ದಿಲ್ಲಿ ದರ್ಬಾರ್

Update: 2019-03-02 18:39 GMT

ಕೇಜ್ರಿವಾಲ್ ಮತ್ತು ವಾಯುಪಡೆ ದಾಳಿ
ಪಾಕಿಸ್ತಾನ ಪ್ರದೇಶದಲ್ಲಿರುವ ಜೈಶೆ ಮುಹಮ್ಮದ್ ತರಬೇತಿ ಶಿಬಿರಗಳ ಮೇಲೆ ಭಾರತದ ವಾಯುಪಡೆ ನಡೆಸಿದ ದಾಳಿ ಹಿನ್ನೆಲೆಯಲ್ಲಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದಿಲ್ಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಮಾರ್ಚ್ 1ರಿಂದ ಆರಂಭಿಸಲು ಉದ್ದೇಶಿಸಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಂದೂಡಿದರು.

‘‘ಭಾರತ-ಪಾಕಿಸ್ತಾನದ ಸಂಘರ್ಷ ಸ್ಥಿತಿಯ ಹಿನ್ನೆಲೆಯಲ್ಲಿ, ದಿಲ್ಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆಸಲು ಉದ್ದೇಶಿಸಿದ್ದ ನನ್ನ ಉಪವಾಸವನ್ನು ಮುಂದೂಡಿದ್ದೇನೆ’’ ಎಂದು ಮಂಗಳವಾರ ಕೇಜ್ರಿವಾಲ್ ಟ್ವೀಟ್ ಮಾಡಿದರು. ದಿಲ್ಲಿ ಮುಖ್ಯಮಂತ್ರಿಯ ಈ ಹೇಳಿಕೆ ಆಮ್ ಆದ್ಮಿ ಪಕ್ಷದ ಕೆಲ ಮುಖಂಡರಿಗೆ ಇದು ವರದಾನ ಎನಿಸಿತು. ಏಕೆಂದರೆ ಉಪವಾಸ ಕುರಿತ ದಿಲ್ಲಿ ಸಿಎಂ ಘೋಷಣೆಗೆ ಪಕ್ಷದ ಕಾರ್ಯಕರ್ತರಲ್ಲಿ ಕೂಡಾ ಯಾವುದೇ ಉತ್ಸಾಹದಾಯಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಜನ ಈ ನಿರ್ಧಾರವನ್ನು ಸಂಶಯದಿಂದಲೇ ನೋಡಿದ್ದರು. ದಿಲ್ಲಿಗೆ ರಾಜ್ಯದ ಸ್ಥಾನಮಾನ ದೊರಕಿಸಿಕೊಡಲು ಕೇಜ್ರಿವಾಲ್ ಇಷ್ಟು ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂದು ದಿಲ್ಲಿಯ ಹಲವು ನಾಗರಿಕರು ತಿಳಿಯಬಯಸಿದ್ದರು. ಈ ಪರಿಸ್ಥಿತಿಯಿಂದ ಪಾರಾಗಲು ಬಹುಶಃ ಅವರಿಗೆ ಸದವಕಾಶ ಸಿಕ್ಕಿತು. ಸಾಮಾಜಿಕ ಜಾಲತಾಣಗಳು ಕೇಜ್ರಿಯವರನ್ನು ಅಪಹಾಸ್ಯಕ್ಕೀಡು ಮಾಡಲು ತುದಿಗಾಲಲ್ಲಿ ನಿಂತಿದ್ದವು; ಅದರಿಂದ ಕೂಡಾ ಕೇಜ್ರಿವಾಲ್ ಬಚಾವ್ ಆದರು.


ಮಮತಾ ಕೆಂಡಾಮಂಡಲ
ಕಾಂಗ್ರೆಸ್ ಸಂಸದ ಅಧೀರ್ ಚೌಧರಿಯವರು ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ್ದರಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೆಂಡಾಮಂಡಲವಾಗಿದ್ದಾರೆ. ಈ ಅಪರೂಪದ ದೃಶ್ಯಕ್ಕೆ ಸಂಸತ್ ಭವನ ಸಾಕ್ಷಿಯಾಯಿತು. ಎರಡು ವಿರೋಧ ಪಕ್ಷಗಳಾದ ರಾಷ್ಟ್ರೀಯ ಜನತಾದಳ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮಮತಾಗೆ ಬೆಂಬಲ ಸೂಚಿಸಿದ್ದು, ಕಾಂಗ್ರೆಸ್‌ಗೆ ಇಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿಸಿತು. ಈ ಪಕ್ಷಗಳ ಮುಖಂಡರು ಮಮತಾ ಬ್ಯಾನರ್ಜಿಯವರನ್ನು ಸಮಾಧಾನಪಡಿಸಲು ಯತ್ನಿಸಿದರೂ, ಇವರ ವೈಯಕ್ತಿಕ ವಾದವೆಂದರೆ, ಕಾಂಗ್ರೆಸ್ ಹಾಗೂ ಎಡಪಕ್ಷಗಳನ್ನು ಪಶ್ಚಿಮ ಬಂಗಾಳದಲ್ಲಿ ಸೇರಿಸಿಕೊಳ್ಳಲು ಶಕ್ತಿಮೀರಿ ಮಮತಾ ಪ್ರಯತ್ನಿಸಿದ್ದಾರೆ. ಆದ್ದರಿಂದ ಅವರ ಸಿಟ್ಟು ಸಮರ್ಥನೀಯ ಎನ್ನುವುದು ಇವರ ಅಭಿಮತ. ಇಂಥ ಭಿನ್ನತೆಯಿಂದಾಗಿಯೇ ಮಹಾಘಟಬಂಧನ ದುರ್ಬಲವಾಗುತ್ತದೆ ಹಾಗೂ ವಿಭಜನೆಯಾಗುತ್ತದೆ ಎಂಬ ಭೀತಿಯೂ ಹಲವರಲ್ಲಿ ಇದೆ. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ, ಅಧೀರ್ ಚೌಧರಿಗೆ ಪಶ್ಚಿಮಬಂಗಾಳದ ಬೆಹ್ರಾಂಪುರದಲ್ಲಿ ಪಾಠ ಕಲಿಸಲೇಬೇಕು ಎಂಬ ಜಿದ್ದಿಗೆ ಬಿದ್ದಂತಿದೆ. ಕಾಂಗ್ರೆಸ್ ಪಕ್ಷಕ್ಕೆ ತೀರಾ ವ್ಯತಿರಿಕ್ತ ಪರಿಸ್ಥಿತಿ ಎದುರಾದ ಅವಧಿಯಲ್ಲಿ ಕೂಡಾ ಇವರು ಪಕ್ಷಕ್ಕೆ ಈ ಸ್ಥಾನವನ್ನು ಉಳಿಸಿಕೊಟ್ಟಿದ್ದರು. ಆದರೆ ಈ ಬಾರಿ ಕಾಂಗ್ರೆಸ್ ಜತೆ ಮೈತ್ರಿ ಏರ್ಪಡಲಿ ಅಥವಾ ಏರ್ಪಡದಿರಲಿ; ಚೌಧರಿ ಸೋಲುವಂತೆ ನೋಡಿಕೊಳ್ಳಬೇಕು ಎಂದು ಮಮತಾ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಚೌಧರಿ ಈ ಬಾರಿ ಕೂಡಾ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದ್ದಾರೆ; ಆದರೆ ಮಮತಾ ಅವರ ಆಲೋಚನೆ ಭಿನ್ನ.


ಲೋಕಸಭೆಗೆ ಎಂಎಂಎಸ್?
ಕಾಂಗ್ರೆಸ್ ಪಕ್ಷ ಈ ಬಾರಿ ಮಾಮೂಲಿಗಿಂತ ಭಿನ್ನವಾಗಿ ಯೋಚಿಸುತ್ತಿದೆ. ಕನಿಷ್ಠ ಅಂಥ ಚಿತ್ರಣವಂತೂ ಕಂಡುಬರುತ್ತಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಯಸ್ಸಿನ ಹೊರತಾಗಿಯೂ ಅವರು ಸಂಸದರಾಗಿ ಮುಂದುವರಿಯಬೇಕು ಮತ್ತು ಪ್ರಧಾನ ಪಾತ್ರ ವಹಿಸಬೇಕು ಎಂಬ ಒತ್ತಡವನ್ನು ಪಕ್ಷದಲ್ಲಿ ಕೆಲವರು ತರುತ್ತಿದ್ದಾರೆ. ಇದರಿಂದ ಎಂಎಂಎಸ್ ಅವರ ರಾಜ್ಯಸಭಾ ಸದಸ್ಯತ್ವವನ್ನು ಮತ್ತೊಂದು ಅವಧಿಗೆ ವಿಸ್ತರಿಸಲಾಗುತ್ತದೆ ಎಂಬ ವದಂತಿ ಹುಟ್ಟಿಕೊಂಡಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಥಾನ ಸಿಗುವ ಸೂಚನೆ ಇಲ್ಲ. ರಾಜ್ಯಸಭಾ ಚುನಾವಣೆ ಸದ್ಯಕ್ಕೆ ಇಲ್ಲದಿರುವುದರಿಂದ ಕಾಂಗ್ರೆಸ್ ಇಕಟ್ಟಿನಲ್ಲಿ ಸಿಲುಕಿದೆ. ಆದ್ದರಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಸಿಂಗ್ ಅವರನ್ನು ಕೇಳಿಕೊಳ್ಳುವ ಯೋಚನೆ ಇದ್ದಂತಿದೆ. ಆದರೆ ಕೆಲವರು ಇದನ್ನು ಗಾಳಿಪಟ ಹಾರಿಸಿದಂತೆ ಎಂದು ಬಣ್ಣಿಸುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ಪ್ರಚಾರ ಮಾಡುವ ಸ್ಥಿತಿಯಲ್ಲಿ ಸಿಂಗ್ ಇಲ್ಲ ಎಂದು ವಾದಿಸುತ್ತಿದ್ದಾರೆ. ಆದರೆ ಮತ್ತೆ ಕೆಲವು ಮುಖಂಡರು ಹೇಳುವ ಪ್ರಕಾರ ಅವರಿಗೆ ಅಮೃತಸರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೇಳಿಕೊಳ್ಳಲಾಗುತ್ತದೆ. ಹತ್ತು ವರ್ಷದ ಹಿಂದೆ ಕೂಡಾ ಸಿಂಗ್ ಅಮೃತಸರದಿಂದ ಕಣಕ್ಕೆ ಧುಮುಕುತ್ತಾರೆ ಎಂಬ ದಟ್ಟ ವದಂತಿಗಳು ಇದ್ದವು. ಆದರೆ ಸಿಂಗ್ ಸ್ಪರ್ಧಿಸಿರಲಿಲ್ಲ. ಈ ಬಾರಿ ತಮ್ಮ ಯೋಚನೆಯನ್ನು ಸಿಂಗ್ ಬದಲಿಸುತ್ತಾರೆಯೇ? ಕಾದು ನೋಡಬೇಕು.


ರವಿಶಂಕರ್ ಪ್ರಸಾದ್, ಬಿಜೆಪಿ ನಿರಾಳ
ಬಾಲ್‌ಕೋಟ್ ದಾಳಿ ನಡೆಯುವವರೆಗೂ ಕೆಲ ದಿನಗಳು ಬಿಜೆಪಿ ವಕ್ತಾರರಿಗೆ ಹಾಗೂ ಸಚಿವರಿಗೆ ಕಷ್ಟದ ದಿನಗಳು ಎದುರಾಗಿದ್ದವು. ಪುಲ್ವಾಮ ದಾಳಿಯ ಬಳಿಕ, ಪಾಕಿಸ್ತಾನಕ್ಕೆ ನಿಮ್ಮ ಸರಕಾರ ಏನು ಪ್ರತಿಕ್ರಿಯೆ ನೀಡುತ್ತದೆ ಎಂಬ ಪ್ರಶ್ನೆಗಳ ಸುರಿಮಳೆ ಬಿಜೆಪಿ ನಾಯಕರಿಗೆ ಎದುರಾಗಿತ್ತು. ಇದಕ್ಕೆ ನಿಗದಿತ ಉತ್ತರ, ‘‘ಪ್ರಧಾನಿಯ ಮಾತುಗಳಲ್ಲಿ ವಿಶ್ವಾಸ ಇಡಿ’’ ಎನ್ನುವುದಾಗಿತ್ತು. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೂ ಈ ಪ್ರಶ್ನೆ ಪದೇ ಪದೇ ಎದುರಾಗುತ್ತಿತ್ತು. ಆದರೆ ಭಾರತ ಈಗಾಗಲೇ ದೊಡ್ಡ ವಿಜಯವನ್ನು ಸಾಧಿಸಿದೆ ಎಂದು ಅವರು ಸಮರ್ಥಿಸಿಕೊಳ್ಳುತ್ತಿದ್ದರು. ಈ ದಾಳಿಯ ಇಬ್ಬರು ಸೂತ್ರದಾರರನ್ನು ಸೇನಾ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ; ಅಂತೆಯೇ ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಸರಕಾರ ದುಪ್ಪಟ್ಟುಗೊಳಿಸಲಾಗಿದೆ. ‘‘ಸಿಮೆಂಟ್, ಗೋಡಂಬಿ ಮತ್ತು ಒಳದ್ರಾಕ್ಷಿಯ ದೊಡ್ಡ ಪ್ರಮಾಣದ ದಾಸ್ತಾನು ಕರಾಚಿಯಲ್ಲಿ ಬಿದ್ದಿದೆ’’ ಎಂದು ಹೇಳಿದ್ದರು. ಈ ಬಗ್ಗೆ ಹಲವು ಮಂದಿ ಬಿಜೆಪಿ ಮುಖಂಡರು, ಪತ್ರಕರ್ತರು ಮಾತ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ ಸ್ವತಃ ಪ್ರಸಾದ್ ಅವರಿಗೂ ತಮ್ಮ ವಾದ ಸಮಾಧಾನ ತಂದಿರಲಿಲ್ಲ. ಆದರೆ ಅವರಿಗೆ ಹಾಗೂ ಬಿಜೆಪಿಗೆ ಅದೃಷ್ಟ ಎನ್ನುವಂತೆ ದಾಳಿ ನಡೆಯಿತು. ಇದರಿಂದ ಎಲ್ಲರಿಗೂ ಖುಷಿಯಾಗಿದೆ. ಬಹುತೇಕ ಮೋದಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುತ್ತಾರೆ ಎನ್ನುವ ವಾತಾವರಣ ಇದೆ. ಬಿಜೆಪಿ ಮುಖಂಡರ ಮುಖದ ನಗೆಯಿಂದ ಅದು ಸ್ಪಷ್ಟವಾಗುತ್ತದೆ.


ರಾಹುಲ್ ಹೊಸ ತಲೆನೋವು
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯವನ್ನು ನಡೆಸಲು ಜಾಹೀರಾತು ಸಂಸ್ಥೆಯ ಆಯ್ಕೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅದು ಎಷ್ಟರ ಮಟ್ಟಿಗೆ ತೀವ್ರತೆ ಪಡೆದಿದೆ ಎಂದರೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರೇ ಮಧ್ಯಪ್ರವೇಶಿಸಿದ್ದಾರೆ. ಪ್ರಚಾರದ ಹೊಣೆ ಹೊತ್ತಿರುವ ಸಮಿತಿ ಸಭೆ ಸೇರಿ ಈ ಬಗ್ಗೆ ಪ್ರಜಾಸತ್ತಾತ್ಮಕ ವಿಧಾನದ ಮೂಲಕ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕೇ ವಿನಃ ಬೇಕಾಬಿಟ್ಟಿ ನಿರ್ಧಾರ ಕೈಗೊಳ್ಳುವುದು ಸಲ್ಲದು ಎಂದು ಸ್ಪಷ್ಟಪಡಿಸಿದ್ದಾರೆ. ಚುನಾವಣೆಗೆ ಜಾಹೀರಾತು ಸಂಸ್ಥೆಯನ್ನು ಆಯ್ಕೆ ಮಾಡುವುದು ಸದಾ ವಿವಾದಾತ್ಮಕ ವಿಚಾರ. ಆ ಸಂಸ್ಥೆಯ ಪರಿಣತಿ ಅಥವಾ ಪ್ರತಿಭೆ ಆಧಾರದಲ್ಲಿ ಆಯ್ಕೆ ಮಾಡುವ ಬದಲು ಬೇರೆ ಅಂಶಗಳ ಮೇಲೆ ಆಯ್ಕೆ ಮಾಡಲಾಗಿದೆ ಎಂಬ ಸಂದೇಹ ಸದಾ ಇದ್ದೇ ಇರುತ್ತದೆ. 2014ರ ಚುನಾವಣೆಯ ಭಯಾನಕ ಅನುಭವದ ಬಳಿಕ, ಘೋಷಣೆ ಮತ್ತು ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸಲು ಪಕ್ಷದೊಳಗಿನ ಪ್ರತಿಭೆಗಳನ್ನು ಬಳಸಿಕೊಳ್ಳಲು ಪಕ್ಷದ ನಾಯಕತ್ವ ನಿರ್ಧರಿಸಿದೆ. ಆದರೆ 2019ರ ಚುನಾವಣೆಯ ಮಹತ್ವದ ಹಿನ್ನೆಲೆಯಲ್ಲಿ, ವೃತ್ತಿಪರರ ನೆರವನ್ನೂ ಪಡೆಯಲು ಪಕ್ಷದ ಮುಖಂಡರು ಮುಂದಾಗಿದ್ದಾರೆ. ಆದರೆ ಇದು ಕಾಂಗ್ರೆಸ್ ಪಕ್ಷಕ್ಕೆ ನೆರವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಪಕ್ಷದ ಮುಖಂಡರು ಸಿದ್ಧರಿಲ್ಲ ಎನ್ನುವುದಂತೂ ನಿಜ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News