ಇಲ್ಲಿ ಪ್ರತಿ ಕಿ.ಮೀ. ಸೈಕಲ್ ಸವಾರಿಗೆ 16 ರೂ. ನೀಡುತ್ತೆ ಸರಕಾರ !
ಆ್ಯಮ್‌ಸ್ಟರ್‌ಡ್ಯಾಮ್ (ನೆದರ್‌ಲ್ಯಾಂಡ್ಸ್), ಮಾ. 11: ಕಾರುಗಳು ಅಥವಾ ಮೋಟರ್ ಬೈಕ್‌ಗಳಿಗಿಂತ ಸೈಕಲ್ ಗಳನ್ನೇ ಹೆಚ್ಚು ಇಷ್ಟಪಡುವ ಜಗತ್ತಿನ ಅಪರೂಪದ ದೇಶಗಳ ಪೈಕಿ ನೆದರ್ ಲ್ಯಾಂಡ್ಸ್ ಕೂಡ ಒಂದು.
ಒಂದು ಅಧ್ಯಯನದ ಪ್ರಕಾರ, ನೆದರ್‌ಲ್ಯಾಂಡ್ಸ್‌ನಲ್ಲಿ ಜನರಿಗಿಂತ ಹೆಚ್ಚು ಸೈಕಲ್‌ಗಳಿವೆ. ಇಲ್ಲಿನ ಜನರು ಸೈಕಲನ್ನು ಎಷ್ಟು ಇಷ್ಟ ಪಡುತ್ತಾರೆಂದರೆ, ರಾಜಧಾನಿ ಆ್ಯಮ್‌ಸ್ಟರ್‌ಡ್ಯಾಮ್‌ನಲ್ಲಿ ಮನೆ ಮತ್ತು ಕೆಲಸದ ನಡುವಿನ ಪ್ರಯಾಣದ ಅರ್ಧ ಭಾಗವನ್ನು ಸೈಕಲೇ ಆಕ್ರಮಿಸಿಕೊಂಡಿದೆ. ಹಾಗಾಗಿ, ನೆದರ್‌ಲ್ಯಾಂಡ್ಸ್ ತನ್ನನ್ನು ತಾನು ‘ಜಗತ್ತಿನ ಸರಿಸಾಟಿಯಿಲ್ಲದ ನಂಬರ್ ವನ್ ಸೈಕಲ್ ತುಳಿಯುವ ದೇಶ’ ಎಂಬುದಾಗಿ ಕರೆದುಕೊಂಡಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.
ಪ್ರತ್ಯೇಕ ಸೈಕಲ್ ಮಾರ್ಗ, ಸೈಕಲ್ ನಿಲ್ಲಿಸುವ ಸ್ಥಳ ಮತ್ತು ಸೈಕಲ್‌ಗಳ ಸುರಕ್ಷತೆಗಾಗಿ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ನೆದರ್‌ಲ್ಯಾಂಡ್ಸ್ ನಾದ್ಯಂತ ಸೈಕಲ್ ಸವಾರರಿಗೆ ಸರಕಾರ ಪ್ರೋತ್ಸಾಹ ನೀಡುತ್ತಿದೆ.
ಅದೇ ವೇಳೆ, ಸೈಕಲ್ ಸವಾರರಿಗೆ ಸರಕಾರವು ತೆರಿಗೆ ರಿಯಾಯಿತಿಗಳನ್ನೂ ನೀಡುತ್ತಿದೆ. ಪ್ರತಿ ಕಿಲೋಮೀಟರ್ ಸೈಕಲ್ ಸವಾರಿಗೆ ಅಲ್ಲಿನ ಜನರು ತೆರಿಗೆರಹಿತ 16 ರೂಪಾಯಿ ಗಳಿಸಬಹುದಾಗಿದೆ. ಈ ಹಣವನ್ನು ಜನರು ಕೆಲಸ ಮಾಡುವ ಕಂಪೆನಿ ನೀಡುತ್ತದೆ. ಇದಕ್ಕಿರುವ ಒಂದೇ ಒಂದು ಶರತ್ತೆಂದರೆ, ಕೆಲಸಕ್ಕೆ ಹೋಗುವಾಗ ಮಾಡುವ ಸೈಕಲ್ ಸವಾರಿಗೆ ಮಾತ್ರ ಈ ಪ್ರೋತ್ಸಾಹಧನ ಲಭಿಸುತ್ತದೆ. ಮನರಂಜನೆ ಅಥವಾ ಇತರ ವೈಯಕ್ತಿಕ ಉದ್ದೇಶಗಳಿಗಾಗಿ ಮಾಡುವ ಸೈಕಲ್ ಸವಾರಿಗೆ ಇದು ಅನ್ವಯಿಸುವುದಿಲ್ಲ.
ಬ್ರಿಟನ್, ಬೆಲ್ಜಿಯಮ್ ಸೇರಿದಂತೆ ಯುರೋಪ್‌ನ ಹೆಚ್ಚಿನ ದೇಶಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಸೈಕಲ್ ಕೊಂಡುಕೊಳ್ಳಲು ಜನರಿಗೆ ತೆರಿಗೆ ರಿಯಾಯಿತಿ ನೀಡುತ್ತಿವೆ.