ಪೊಲೀಸರಿಂದ ಹಲ್ಲೆ: ಎಸ್‌ಪಿ ನಾಯಕಿ ರಿಚಾ ಸಿಂಗ್ ಪ್ರಜ್ಞಾಹೀನ

Update: 2019-02-12 16:49 GMT

ಅಲಹಾಬಾದ್,ಫೆ.12: ಯುವ ನಾಯಕಿ ಹಾಗೂ ಎಸ್‌ಪಿ ವಕ್ತಾರರಾದ ರಿಚಾ ಸಿಂಗ್ ಅವರ ಮೇಲೆ ಮಂಗಳವಾರ ಮಧ್ಯಾಹ್ನ ಹಲ್ಲೆ ನಡೆದಿದೆ. ಪೊಲೀಸರು ಈ ಹಲ್ಲೆಯನ್ನು ನಡೆಸಿದ್ದರೆನ್ನಲಾಗಿದ್ದು, ರಕ್ತಸ್ರಾವವಾಗುತ್ತಿದ್ದ ರಿಚಾರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿಯೇ ಬಿಟ್ಟು ತೆರಳಿದ್ದರು ಎಂದು ಆರೋಪಿಸಲಾಗಿದೆ.

ಕೆಲವು ಪ್ರತಿಭಟನಾಕಾರರು ರಿಚಾರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದಾಗ ಪೊಲೀಸರು ಆಕೆಯನ್ನು ಬಂಧಿಸಿ ಠಾಣೆಗೆ ಕರೆದೊಯ್ದರು.

ಬೆಳಗ್ಗೆ ಅಲಹಾಬಾದ್ ವಿವಿಯ ವಿದ್ಯಾರ್ಥಿ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಅಖಿಲೇಶ್ ರನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತವು ತಡೆದಿತ್ತು. ಇದನ್ನು ವಿರೋಧಿಸಿ ಅಲಹಾಬಾದ್‌ನಲ್ಲಿ ಕಾರ್ಯಕರ್ತರು ಜಾಥಾ ನಡೆಸಿದ್ದು,ಅವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.

ಹಲವಾರು ಎಸ್‌ಪಿ ನಾಯಕರು ಲಾಠಿಪ್ರಹಾರದಿಂದ ಗಾಯಗೊಂಡಿದ್ದಾರೆ, ಆದರೆ ರಿಚಾರನ್ನು ಪೊಲೀಸರು ಬರ್ಬರವಾಗಿ ಥಳಿಸಿದ್ದು,ಅವರ ತಲೆಗೆ ಗಾಯವಾಗಿದೆ,ಎರಡು ಹಲ್ಲುಗಳು ಮುರಿದಿವೆ ಎಂದು ಎಸ್‌ಪಿ ಛಾತ್ರ ಸಭಾ ನಾಯಕ ಇಲಿಯಾಸ್ ‌ಅದ್ನಾನ್ ಆರೋಪಿಸಿದ್ದಾರೆ.

ರಿಚಾ ಮಾಜಿ ವಿದ್ಯಾರ್ಥಿ ನಾಯಕಿಯಾಗಿದ್ದು, ಅಲಹಾಬಾದ್ ವಿವಿ ವಿದ್ಯಾರ್ಥಿ ಸಂಘದ 119 ವರ್ಷಗಳ ಇತಿಹಾಸದಲ್ಲಿ ಅಧ್ಯಕ್ಷ ಸ್ಥಾನ ನಿರ್ವಹಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News