ಪುಲ್ವಾಮ ಉಗ್ರ ದಾಳಿ: ದ್ವೇಷ ಹರಡುವವರ ವಿರುದ್ಧ ಸಿಡಿದೆದ್ದ ಸಾನಿಯಾ ಮಿರ್ಝಾ ಹೇಳಿದ್ದೇನು?

Update: 2019-02-17 12:18 GMT

ಹೈದರಾಬಾದ್, ಫೆ.17: ಪುಲ್ವಾಮಾ ಆತ್ಮಹತ್ಯಾ ದಾಳಿಯ ಬಳಿಕ ದ್ವೇಷ ಹರಡುತ್ತಿರುವ ಜನರ ವಿರುದ್ಧ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಝಾ ಸಿಡಿದೆದ್ದಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಕಳೆದ 3 ದಶಕಗಳಲ್ಲಿ ನಡೆದ ಅತ್ಯಂತ ಕರಾಳ ಘಟನೆ ಎನ್ನಲಾದ ಈ ದಾಳಿಯಲ್ಲಿ ಸಿಆರ್‍ ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ಸುಗಳಿಗೆ ಸ್ಫೋಟಕಗಳಿಂದ ತುಂಬಿದ್ದ ಎಸ್‍ಯುವಿ ಢಿಕ್ಕಿ ಹೊಡೆಸಲಾಗಿತ್ತು. ಘಟನೆಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.

ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷದ ಪರಿಸ್ಥಿತಿ ತಲೆದೋರಿದಾಗಲೆಲ್ಲ, ಪಾಕಿಸ್ತಾನಿ ಕ್ರಿಕೆಟರ್ ಶೋಯೆಬ್ ಮಲಿಕ್ ಅವರನ್ನು ವಿವಾಹವಾದ ಸಾನಿಯಾ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಗುರಿ ಮಾಡಲಾಗುತ್ತದೆ. ಈ ಬಾರಿ ಇಂಥ ದ್ವೇಷ ಹರಡುತ್ತಿರುವವರ ವಿರುದ್ಧ ಮಿರ್ಝಾ ತಿರುಗಿ ಬಿದ್ದಿದ್ದಾರೆ.

ಟ್ವಿಟ್ಟರ್‍ನಲ್ಲಿ ಸುದೀರ್ಘ ಟ್ವೀಟ್ ಮಾಡಿರುವ ಮಿರ್ಜಾ, "ಸೆಲೆಬ್ರಿಟಿಗಳು ಈ ದಾಳಿಯನ್ನು ಖಂಡಿಸಬೇಕಿತ್ತು ಎನ್ನುವವರಿಗಾಗಿ ಈ ಟ್ವೀಟ್. ನಾವು ದೇಶಭಕ್ತರು ಎಂದು ಟ್ವಿಟರ್, ಇನ್‍ಸ್ಟಾಗ್ರಾಂ ಹಾಗೂ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಏಕೆ ನಿರೂಪಿಸಬೇಕು?, ಹತಾಶರಾಗಿರುವ ನಿಮ್ಮಲ್ಲಿ ಕೆಲವರಿಗೆ ಹಾಗೂ ಇನ್ನಷ್ಟು ದ್ವೇಷ ಹರಡುವ ಅವಕಾಶ ಸೆಳೆದುಕೊಳ್ಳುವವರಿಗೆ ನಿಮ್ಮ ಆಕ್ರೋಶವನ್ನು ಗುರಿ ಮಾಡಲು ಸೆಲೆಬ್ರಿಟಿಗಳಾದ ನಾವು ಬಿಟ್ಟರೆ ಬೇರೆ ಯಾರೂ ಸಿಗುವುದಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.

"ನಾವು ಭಯೋತ್ಪಾದನೆಗೆ ವಿರುದ್ಧ; ಎಲ್ಲರೂ ಉಗ್ರವಾದಕ್ಕೆ ವಿರುದ್ಧವೇ ಆಗಿರಬೇಕು. ಈ ದಾಳಿಯಿಂದ ತೀವ್ರ ದುಃಖವಾಗಿದೆ. ಈ ದಿನವನ್ನು ಎಂದೂ ಮರೆಯಲಾಗದು ಮತ್ತು ಕ್ಷಮಿಸಲಾಗದು. ಶಾಂತಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ" ಎಂದು ಹೇಳಿದ್ದಾರೆ. ಫೆಬ್ರವರಿ 14 ಭಾರತದ ಪಾಲಿಗೆ ಕರಾಳ ದಿನ ಎಂದು ಅವರು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News