದ ನಡುವಿನ ಸಂಘರ್ಷವನ್ನು ಇನ್ನಷ್ಟು ಹೆಚ್ಚಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News