ದಲಿತ ನಾಯಕರ ಸ್ಮಾರಕಗಳಿಂದ ರಾಜ್ಯಕ್ಕೆ ಆದಾಯ ಬರುತ್ತಿದೆ: ಮಾಯಾವತಿ

Update: 2019-02-09 13:30 GMT

ಲಕ್ನೊ, ಫೆ.9: ತಾನು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಜ್ಯದ ಹಲವೆಡೆ ಸ್ಥಾಪಿಸಿದ್ದ ದಲಿತ ನಾಯಕರ ಪ್ರತಿಮೆ ರಾಜ್ಯದ ಅನನ್ಯತೆಯ ಸಂಕೇತವಷ್ಟೇ ಅಲ್ಲ, ಇದರಿಂದ ರಾಜ್ಯದ ಬೊಕ್ಕಸಕ್ಕೆ ಹಣ ಹರಿದು ಬರುತ್ತಿದೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.

ಮಾಯಾವತಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಜ್ಯದ ಹಲವೆಡೆ ತನ್ನ ಬೃಹತ್ ಪ್ರತಿಮೆ ಹಾಗೂ ಪಕ್ಷದ ಚಿಹ್ನೆಯಾದ ಆನೆಯ ಪ್ರತಿಮೆಗಳನ್ನೂ ಹಲವೆಡೆ ಸ್ಥಾಪಿಸಿದ್ದು, ಇದಕ್ಕೆ ವೆಚ್ಚ ಮಾಡಿದ ಸಾರ್ವಜನಿಕರ ಹಣವನ್ನು ತಕ್ಷಣ ಬೊಕ್ಕಸಕ್ಕೆ ಹಿಂದಿರುಗಿಸಬೇಕೆಂದು ಸುಪ್ರೀಂಕೋರ್ಟ್ ನೀಡಿದ ಸೂಚನೆಗೆ ಪ್ರತಿಕ್ರಿಯೆ ನೀಡಿದ ಮಾಯಾವತಿ, ದಲಿತ ನಾಯಕರ ಪ್ರತಿಮೆಗಳನ್ನು ವೀಕ್ಷಿಸಲೆಂದೇ ಹಲವಾರು ಅಭಿಮಾನಿಗಳು ಆಗಮಿಸುತ್ತಾರೆ. ಇದರಿಂದ ರಾಜ್ಯಕ್ಕೆ ಆದಾಯ ದೊರಕುತ್ತಿದೆ ಎಂದು ಉತ್ತರಿಸಿದ್ದಾರೆ.

 ಮಾಯಾವತಿ ರಾಜ್ಯದ ವಿವಿಧೆಡೆ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ಸಾರ್ವಜನಿಕರ ಹಣವನ್ನು ಪೋಲು ಮಾಡಿದ್ದಾರೆ . ಉತ್ತರಪ್ರದೇಶದ 50 ಮಿಲಿಯನ್‌ಗೂ ಹೆಚ್ಚು ಜನ ಬಡತನ ರೇಖೆಗಿಂತ ಕೆಳಗಿರುವವರು. ಹೀಗಿರುವಾಗ ಪ್ರತಿಮೆ ಸ್ಥಾಪನೆಗೆ 1,200 ಕೋಟಿ ರೂ.ಗೂ ಹೆಚ್ಚು ಹಣ ವ್ಯಯಿಸಲಾಗಿದೆ ಎಂದು ದೂರಿ 2009ರಲ್ಲಿ ವಕೀಲ ರವಿಕಿರಣ್ ಎಂಬವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ, ಪ್ರತಿಮೆ ಸ್ಥಾಪನೆಗಾಗಿ ರಾಜ್ಯದ ಬೊಕ್ಕಸದಿಂದ ಖರ್ಚು ಮಾಡಿರುವ ಹಣವನ್ನು ಮಾಯಾವತಿ ಹಿಂದಿರುಗಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು ಮತ್ತು ಮುಂದಿನ ವಿಚಾರಣೆಯನ್ನು ಎಪ್ರಿಲ್ 2ಕ್ಕೆ ನಿಗದಿಗೊಳಿಸಿದೆ.

ಆದರೆ ವಿಚಾರಣೆಯನ್ನು ಮೇ ತಿಂಗಳಿನಲ್ಲಿ ಮುಂದುವರಿಸುವಂತೆ ಮಾಯಾವತಿಯವರ ವಕೀಲ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಲೋಕಸಭಾ ಚುನಾವಣೆಗೂ ಮೊದಲು ಈ ಪ್ರಕರಣದ ವಿಚಾರಣೆ ನಡೆದು ತೀರ್ಪು ಹೊರಬಿದ್ದರೆ ಮತದಾರರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎಂಬುದು ಮಾಯಾವತಿ ಲೆಕ್ಕಾಚಾರ ಎನ್ನಲಾಗಿದೆ. ಆದರೆ ಈ ಕೋರಿಕೆಯನ್ನು ತಿರಸ್ಕರಿಸಿದ ನ್ಯಾಯಪೀಠ, ದಯವಿಟ್ಟು ಈ ಪ್ರಕರಣದ ಬಗ್ಗೆ ನಾವು ಇನ್ನಷ್ಟು ಮಾತಾಡುವಂತೆ ಮಾಡಬೇಡಿ. ಎಪ್ರಿಲ್ 2ರಂದು ನಡೆಯುವ ವಿಚಾರಣೆಗೆ ಪೂರ್ಣ ಸಿದ್ಧತೆ ಮಾಡಿಕೊಂಡು ಬನ್ನಿ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News