ಉಗ್ರ ಹಣಕಾಸು ನಿಗ್ರಹ: ಗುರಿ ತಲುಪದ ಪಾಕ್

Update: 2019-02-22 17:49 GMT

ಪ್ಯಾರಿಸ್, ಫೆ. 22: ಭಯೋತ್ಪಾದಕರಿಗೆ ಪೂರೈಕೆಯಾಗುತ್ತಿರುವ ಹಣಕಾಸು ನೆರವು ಕಡಿತ ಮಾಡುವಲ್ಲಿ ಪಾಕಿಸ್ತಾನ ‘ಸೀಮಿತ ಪ್ರಗತಿ’ಯನ್ನು ಕಂಡಿದೆ ಹಾಗೂ ಜೈಶೆ ಮುಹಮ್ಮದ್ ಮತ್ತು ಲಷ್ಕರೆ ತಯ್ಯಬ ಮುಂತಾದ ಭಯೋತ್ಪಾದಕ ಗುಂಪುಗಳು ಒಡ್ಡಿರುವ ಬೆದರಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ಅದು ವಿಫಲವಾಗಿದೆ ಎಂದು ಜಾಗತಿಕ ನಿಗಾ ಸಂಸ್ಥೆ ಹಣಕಾಸು ಕ್ರಿಯಾ ಕಾರ್ಯಪಡೆ (ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್- ಎಫ್‌ಎಟಿಎಫ್) ಶುಕ್ರವಾರ ಹೇಳಿದೆ.

‘‘ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವಾರ 40 ಭಾರತೀಯ ಭದ್ರತಾ ಪಡೆಗಳ ಸಾವಿಗೆ ಕಾರಣವಾದ ಭೀಕರ ಭಯೋತ್ಪಾದಕ ದಾಳಿಯನ್ನು ಎಫ್‌ಎಟಿಎಫ್ ಅತ್ಯಂತ ಕಳವಳದಿಂದ ಗಮನಿಸಿದೆ ಹಾಗೂ ಅದನ್ನು ಬಲವಾಗಿ ಖಂಡಿಸುತ್ತದೆ’’ ಎಂದು ಪ್ಯಾರಿಸ್‌ನಲ್ಲಿರುವ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕಳೆದ ವರ್ಷದ ಜೂನ್‌ನಲ್ಲಿ ಎಫ್‌ಎಟಿಎಫ್ ಪಾಕಿಸ್ತಾನವನ್ನು ‘ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವ ದೇಶಗಳ ನಿಗಾ ಪಟ್ಟಿ’ಯಲ್ಲಿರಿಸಿತ್ತು. ಈ ಪಟ್ಟಿಯಿಂದ ಹೊರಬರಲು ಅದಕ್ಕೆ 27 ಅಂಶಗಳ ಕ್ರಿಯಾ ಯೋಜನೆಯೊಂದನ್ನು ನೀಡಲಾಗಿತ್ತು.

ಆದಾಗ್ಯೂ, ಜನವರಿ ವೇಳೆಗೆ ತಾನು ಪೂರ್ಣಗೊಳಿಸಬೇಕಾಗಿದ್ದ ಗುರಿಗಳನ್ನು ತಲುಪುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಎಫ್‌ಎಟಿಎಫ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News