ವಿಮಾನ ಕೆಳಗಿಳಿಯುವಂತೆ ಹೊಂದಾಣಿಕೆ ಮಾಡಲಾಗಿತ್ತು: ಪತನ ಸ್ಥಳದಲ್ಲಿ ಪತ್ತೆಯಾದ ಪುರಾವೆಯಿಂದ ಬಹಿರಂಗ

Update: 2019-03-15 17:30 GMT

ವಾಶಿಂಗ್ಟನ್, ಮಾ. 15: ಇಥಿಯೋಪಿಯನ್ ಏರ್‌ಲೈನ್ಸ್‌ಗೆ ಸೇರಿದ ‘ಬೋಯಿಂಗ್ 737 ಮ್ಯಾಕ್ಸ್ 8’ ವಿಮಾನ ಪತನಗೊಂಡ ಸ್ಥಳದಲ್ಲಿ ಅವಶೇಷಗಳ ನಡುವೆ ಪತ್ತೆಯಾದ ‘ಸ್ಕ್ರೂ’ನಂತಹ ವಸ್ತೊಂದು, ವಿಮಾನವು ಕೆಳಮುಖವಾಗಿ ಧಾವಿಸಿ ಬಂದು ನೆಲಕ್ಕೆ ಅಪ್ಪಳಿಸಿರುವುದನ್ನು ಖಚಿತಪಡಿಸಿದೆ.

ಈ ಪುರಾವೆಯ ಆಧಾರದಲ್ಲಿ, ಅಮೆರಿಕದ ವಾಯುಯಾನ ಅಧಿಕಾರಿಗಳು ತಮ್ಮ ದೇಶದಲ್ಲಿ ಈ ಮಾದರಿಯ ವಿಮಾನಗಳನ್ನು ತಾತ್ಕಾಲಿಕವಾಗಿ ಸೇವೆಯಿಂದ ಹೊರಗಿಟ್ಟಿದ್ದಾರೆ.

ಈ ಉಪಕರಣ ಪತ್ತೆಯಾಗುವ ಮೊದಲು, ದೇಶಗಳು ಒಂದರ ನಂತರ ಒಂದರಂತೆ ಈ ಮಾದರಿಯ ವಿಮಾನಗಳನ್ನು ಸೇವೆಯಿಂದ ಹೊರಗಿಟ್ಟರೂ, ಅಮೆರಿಕ ಮಾತ್ರ ಅವುಗಳನ್ನು ಸೇವೆಯಲ್ಲಿ ಮುಂದುವರಿಸಲು ದೃಢ ನಿರ್ಧಾರ ಮಾಡಿತ್ತು.

ಅಮೆರಿಕ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ವಿಮಾನ ಪತನಗೊಂಡ ಸ್ಥಳದಲ್ಲಿ ಪತ್ತೆಯಾದ ವಸ್ತೊಂದು ಪ್ರಮುಖ ಕಾರಣವಾಗಿದೆ ಎಂದು ಫೆಡರಲ್ ವಾಯುಯಾನ ಆಡಳಿತದ ಮುಖ್ಯಸ್ಥ ಡೇನಿಯಲ್ ಎಲ್ವೆಲ್ ಬುಧವಾರ ಹೇಳಿದ್ದಾರೆ.

ಈ ‘ಜಾಕ್‌ಸ್ಕ್ರೂ’ ಎಂಬ ಉಪಕರಣವನ್ನು ವಿಮಾನದ ಮುಂಭಾಗವನ್ನು ಏರಿಸಲು ಹಾಗೂ ಇಳಿಸಲು ಬಳಸಲಾಗುತ್ತದೆ. ವಿಮಾನ ಪತನಗೊಂಡ ಸಮಯದಲ್ಲಿ ವಿಮಾನದ ಮುಂಭಾಗವನ್ನು ತಗ್ಗಿಸುವಂತೆ ಈ ಉಪಕರಣವನ್ನು ನಿಯೋಜಿಸಲಾಗಿತ್ತು.

ಇದರೊಂದಿಗೆ, ವಿಮಾನದ ಪಥದ ಬಗ್ಗೆ ಪಡೆಯಲಾದ ಉಪಗ್ರಹ ಮಾಹಿತಿ ಕೂಡ ಅಮೆರಿಕದ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿತು. ಇಂಡೋನೇಶ್ಯದಲ್ಲಿ ಅಕ್ಟೋಬರ್ 29ರಂದು ಇದೇ ಮಾದರಿಯ ವಿಮಾನವೊಂದು ಪತನಗೊಂಡಿತ್ತು. ಈ ಎರಡು ವಿಮಾನಗಳ ಪತನದ ನಡುವೆ ಸಾಮ್ಯತೆಯಿದೆ ಎಂಬ ಮಾಹಿತಿಯನ್ನು ಉಪಗ್ರಹ ಮಾಹಿತಿ ನೀಡಿದೆ.

► 3 ನಿಮಿಷದಲ್ಲೇ ವಾಪಸಾಗಲು ಅನುಮತಿ ಕೋರಿದ್ದ ಪೈಲಟ್

ಅಡಿಸ್ ಅಬಾಬ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಮೂರು ನಿಮಿಷಗಳ ಬಳಿಕ, ಹಿಂದಿರುಗಲು ಇಥಿಯೋಪಿಯ ಏರ್‌ಲೈನ್ಸ್ ವಿಮನದ ಪೈಲಟ್ ಅನುಮತಿ ಕೋರಿದ್ದರು ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ವಿಮಾನ ಅಸಹಜವಾಗಿ ವೇಗವನ್ನು ವೃದ್ಧಿಸಿಕೊಂಡ ಹಿನ್ನೆಲೆಯಲ್ಲಿ, ವಿಮಾನವನ್ನು ನಿಯಂತ್ರಿಸಲಾಗದೆ ಅವರು ಈ ಮನವಿ ಮಾಡಿದ್ದರು ಎನ್ನಲಾಗಿದೆ.

ಇದಾದ ಎರಡು ನಿಮಿಷಗಳ ಬಳಿಕ, ಅಂದರೆ ವಿಮಾನ ಹಾರಾಟ ಆರಂಭಿಸಿದ 5 ನಿಮಿಷಗಳ ಬಳಿಕ, ವಾಯು ಸಂಚಾರ ನಿಯಂತ್ರಕರು ಮತ್ತು ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನ 302ರ ನಡುವಿನ ಎಲ್ಲ ಸಂಪರ್ಕ ಕಡಿತಗೊಂಡಿತು.

ಅಡಿಸ್ ಅಬಾಬದಿಂದ ಕೆನ್ಯದ ನೈರೋಬಿಗೆ ಹಾರುತ್ತಿದ್ದ ವಿಮಾನ ಅಡಿಸ್ ಅಬಾಬದ ಹೊರವಲಯದಲ್ಲಿ ಪತನಗೊಂಡು, ಅದರಲ್ಲಿದ್ದ ಎಲ್ಲ 157 ಮಂದಿ ಮೃತಪಟ್ಟರು.

ಹಾರಾಟ ಆರಂಭಿಸಿದ ಒಂದು ನಿಮಿಷದಲ್ಲಿಯೇ, ವಿಮಾನ ನಿಯಂತ್ರಣದಲ್ಲಿ ಸಮಸ್ಯೆ ಎದುರಿಸುತ್ತಿದ್ದೇನೆ ಎಂಬುದಾಗಿ ಪೈಲಟ್ ವರದಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News