ಸೇನಾ ತರಬೇತಿಗೆ ಸಜ್ಜಾದ 150ಕ್ಕೂ ಅಧಿಕ ಮುಸ್ಲಿಂ ಯುವಕರು

Update: 2019-02-18 17:20 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.18: ಭಾರತೀಯ ಸೇನೆಗೆ ಸೇರುವ ಕನಸು ಕಟ್ಟಿಕೊಂಡಿದ್ದ ಯುವಕರಿಗೆ ರಾಜ್ಯದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಯೋಜನೆಯೊಂದು ವರದಾನವಾಗಿದ್ದು, ಇದರಿಂದ ನಾಡಿನ ವಿವಿಧ ಜಿಲ್ಲೆಗಳ 150ಕ್ಕೂ ಅಧಿಕ ಮುಸ್ಲಿಂ ಸಮುದಾಯದ ಯುವಕರು ಸೇನಾ ತರಬೇತಿ ಪಡೆಯಲು ಸಜ್ಜುಗೊಂಡಿದ್ದಾರೆ.

ಭಾರತೀಯ ಸೇನೆಗೆ ಸೇರಲು ಇಚ್ಛಿಸುವ ಯುವಕರಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯ ವೇದಿಕೆ ಕಲ್ಪಿಸಿ 2018-19ನೇ ಸಾಲಿನಲ್ಲಿ ‘ಸೈನಿಕ ರ‍್ಯಾಲಿ’ ಕಾರ್ಯಕ್ರಮ ಏರ್ಪಡಿಸಿತ್ತು. ಸೇನೆಗೆ ಅಭ್ಯರ್ಥಿಗಳು ಆಯ್ಕೆ ಆಗುವ ಸಂಬಂಧ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ, ವಸತಿ ಮತ್ತು ಊಟದ ವ್ಯವಸ್ಥೆಯನ್ನೂ ನೀಡಿದೆ. ಇದೇ ಸಾಲಿನ ಜನವರಿ 16ರಿಂದ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಮತ್ತು ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ವಿವಿಧ ಕಡೆಗಳಿಂದ 400ಕ್ಕೂ ಅಧಿಕ ಯುವಕರು ಅರ್ಜಿ ಸಲ್ಲಿಸಿದ್ದರು.

ಬಳಿಕ, ನಿರ್ದೇಶನಾಲಯವು ಅರ್ಜಿದಾರರ ಶೈಕ್ಷಣಿಕ ಅರ್ಹತೆಯ ಬಗ್ಗೆ ಮೂಲ ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ, ದೇಹದಾರ್ಢ್ಯತೆ ಪರೀಕ್ಷೆಯನ್ನು ನಡೆಸಿ, 175 ಅರ್ಹ ಯುವಕರನ್ನು ಸೇನಾ ತರಬೇತಿಗೆ ಆಯ್ಕೆ ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಎಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ ಸೇರಿದಂತೆ ಉನ್ನತ ಶಿಕ್ಷಣ ಪಡೆದಿರುವ ಯುವಕರು ಸಹ ಈ ಸೇನಾ ತರಬೇತಿಗೆ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲದೆ, ಹಲವು ಷರತ್ತುಗಳನ್ನು ವಿಧಿಸಿ, ಬದ್ಧತೆಯುಳ್ಳ ಯುವಕರಿಗೆ ಮಾತ್ರ ಅವಕಾಶ ನೀಡಿರುವುದು ವಿಶೇಷವಾಗಿದೆ.

ಗುಣಮಟ್ಟದ ತರಬೇತಿ: ಸೇನಾ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಎರಡು ಜೊತೆ ‘ಟ್ರಾಕ್ ಸೂಟ್’, ಒಂದು ಜೊತೆ ಶೂಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇನ್ನು ಅಭ್ಯರ್ಥಿಗಳ ತರಬೇತಿ ಅವಧಿ 45 ದಿನಗಳಾಗಿದ್ದು, ಶೇಕಡ 80 ರಷ್ಟು ಹಾಜರಾತಿ ಕಡ್ಡಾಯ ಮಾಡಲಾಗಿದೆ.
ಅದು ಅಲ್ಲದೆ, ತರಬೇತಿಯನ್ನು ಮಧ್ಯದಲ್ಲಿ ಬಿಟ್ಟು ಹೋಗುವ ಅಭ್ಯರ್ಥಿಗಳಿಂದ ತರಬೇತಿಗೆ ಆಗಿರುವ ಖರ್ಚು, ವೆಚ್ಚವನ್ನು ವಸೂಲು ಮಾಡಲಾಗುತ್ತದೆ. ಈ ಬಗ್ಗೆ ಅಭ್ಯರ್ಥಿಗಳಿಂದ ಮುಚ್ಚಳಿಕೆ ಪತ್ರಕ್ಕೆ ಸಹಿ ಪಡೆಯಲಾಗಿದೆ.

ಸೈನಿಕ ರ‍್ಯಾಲಿ ಮೂಲಕ ತರಬೇತಿ ಪೂರ್ಣಗೊಳಿಸುವ ಅಭ್ಯರ್ಥಿಗಳು, ಭಾರತೀಯ ಸೇನೆ ಸೇರಿದಂತೆ ಇನ್ನಿತರೆ ಸೇನಾ ವಿಭಾಗದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಾಗ ಅರ್ಜಿ ಸಲ್ಲಿಸುವ ಜೊತೆಗೆ, ಖಚಿತವಾಗಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಇದರಿಂದ ಸೇನೆ ಸೇರುವ ಕನಸು ಸಾಕಾರಗೊಳ್ಳುವಲ್ಲಿ ಎರಡು ಮಾತಿಲ್ಲ.

‘ರಾಜ್ಯದ ಎರಡು ಕಡೆ ತರಬೇತಿ’
ಸೇನಾ ತರಬೇತಿಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳಿಗೆ ಬೆಂಗಳೂರಿನ ಕುಂಬಳಗೋಡು ವ್ಯಾಪ್ತಿಯ ಬೆಂಗಳೂರು ಯೂನಿವರ್ಸಲ್ ಕೋಚಿಂಗ್ ಸೆಂಟರ್ ಹಾಗೂ ಬೆಳಗಾವಿಯ ಇಂಡಿಯನ್ ಐ ಸೆಕ್ಯೂರಿಟಿ ಪ್ರೈ.ಲಿ.ನಲ್ಲಿ 45 ದಿನಗಳ ಕಾಲ ತರಬೇತಿ ನೀಡಲಾಗುತ್ತಿದೆ.

‘ಉಗ್ರವಾದ ನಾಶ ಮಾಡುವೆ’
ಭಾರತೀಯ ಸೇನೆಗೆ ಸೇರಿ ಉಗ್ರವಾದ ನಾಶಪಡಿಸಬೇಕು ಎನ್ನುವುದು ಬಾಲ್ಯದಿಂದಲೇ ನನ್ನ ಕನಸಾಗಿತ್ತು. ಹೀಗಾಗಿಯೇ, ಅಲ್ಪಸಂಖ್ಯಾತರ ನಿರ್ದೇಶನಾಲಯದ ಸೇನಾ ತರಬೇತಿಯಲ್ಲಿ ಭಾಗಿಯಾಗಿದ್ದೇನೆ.
-ನದೀಮ್ ಹೈದರಿ, ಬಸವನಾಳ, ಬೆಳಗಾವಿ

‘ಯುವಕರು ಸೇನೆ ಸೇರಬೇಕು’
ಯುವಜನಾಂಗ ಉತ್ತಮ ಶಿಕ್ಷಣ ಪಡೆಯುವ ಮೂಲಕ ಭಾರತೀಯ ಸೈನ್ಯಕ್ಕೆ ಸೇರಿ ದೇಶದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡಲು ಬದ್ಧರಾಗಬೇಕು. ಹೀಗಾಗಿ, ಇಲಾಖೆಯಲ್ಲಿ ಸೈನಿಕ ರ್ಯಾಲಿ ಮೂಲಕ ತರಬೇತಿ ನೀಡಲಾಗುತ್ತಿದ್ದು, ಇದರಿಂದ ನೂರಾರು ಯುವಕರು, ಭಾರತೀಯ ಸೇನೆ, ವಾಯು ಸೇನೆ ಹಾಗೂ ನೌಕಾಸೇನೆಗೆ ಸೇರಬಹುದಾಗಿದೆ.
-ಅಕ್ರಮ್ ಪಾಷ, ನಿರ್ದೇಶಕ, ಅಲ್ಪಸಂಖ್ಯಾತ ನಿರ್ದೇಶನಾಲಯ

Writer - -ಸಮೀರ್ ದಳಸನೂರು

contributor

Editor - -ಸಮೀರ್ ದಳಸನೂರು

contributor

Similar News