ದಿಲ್ಲಿ ದರ್ಬಾರ್

Update: 2019-02-16 18:56 GMT

ರಾಹುಲ್ ವಿರೋಧದ ಪ್ರಮಾದ
ಸಂಸತ್ ಅಧಿವೇಶನದ ಕೊನೆಯ ದಿನ ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದ ವಿವಾದದ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿಯವರು ತಾಯಿ ಸೋನಿಯಾಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜತೆ ಸೇರಿ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್‌ನ ಅಗ್ರನಾಯಕರು ಪ್ರತಿಭಟನೆ ನಡೆಸುತ್ತಿದ್ದರೆ, ಕಾಗದ ಜೆಟ್‌ಗಳು ಸುತ್ತಲೂ ಹಾರಾಡುತ್ತಿದ್ದವು. ದೇಶದ ಅತ್ಯುನ್ನತ ಪರಿಶೋಧಕ ಸಂಸ್ಥೆಯಾದ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯನ್ನು ಸಂಸತ್ತಿನಲ್ಲಿ ಮಂಡಿಸುವ ಮುನ್ನ ಕಾಂಗ್ರೆಸ್ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆದರೆ ವಾಸ್ತವವಾಗಿ ತಪ್ಪು ಪ್ರತಿಭಟನೆ ಮೂಲಕ ಗಾಂಧಿ ಆರಂಭದಲ್ಲಿ ಎಡವಿದರು. ಗುಲಾಂ ನಬಿ ಆಝಾದ್ ಮತ್ತು ಇತರ ಕಾಂಗ್ರೆಸ್ ಮುಖಂಡರು ಹಿಂದಿನಿಂದ ಅವರನ್ನು ಕರೆದು ತಪ್ಪುದಿಕ್ಕಿನಲ್ಲಿ ಸಾಗುತ್ತಿದ್ದೀರಿ ಎಂದು ಹೇಳುವ ಪ್ರಯತ್ನ ಮಾಡಿದರು. ನಿಜವಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದ ಅನತಿ ದೂರದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರ ಪ್ರತಿಭಟನೆಯೂ ನಡೆಯುತ್ತಿತ್ತು. ರಾಹುಲ್‌ಗಾಂಧಿ ಅದನ್ನು ತಪ್ಪಾಗಿ ಕಾಂಗ್ರೆಸ್ ಪ್ರತಿಭಟನೆ ಎಂದು ಭಾವಿಸಿ ಅತ್ತ ಹೆಜ್ಜೆ ಇಟ್ಟಿದ್ದರು. ಆದರೆ ಪ್ರಮಾದ ಸಂಭವಿಸಿದ್ದು ಈ ಹಂತದಲ್ಲಿ. ಮಮತಾ ಬ್ಯಾನರ್ಜಿಯವರತ್ತ ಧಾವಿಸಿದ ರಾಹುಲ್‌ಗಾಂಧಿ ಮಮತಾ ಹಾಜರಾಗಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಫೋಟೊಗ್ರಾಫರ್‌ಗಳಂತೂ ಈ ದೃಶ್ಯವನ್ನು ಪದೇ ಪದೇ ಕ್ಲಿಕ್ಕಿಸಿಕೊಂಡರು. ರಾಹುಲ್‌ಗಾಂಧಿ ಹೆಚ್ಚು ಹೊತ್ತು ಅಲ್ಲಿ ನಿಲ್ಲದೇ ತಮ್ಮ ಪಕ್ಷದ ಪ್ರತಿಭಟನೆಯತ್ತ ನಡೆದರು. ಈ ಚಿತ್ರಗಳಿಂದಾಗಿ ಪಶ್ಚಿಮ ಬಂಗಾಳದಲ್ಲಿ ಉಭಯ ಪಕ್ಷಗಳ ನಡುವೆ ಮೈತ್ರಿ ಏರ್ಪಡುತ್ತಿದೆ ಎಂದು ಜನ ಭಾವಿಸುವಂತಾಗಿದೆ. ಆದರೆ ಅದು ಬಹುತೇಕ ಅಸಂಭವ.


ಶರ್ಮಿಷ್ಠಾ ಬಗ್ಗೆ ಸಂದೇಹ
ಶರ್ಮಿಷ್ಠಾ ಮುಖರ್ಜಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥೆ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದು ಬಂಗಾಲ ಹಾಗೂ ದಿಲ್ಲಿಯಲ್ಲಿ ಹಲವು ವದಂತಿಗಳಿಗೆ ಕಾರಣವಾಗಿದೆ. ಶರ್ಮಿಷ್ಠಾ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪುತ್ರಿ ಹಾಗೂ ರಾಹುಲ್ ಗಾಂಧಿ ನೇತೃತ್ವದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು 2014ರಲ್ಲಿ ಸೇರಿದ್ದರು. ಕ್ಷಿಪ್ರ ಅವಧಿಯಲ್ಲೇ ಅವರು ದಿಲ್ಲಿ ಕಾಂಗ್ರೆಸ್‌ನಲ್ಲಿ ಉನ್ನತ ಮಟ್ಟಕ್ಕೆ ಬೆಳೆದರು. ಅವರು ದಿಲ್ಲಿ ಮಹಿಳಾ ಕಾಂಗ್ರೆಸ್ ವಿಭಾಗದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಇದರ ಜತೆಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮಾಧ್ಯಮ ಪ್ಯಾನಲಿಸ್ಟ್ ಆಗಿ ಹಾಗೂ ಮುಖ್ಯ ವಕ್ತಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಅವರ ರಾಜೀನಾಮೆ ಸುದ್ದಿ ಹರಡುತ್ತಿದ್ದಂತೆಯೇ, ಇವರು ಬಿಜೆಪಿ ಸೇರುತ್ತಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿತು. ಇತ್ತೀಚೆಗಷ್ಟೇ ಬಿಜೆಪಿ ಸರಕಾರ ಅವರ ತಂದೆಗೆ ಭಾರತ ರತ್ನ ಪ್ರಶಸ್ತಿ ನೀಡಿತ್ತು. ಇದಾದ ಬಳಿಕ ಕೆಲ ಬಿಜೆಪಿ ಮುಖಂಡರು ಪತ್ರಕರ್ತರಿಗೆ ಹೇಳಿದಂತೆ ಅವರು 2019ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಮಾಲ್ಡಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಈ ವದಂತಿ ಎಲ್ಲೆಡೆ ಹರಡುತ್ತಿರುವಾಗಲೇ, ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲೂ ಈ ಬಗ್ಗೆ ಚರ್ಚೆ ಆರಂಭವಾಯಿತು. ಆದರೆ ಇಂತಹ ಯಾವುದೇ ಯೋಜನೆ ಇಲ್ಲ ಎಂದು ಕೊನೆಗೆ ಶರ್ಮಿಷ್ಠಾ ಅವರೇ ಸ್ಪಷ್ಟಪಡಿಸಬೇಕಾಯಿತು. ಅವರ ತಂದೆ ಬಿಜೆಪಿ ಬಗ್ಗೆ ಮೆದು ಧೋರಣೆ ಹೊಂದಿದ್ದಾರೆ ಎಂಬ ಸಂದೇಹ ಇದ್ದ ಹಲವರು ಇದೀಗ ಅವರನ್ನು ತೆಗಳಲು ಆರಂಭಿಸಿದ್ದಾರೆ. ಆದರೆ ಸದ್ಯಕ್ಕೆ ಅದು ಕೂಡಾ ಕೇವಲ ವದಂತಿ. ಆದರೆ ಇದು ರಾಜಕೀಯವಾಗಿರುವುದರಿಂದ ಯಾವುದನ್ನೂ ನಾವು ತಳ್ಳಿಹಾಕಲು ಸಾಧ್ಯವಿಲ್ಲ.


ಪ್ರಿಯಾಂಕಾ ಅಚ್ಚರಿ
ಪ್ರಿಯಾಂಕಾಗಾಂಧಿ ಸಕ್ರಿಯ ರಾಜಕಾರಣಕ್ಕೆ ಧುಮುಕಿರುವುದು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿರುವುದು ಮಾತ್ರವಲ್ಲದೆ, ಇವರನ್ನು ಪೂರ್ವ ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಿದ ತಕ್ಷಣ ಉತ್ತರ ಪ್ರದೇಶದಲ್ಲಿ ಹೊಸ ಮಿತ್ರ ಪಕ್ಷವನ್ನು ಸಂಪಾದಿಸಲು ಕೂಡಾ ಕಾಂಗ್ರೆಸ್ ಪಕ್ಷಕ್ಕೆ ನೆರವಾಗಿದೆ. ಇವರು ದಿನಕ್ಕೆ 13-15 ಗಂಟೆ ಕಾಲ ಪಕ್ಷದ ಕಾರ್ಯಕರ್ತರ ಜತೆಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಇದರ ಮಧ್ಯೆಯೂ ಕೆಲ ರಾಜಕೀಯ ತಂತ್ರಗಾರಿಕೆಗೆ ಅವರಿಗೆ ಸಮಯ ಸಿಗುತ್ತಿದೆ. ಉದಾಹರಣೆಗೆ ಕೇಶವ ದೇವ್ ಮೌರ್ಯ ನೇತೃತ್ವದ ಹಿಂದುಳಿದ ವರ್ಗದ ಪ್ರಾಬಲ್ಯವಿರುವ ಮಹಾನ್ ದಳ ಜತೆ ಅವರು ಮೈತ್ರಿ ಸಾಧಿಸಿದ್ದಾರೆ. ಇದು ಸಣ್ಣ ಪಕ್ಷ ಇರಬಹುದು; ಆದರೆ ಮೌರ್ಯ ಪರಿಣಾಮಕಾರಿ ಭಾಷಣ ಮಾಡಬಲ್ಲ ರಾಜಕಾರಣಿ. ಆ ಬಳಿಕ ಬಿಜೆಪಿಯ ಹಾಲಿ ಶಾಸಕ ಅವತಾರ್ ಸಿಂಗ್ ಭಡಾನಾ ಅವರು ಕಾಂಗ್ರೆಸ್ ಪಕ್ಷ ಸೇರಿರುವುದನ್ನು ಪಕ್ಷ ಘೋಷಿಸಿತು. ಭಡಾನಾ ಸಣ್ಣ ನಾಯಕರೇನೂ ಅಲ್ಲ. ಇವರು ಹರ್ಯಾಣಾದ ಫರೀದಾಬಾದ್‌ನಿಂದ ಮೂರು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದರು. ಉತ್ತರ ಪ್ರದೇಶದ ಮೀರತ್‌ನ್ನು ಒಂದು ಬಾರಿ ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು. ಬಿಜೆಪಿಗೆ ಜಿಗಿಯುವ ಮುನ್ನ ಅವರು ದೀರ್ಘಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದರು. ಪಶ್ಚಿಮ ಉತ್ತರ ಪ್ರದೇಶದ ಗುರ್ಜಾರ್ ಪ್ರಾಬಲ್ಯದ ಪ್ರದೇಶಗಳಲ್ಲಿ ಇವರು ಪ್ರಭಾವಿ ವ್ಯಕ್ತಿ. ಪ್ರಿಯಾಂಕಾ ಕಾರಣದಿಂದ ಇನ್ನಷ್ಟು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ಪಕ್ಷ ಹೇಳಿಕೊಂಡಿದೆ. ಆದರೆ ನಿಜವಾಗಿಯೂ ಪ್ರಿಯಾಂಕಾ ಕಾರ್ಯಸಾಧನೆ ಮಾಡುತ್ತಾರೆಯೇ ಅಥವಾ ಇದು ಕೇವಲ ಚುನಾವಣಾ ಕಣದ ಕೆಲ ತುಣುಕುಗಳಾಗಿ ಉಳಿಯುತ್ತವೆಯೇ ಎನ್ನುವುದನ್ನು ಕಾದು ನೋಡಬೇಕು.


ಮತ್ತೆ ತಿರುಗಿದ ಅಮರ್ ಸಿಂಗ್?
ಪ್ರಿಯಾಂಕಾಗಾಂಧಿ ರಾಜಕೀಯ ಪ್ರವೇಶಿಸಿರುವುದು ಬಿಜೆಪಿಯ ಹೊರಗೆ ಕೂಡಾ ಹಲವು ವಿಪ್ಲವಗಳಿಗೆ ಕಾರಣವಾಗುತ್ತಿದೆ. ಚುನಾವಣಾ ದಿನ ಸಮೀಪಿಸುತ್ತಿದ್ದಂತೆ, ರಾಜಕೀಯ ರೂಪಾಂತರಗಳು, ಹೊಂದಾಣಿಕೆಗಳು ನಡೆಯುತ್ತಿವೆ ಹಾಗೂ ಈ ಕಸುವು ಅರಿತ ಏಜೆಂಟರು ಪ್ರತ್ಯಕ್ಷವಾಗುತ್ತಾರೆ. ಅಚ್ಚರಿ ಎಂದರೆ ಅಮರ್ ಸಿಂಗ್ ಇತ್ತೀಚೆಗೆ ಸಂಸತ್ತಿನ ಸೆಂಟ್ರಲ್‌ಹಾಲ್‌ನಲ್ಲಿ ಕಾಣಿಸಿಕೊಂಡರು. ಬಿಜೆಪಿ ಸೇರುವ ಆಹ್ವಾನವನ್ನು ತಾನು ತಿರಸ್ಕರಿಸಿದ್ದಾಗಿ ಅವರು ಪಿಸುಗುಟ್ಟುತ್ತಿರುವುದು ಕೇಳಿಬಂತು. ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಜತೆಗೂ ತಾವು ಒಳ್ಳೆಯ ಸಂಬಂಧ ಹೊಂದಿರುವುದಾಗಿ ಬಿಂಬಿಸಿಕೊಂಡರು. ಈ ಹಿಂದೆ ಅಖಿಲೇಶ್ ವಿರುದ್ಧ ಇವರು ಬಂಡಾಯ ಸಾರಿದ್ದರು. ಕಾಂಗ್ರೆಸ್ ಮುತ್ಸದ್ದಿಗಳನ್ನೂ ಕಟುವಾಗಿ ಟೀಕಿಸಿದ ಅವರು, ರಾಹುಲ್‌ಗಾಂಧಿ ನಾಯಕತ್ವದಲ್ಲಿ ಯಾವ ನಿರೀಕ್ಷೆಯೂ ಇಲ್ಲ ಎಂದು ಹೇಳಿದ್ದರು. ಇಷ್ಟಾಗಿಯೂ ಪ್ರಿಯಾಂಕಾ ವಿಚಾರದಲ್ಲಿ ಅವರು ಧನಾತ್ಮಕ ಭಾವನೆ ಹೊಂದಿದ್ದಾರೆ. ಪ್ರಿಯಾಂಕಾ ಅವರನ್ನು ಪ್ರಬುದ್ಧ ಹಾಗೂ ಆಕರ್ಷಕ ವ್ಯಕ್ತಿತ್ವದ ನಾಯಕಿ ಎಂದು ಬಣ್ಣಿಸಿದ್ದಾರೆ. ಮತದಾರರ ಮೇಲೆ ಅವರು ನಾಟಕೀಯ ಪ್ರಭಾವ ಬೀರುತ್ತಾರೆ ಎಂಬ ನಿರೀಕ್ಷೆ ಅವರದ್ದು. ಪ್ರಿಯಾಂಕಾ ಪ್ರವೇಶದಿಂದ ಆಗಬಹುದಾದ ಪರಿಣಾಮದ ಬಗ್ಗೆ ಯಾವ ರಾಜಕೀಯ ಪಂಡಿತರೂ ಕಾಣದ ಲೆಕ್ಕಾಚಾರಗಳನ್ನು ಅವರು ಕಾಣುತ್ತಿದ್ದಾರೆಯೇ? ಅಮರ್‌ಸಿಂಗ್ ಮನಸ್ಸಿಗೆ ತೋಚಿದ್ದನ್ನು ಥಟ್ಟನೇ ಹೇಳಿಬಿಡುವ ರಾಜಕಾರಣಿ ಹಾಗೂ ಉತ್ತಮ ರಾಜಕೀಯ ವೀಕ್ಷಕ ಕೂಡಾ. ಆದರೆ ಕೆಲ ತಿಂಗಳುಗಳ ಹಿಂದಿನಂತೆ ಅವರು ಈಗ ಮೋದಿಯನ್ನು ಮುಕ್ತವಾಗಿ ಹೊಗಳುತ್ತಿಲ್ಲ. ಇದು ಅಮರ್‌ಸಿಂಗ್ ದೃಷ್ಟಿಕೋನದಲ್ಲಿ ರಾಜಕೀಯ ಹೇಗೆ ರೂಪುಗೊಳ್ಳುತ್ತಿದೆ ಎನ್ನುವ ಸುಳಿವನ್ನು ಸ್ಪಷ್ಟವಾಗಿ ನೀಡುತ್ತಿದೆ.


ಕನ್ಹಯ್ಯ ಕುಮಾರ್ ಎಂಬ ಉದಯತಾರೆ
ಜವಾಹರ್‌ಲಾಲ್ ವಿವಿಯ ಮಾಜಿ ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್, ವಿದ್ಯಾರ್ಥಿ ಹೋರಾಟದ ಮುಂಚೂಣಿಯಲ್ಲಿರುವವರು ಹಾಗೂ ಇತ್ತೀಚಿನ ದಿನಗಳಲ್ಲಿ ಮೋದಿ ವಿರೋಧಿ ಪ್ರಚಾರವನ್ನು ಪರಿಣಾಮಕಾರಿಯಾಗಿ ಮಾಡುತ್ತಿರುವವರಲ್ಲೊಬ್ಬರು. ಇತ್ತೀಚೆಗೆ ಜೆಎನ್‌ಯು ಸಹಪಾಠಿಯೊಬ್ಬರ ವಿವಾಹಕ್ಕಾಗಿ ಅವರು ಭೋಪಾಲ್‌ಗೆ ತೆರಳಿದ್ದರು. ಬಳಿಕ ಗುಜರಾತ್‌ಗೆ ತೆರಳಿ ಹಾರ್ದಿಕ್ ಪಟೇಲ್ ಹಾಗೂ ಜಿಗ್ನೇಶ್ ಮೇವಾನಿಯವರನ್ನು ಭೇಟಿ ಮಾಡಿದರು. ನಂತರ ದಿಲ್ಲಿಯಲ್ಲಿ ಉದ್ಯೋಗಾವಕಾಶಕ್ಕೆ ಆಗ್ರಹಿಸಿ ಯುವಕರು ನಡೆಸಿದ ರ್ಯಾಲಿಯಲ್ಲಿ ಅವರು ಪಾಲ್ಗೊಂಡರು. ಆದರೆ ಬಹುತೇಕ ಅವಧಿಯಲ್ಲಿ ಅವರು ಬಿಹಾರದ ಬೆಗುಸರಾಯ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಬಿಜೆಪಿ ಹಾಗೂ ಜೆಡಿಯು ವಿರೋಧಿಸುವ ಎಲ್ಲ ಪಕ್ಷಗಳ ಬೆಂಬಲ ಪಡೆದು ಪಕ್ಷೇತರ ಅಭ್ಯರ್ಥಿಯಾಗಿ ಅವರು ಈ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎಂಬ ವದಂತಿ ಹಬ್ಬಿದೆ. ಅವರು ಸ್ಥಳೀಯ ಸಮುದಾಯಗಳ ಜತೆ ಚರ್ಚಿಸುತ್ತಿದ್ದಾರೆ ಹಾಗೂ ಬೃಹತ್ ರ್ಯಾಲಿಗಳನ್ನೂ ನಡೆಸುತ್ತಿದ್ದಾರೆ. ಈ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಬಿಂಬಿಸಿಕೊಳ್ಳಲು ಅವರಿಗೆ ಇತರ ಪಕ್ಷಗಳಿಂದ ಹಸಿರು ನಿಶಾನೆ ಸಿಕ್ಕಿದಂತಿದೆ. ಆದರೆ ಇಂಥ ಗಾಳಿಸುದ್ದಿಯನ್ನು ಅವರು ಅಲ್ಲಗಳೆದಿದ್ದಾರೆ ಹಾಗೂ ಚುನಾವಣೆ ಘೋಷಣೆಯಾದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡುತ್ತೇನೆ ಎಂದು ಇತ್ತೀಚೆಗೆ ಅವರು ಹೇಳಿದ್ದಾರೆ. ಆದರೆ ವೀಕ್ಷಕರ ಅಭಿಮತದಂತೆ ಅವರು ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಬಹುಶಃ ಇದು ಚುನಾವಣೆಯಲ್ಲಿ ಇಡೀ ದೇಶದ ಜನರ ಗಮನ ಸೆಳೆಯುವ ಕ್ಷೇತ್ರವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News