ಮಲಗುಂಡಿ ಸ್ವಚ್ಛತೆಗೆ ಮಾನವರ ಬಳಕೆ: ಈ ರಾಜ್ಯದಲ್ಲಿ ಅತಿ ಹೆಚ್ಚು ಸಾವು

Update: 2019-02-13 17:10 GMT

ಚೆನ್ನೈ, ಫೆ. 13: ಮಲಗುಂಡಿ ಸ್ವಚ್ಛತೆಗೆ ಮಾನವರ ಬಳಕೆಯಿಂದ ಕಳೆದ ಐದು ವರ್ಷಗಳಲ್ಲಿ ತಮಿಳುನಾಡಿನಲ್ಲಿ ಅತ್ಯಧಿಕ ಸಾವು ಸಂಭವಿಸಿದೆ. ತಮಿಳುನಾಡಿನಲ್ಲಿ 144 ಸಾವು ಸಂಭವಿಸಿದೆ. ಅನಂತರ ಸ್ಥಾನವನ್ನು ಉತ್ತರಪ್ರದೇಶ ಪಡೆದುಕೊಂಡಿದೆ.

ತಮಿಳುನಾಡಿನಲ್ಲಿ ಉತ್ತರಪ್ರದೇಶಕ್ಕಿಂತ ದ್ವಿಗುಣ ಸಂಖ್ಯೆಯಲ್ಲಿ ಸಾವು ಸಂಭವಿಸಿದೆ. ಲೋಕಸಭೆಯಲ್ಲಿ ಕೇರಳದ ಕಾಂಗ್ರೆಸ್ ಸಂಸದ ಮುಲ್ಲಪಳ್ಳಿ ರಾಮಚಂದ್ರನ್ ಅವರು ಸರಣಿ ಪ್ರಶ್ನೆಗಳನ್ನು ಕೇಳಿದ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ಸಹಾಯಕ ಸಚಿವ ರಾಮದಾಸ್ ಅಠಾವಳೆ ಈ ಮಾಹಿತಿ ಬಿಡುಗಡೆ ಮಾಡಿದರು. ಒಳ ಚರಂಡಿ ಸ್ವಚ್ಛಗೊಳಿಸುತ್ತಿರುವ ಸಂದರ್ಭ ಕಳೆದ ಐದು ವರ್ಷಗಳಲ್ಲಿ ಮೃತಪಟ್ಟವರ ಸಂಖ್ಯೆಯ ಬಗ್ಗೆ ಮಾಹಿತಿ ನೀಡುವಂತೆ ಮುಲ್ಲಪಳ್ಳಿ ರಾಮಚಂದ್ರನ್ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಅಠಾವಳೆ ಮಾಹಿತಿ ನೀಡಿದರು.

2013ರಿಂದ 2018ರ ವರೆಗೆ ತಮಿಳುನಾಡಿನಲ್ಲಿ 144 ಸಾವು ಸಂಭವಿಸಿದೆ. ಅನಂತರ ಸ್ಥಾನ ಪಡೆದ ಉತ್ತರಪ್ರದೇಶದಲ್ಲಿ ಇದೇ ಅವಧಿಯಲ್ಲಿ 71 ಸಾವು ದಾಖಲಾಗಿದೆ. ತಮಿಳುನಾಡಿನಲ್ಲಿ ಸಂಭವಿಸಿದ 144 ಸಾವುಗಳಲ್ಲಿ 141 ಪ್ರಕರಣಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಾಗಿದೆ ಎಂದು ಅವರು ತಿಳಿಸಿದರು. ಕರ್ನಾಟಕ, ರಾಜಸ್ಥಾನ ಹಾಗೂ ದಿಲ್ಲಿ ಹೊರತುಪಡಿಸಿದರೆ ಇತರ ಯಾವುದೇ ರಾಜ್ಯಗಳು ಮನುಷ್ಯರನ್ನು ಬಳಸಿ ಮಲಗುಂಡಿ ಸ್ವಚ್ಛಗೊಳಿಸುತ್ತಿರುವ ಬಗ್ಗೆ ಪ್ರಥಮ ಮಾಹಿತಿ ವರದಿ ದಾಖಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News