ಹಲವರನ್ನು ರಕ್ಷಿಸಿದ ಅಪರಿಚಿತ ವ್ಯಕ್ತಿ: ಸಂತ್ರಸ್ತ ಭಾರತೀಯ ಮೂಲದ ವ್ಯಕ್ತಿಯ ಹೇಳಿಕೆ
ಕ್ರೈಸ್ಟ್ ಚರ್ಚ್ (ನ್ಯೂ), ಮಾ. 15: ನ್ಯೂಝಿಲ್ಯಾಂಡ್‌ನ ಕ್ರೈಸ್ಟ್ ಚರ್ಚ್‌ನಲ್ಲಿರುವ ಎರಡು ಮಸೀದಿಗಳಲ್ಲಿ ಪ್ರಾರ್ಥನಾ ನಿರತರ ಮೇಲೆ ಬಿಳಿ ಜನಾಂಗೀಯವಾದಿ ಉಗ್ರನೋರ್ವ ನಡೆಸಿದ ದಾಳಿ ಅತಿ ದೊಡ್ಡ ದುರಂತವಾಗುವುದನ್ನು ಅಪರಿಚಿತ ವ್ಯಕ್ತಿಯೋರ್ವ ತಪ್ಪಿಸಿದ್ದಾನೆ ಎಂದು ಭಾರತೀಯ ಮೂಲದ ಸಂತ್ರಸ್ತ ವ್ಯಕ್ತಿಯೋರ್ವ ಹೇಳಿದ್ದಾರೆ.
‘‘ನಾವು ಸಣ್ಣ ಮಸೀದಿಯೊಂದರಲ್ಲಿ ಇದ್ದೆವು. ಅದರ ಅಳತೆ 100 ಚದರ ಮೀಟರ್ ಇರಬಹುದು. ಇದರ ಒಳಗೆ ಬಂದೂಕುಧಾರಿಯೋರ್ವ ನುಗ್ಗಿ ಗುಂಡು ಹಾರಿಸಿದರೆ, ನಿಮ್ಮ ಎದೆ ಬಡಿತ ಜೋರಾಗಬಹುದು. ನಿಮಗೆ ಏನನ್ನೂ ಆಲೋಚಿಸಲು ಸಾಧ್ಯವಾಗಲಾರದು’’ ಎಂದು ಕಳೆದ 10 ವರ್ಷಗಳಿಂದ ನ್ಯೂಝಿಲ್ಯಾಂಡ್ ವಾಸಿಸುತ್ತಿರುವ ಫೈಝಲ್ ಸೈಯದ್ ಎನ್‌ಡಿಟಿವಿಗೆ ತಿಳಿಸಿದ್ದಾರೆ. ‘‘ಆದರೆ, ಓರ್ವ ಗೆಳೆಯ ಬಂದೂಕುಧಾರಿಯ ಹಿಂದಿನಿಂದ ತೆವಳಿಕೊಂಡು ಹೋಗಿ ಬಂದೂಕು ಕೆಳಗೆ ಹಾಕುವ ವರೆಗೆ ಆತನನ್ನು ಹಿಡಿದುಕೊಂಡಿದ್ದ.’’ ಎಂದು ಅವರು ಹೇಳಿದ್ದಾರೆ. ‘‘ಆತ ಬಂದೂಕುಧಾರಿಯನ್ನು ಹಿಡಿಯದೇ ಇರುತ್ತಿದ್ದರೆ, ಇನ್ನಷ್ಟು ಜನರು ಪ್ರಾಣ ಕಳೆದುಕೊಳ್ಳಬೇಕಿತ್ತು. ನಾನು ಕೂಡ ಇಲ್ಲಿ ಇರುತ್ತಿರಲಿಲ್ಲ. ಆ ವ್ಯಕ್ತಿಗೆ ಹ್ಯಾಟ್ಸ್‌ಅಪ್.’’ ಎಂದು ಅವರು ತಿಳಿಸಿದ್ದಾರೆ.
‘‘ನಾನು ಕಳೆದ 10 ವರ್ಷಗಳಿಂದ ಈ ಸುಂದರ ದೇಶದಲ್ಲಿ ಇದ್ದೇನೆ. ನನ್ನ ಪ್ರೀತಿಪಾತ್ರರು, ನನ್ನ ಕುಟುಂಬ, ನನ್ನ ಸಮುದಾಯ ಇಂತಹದ್ದೊಂದು ಸವಾಲನ್ನು ಇದುವರೆಗೆ ಎದುರಿಸಿಲ್ಲ. ಈ ಏಕೈಕ ಘಟನೆಯ ಹಿನ್ನೆಲೆಯಲ್ಲಿ ನಾನು ಯಾವುದೇ ನಿರ್ಧಾರಕ್ಕೆ ಬರಲಾರೆ’’ ಎಂದು ಫೈಝಲ್ ಸೈಯದ್ ಹೇಳಿದ್ದಾರೆ.