ಸಿಬಿಐನಿಂದ ಎರಡನೇ ದಿನವೂ ಮುಂದುವರಿದ ಕೋಲ್ಕತಾ ಪೊಲೀಸ್ ಆಯುಕ್ತರ ವಿಚಾರಣೆ

Update: 2019-02-10 14:20 GMT

ಶಿಲ್ಲಾಂಗ್,ಫೆ.10: ಶಾರದಾ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸತತ ಎರಡನೇ ದಿನವಾದ ರವಿವಾರವೂ ಕೋಲ್ಕತಾದ ಪೊಲೀಸ್ ಆಯುಕ್ತ ರಾಜೀವ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಜೊತೆಗೆ ಟಿಎಂಸಿಯ ಮಾಜಿ ಸಂಸದ ಕುನಾಲ್ ಘೋಷ್ ಅವರನ್ನೂ ಪ್ರಶ್ನಿಸಲಾಗುತ್ತಿದೆ.

ಪ್ರಕರಣದಲ್ಲಿ ಪ್ರಮುಖ ಸಾಕ್ಷಾಧಾರಗಳ ನಾಶದ ಆರೋಪದಲ್ಲಿ ಶನಿವಾರ ಮೂವರು ಹಿರಿಯ ಸಿಬಿಐ ಅಧಿಕಾರಿಗಳು ಸುಮಾರು ಒಂಭತ್ತು ಗಂಟೆಗಳ ಕಾಲ ಕುಮಾರ್ ಅವರನ್ನು ಪ್ರಶ್ನಿಸಿದ್ದರು. ಕುಮಾರ್ ಸರ್ವೋಚ್ಚ ನ್ಯಾಯಾಲಯವು ಶಾರದಾ ಚಿಟ್‌ಫಂಡ್ ಹಗರಣವನ್ನು ಸಿಬಿಐಗೆ ಹಸ್ತಾಂತರಿಸುವ ಮುನ್ನ ಪ್ರಕರಣದ ವಿಚಾರಣೆಗಾಗಿ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ನೇಮಿಸಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದರು.

ಶಾರದಾ ಹಗರಣದಲ್ಲಿ ಘೋಷ್ ಅವರನ್ನು 2013ರಲ್ಲಿ ಬಂಧಿಸಲಾಗಿದ್ದು,ಆಗಿನಿಂದ ಅವರು ಜಾಮೀನಲ್ಲಿದ್ದಾರೆ. ಸಿಬಿಐ ಅವರನ್ನು ಕುಮಾರ್ ಜೊತೆ ಮುಖಾಮುಖಿಯಾಗಿಸುವ ಸಾಧ್ಯತೆಯಿದೆ.

 ಕುಮಾರ್ ಅವರು ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರ ಬಲಗೈ ಬಂಟನಾಗಿದ್ದ ಬಿಜೆಪಿ ನಾಯಕ ಮುಕುಲ್ ರಾಯ್ ಮತ್ತು ಇತರ 12 ಜನರನ್ನು ಶಾರದಾ ಹಗರಣದಲ್ಲಿ ಸಿಲುಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News