ಪೌರತ್ವ ತಿದ್ದುಪಡಿ, ತ್ರಿವಳಿ ತಲಾಖ್ ಮಸೂದೆ ರದ್ದಾಗುವ ಸಾಧ್ಯತೆ

Update: 2019-02-13 14:13 GMT

ಹೊಸದಿಲ್ಲಿ, ಫೆ.13: ರಾಜ್ಯಸಭೆ ಬುಧವಾರ ಅನಿರ್ದಿಷ್ಟ ಕಾಲಕ್ಕೆ ಮುಂದೂಡಲ್ಪಟ್ಟಿರುವ ಹಿನ್ನೆಲೆಯಲ್ಲಿ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆ ಹಾಗೂ ತ್ರಿವಳಿ ತಲಾಖ್ ನಿಷೇಧಿಸುವ ಮಸೂದೆ ಜೂನ್ 3ರಂದು ರದ್ದಾಗುವ ಸಾಧ್ಯತೆಯಿದೆ. ಹಾಲಿ ಲೋಕಸಭೆಯ ಅವಧಿ ಜೂನ್ 3ಕ್ಕೆ ಅಂತ್ಯಗೊಳ್ಳಲಿದೆ.

ಈಗ ನಡೆಯುತ್ತಿರುವ ಬಜೆಟ್ ಅಧಿವೇಶನ ಈಗಿನ ಸರಕಾರದ ಅಂತಿಮ ಸಂಸತ್ ಕಲಾಪವಾಗಿರುತ್ತದೆ ಮತ್ತು 17ನೇ ಲೋಕಸಭೆಯನ್ನು ಜೂನ್ 3ರೊಳಗೆ ರಚಿಸಬೇಕಿದೆ. ರಾಜ್ಯಸಭೆಯಲ್ಲಿ ಮಂಡಿಸಲ್ಪಟ್ಟು ಬಾಕಿ ಉಳಿದಿರುವ ಮಸೂದೆಗಳು ಹಾಲಿ ಲೋಕಸಭೆಯ ವಿಸರ್ಜನೆಯ ಬಳಿಕವೂ ಊರ್ಜಿತದಲ್ಲಿರುತ್ತವೆ. ಆದರೆ ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟು ರಾಜ್ಯಸಭೆಯಲ್ಲಿ ಬಾಕಿ ಇರುವ ಮಸೂದೆಗಳು ರದ್ದಾಗುತ್ತವೆ. ರಾಜ್ಯಸಭೆಯಲ್ಲಿ ಈಗಿನ ಸರಕಾರಕ್ಕೆ ಬಹುಮತದ ಕೊರತೆಯಿದೆ. ಪೌರತ್ವ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಜನವರಿ 8ರಂದು ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗಿದ್ದು ರಾಜ್ಯಸಭೆಯ ಒಪ್ಪಿಗೆಯನ್ನು ನಿರೀಕ್ಷಿಸುತ್ತಿದೆ. ಈ ಮಸೂದೆಗೆ ಅಸ್ಸಾಂ ಹಾಗೂ ಇತರ ಈಶಾನ್ಯ ರಾಜ್ಯಗಳಲ್ಲಿ ಭಾರೀ ವಿರೋಧವಿದೆ.

ಅಸ್ಸಾಂ ಒಪ್ಪಂದದ ಪ್ರಕಾರ, 1971ರ ಬಳಿಕ ಭಾರತಕ್ಕೆ ಆಗಮಿಸಿರುವ ಪ್ರತಿಯೊಬ್ಬರನ್ನೂ (ಧಾರ್ಮಿಕ ಹಿನ್ನೆಲೆ ಗಮನಿಸದೆ) ಗಡೀಪಾರು ಮಾಡಬೇಕಿದೆ. ಆದರೆ ಹೊಸ ಮಸೂದೆಯ ಪ್ರಕಾರ, 2014ರ ಡಿಸೆಂಬರ್ 31ರ ಒಳಗೆ ಭಾರತಕ್ಕೆ ಆಗಮಿಸಿರುವ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡಲಾಗುವುದು. ದೇಶ ವಿಭಜನೆಯ ಸಂತ್ರಸ್ತರ ವಿರುದ್ಧ ನಡೆದಿದ್ದ ಅನ್ಯಾಯಕ್ಕೆ ಇದು ಪರಿಹಾರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ಈ ಮಸೂದೆಗೆ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ ಮತ್ತು ಮಣಿಪುರದ ಬಿಜೆಪಿ ಮುಖ್ಯಮಂತ್ರಿಗಳಿಂದಲೇ ಭಾರೀ ವಿರೋಧ ವ್ಯಕ್ತವಾಗಿದೆ. ತ್ರಿವಳಿ ತಲಾಖ್ ನಿಷೇಧ ಮಸೂದೆಯು ತಕ್ಷಣದ ತ್ರಿವಳಿ ತಲಾಖ್ ಪ್ರಕ್ರಿಯೆಯನ್ನು ದಂಡನೀಯ ಅಪರಾಧವೆಂದು ಘೋಷಿಸಿದೆ. ಆದರೆ ಈ ಮಸೂದೆಯಲ್ಲಿ ಅಡಕವಾಗಿರುವ, ಪತ್ನಿಗೆ ವಿಚ್ಛೇದನ ನೀಡುವ ಪತಿಗೆ ಜೈಲು ಶಿಕ್ಷೆ ನೀಡುವುದು ಕಾನೂನುಬದ್ಧವಾಗಿ ಅಸಮರ್ಥನೀಯವಾಗಿದೆ ಎಂದು ವಿಪಕ್ಷಗಳು ಆಕ್ಷೇಪ ಎತ್ತಿವೆ.

ಈ ಮಸೂದೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂಬ ವಾದದ ಹಿನ್ನೆಲೆಯಲ್ಲಿ ಕೆಲವೊಂದು ತಿದ್ದುಪಡಿ ಮಾಡಿರುವ ಸರಕಾರ, ಪತ್ನಿಯ ಹೇಳಿಕೆಯನ್ನು ಆಲಿಸಿದ ಬಳಿಕ ನ್ಯಾಯಾಧೀಶರು ಜಾಮೀನು ನೀಡುವ ಬಗ್ಗೆ ಪರಿಶೀಲಿಸಬಹುದು ಎಂಬ ಅಂಶವನ್ನು ಸೇರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News