ಡಿಕೆಶಿ ಹೆಗಲಿಗೆ ಶಿವಮೊಗ್ಗ ಕ್ಷೇತ್ರದ ಹೊಣೆಯ ಹಿಂದಿದೆ ಮೈತ್ರಿಕೂಟದ ಮಾಸ್ಟರ್ ಪ್ಲ್ಯಾನ್ !

Update: 2019-03-16 17:34 GMT

ಶಿವಮೊಗ್ಗ, ಮಾ.16: ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮಧು ಬಂಗಾರಪ್ಪ ಗೆಲ್ಲಿಸಿಕೊಂಡು ಬರುವ ಹೊಣೆ ನೀಡಿರುವುದು, ಸ್ಥಳೀಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲದ ಜೊತೆಗೆ ಬಿಸಿ ಬಿಸಿ ಚರ್ಚೆಗೆಡೆ ಮಾಡಿಕೊಟ್ಟಿದೆ. 

ಶಿವಮೊಗ್ಗ ಕ್ಷೇತ್ರದ ಉಸ್ತುವಾರಿಯನ್ನು ಡಿಕೆಶಿ ಹೆಗಲಿಗೇರಿಸಿರುವುದರ ಹಿಂದೆ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯ ಪಾತ್ರವಹಿಸಿದ್ದಾರೆನ್ನಲಾಗಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅಭ್ಯರ್ಥಿಯಾಗುತ್ತಿದ್ದಾರೆ. ಡಿಕೆಶಿಗೆ ಈ ಕ್ಷೇತ್ರದ ಜವಾಬ್ದಾರಿ ವಹಿಸಿದರೆ, ತವರೂರಲ್ಲಿಯೇ ಬಿಎಸ್​ವೈಗೆ ತಕ್ಕ ಎದಿರೇಟು ನೀಡಲು ಸಾಧ್ಯವಾಗಲಿದೆ ಎಂಬ ಲೆಕ್ಕಾಚಾರ 'ಅಪ್ಪ-ಮಗ'ನದ್ದಾಗಿದೆ ಎಂದು ಹೇಳಲಾಗುತ್ತಿದೆ.

ಬಿಸಿತುಪ್ಪ: ಒಂದೆಡೆ, ಬಿಎಸ್​ವೈ ಜೊತೆಯಿರುವ ಆತ್ಮೀಯತೆಯಿಂದ ಅವರ ಪುತ್ರ ಕಣಕ್ಕಿಳಿಯುತ್ತಿರುವ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳಲು ಡಿಕೆಶಿ ಹಿಂದೇಟು ಹಾಕುತ್ತಿದ್ದಾರೆ. ಇನ್ನೊಂದೆಡೆ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪರವರು, ಕ್ಷೇತ್ರದ ಹೊಣೆ ವಹಿಸಿಕೊಳ್ಳುವಂತೆ ದುಂಬಾಲು ಬಿದ್ದಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಹೈಕಮಾಂಡ್, ಇತ್ತ ಜೆಡಿಎಸ್ ಪಾಳಯ ಕೂಡ ಶಿವಮೊಗ್ಗದ ಜವಾಬ್ದಾರಿ ಒಪ್ಪಿಕೊಳ್ಳುವಂತೆ ಡಿಕೆಶಿ ಮೇಲೆ ಒತ್ತಡ ಹೇರುತ್ತಿದೆ. 

ಶಿವಮೊಗ್ಗದ ಉಸ್ತುವಾರಿ ಜವಾಬ್ದಾರಿಯೂ ಡಿಕೆಶಿಗೆ ಅಕ್ಷರಶಃ ಹೊಸ ತಲೆನೋವಾಗಿದ್ದು, ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದರಿಂದ ಕ್ಷೇತ್ರದ ಹೊಣೆ ವಹಿಸಿಕೊಳ್ಳಲಿದ್ದಾರಾ? ಇಲ್ಲವಾ? ಎಂಬ ಚರ್ಚೆಗಳು ಮೈತ್ರಿಕೂಟ ಪಾಳಯದಲ್ಲಿ ನಡೆಯಲಾರಂಭಿಸಿದೆ. ಇಷ್ಟರಲ್ಲಿಯೇ ಇದು ಸ್ಪಷ್ಟವಾಗುವ ಸಾಧ್ಯತೆಗಳು ಕಂಡುಬರುತ್ತಿವೆ. 

ಲೆಕ್ಕಾಚಾರ: ಸಮ್ಮಿಶ್ರ ಸರ್ಕಾರಕ್ಕೆ ಕಂಟಕಪ್ರಾಯವಾಗಿದ್ದ ಬಿಎಸ್​ವೈ ರನ್ನು ಕಟ್ಟಿ ಹಾಕಬೇಕೆಂಬ ಉದ್ದೇಶದಿಂದಲೇ, ಶಿವಮೊಗ್ಗ ಕ್ಷೇತ್ರಕ್ಕೆ ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ಉಪ ಚುನಾವಣೆ ವೇಳೆ ದೇವೆಗೌಡ ಹಾಗೂ ಕುಮಾರಸ್ವಾಮಿ ಕಾಂಗ್ರೆಸ್ ಬೆಂಬಲ ಪಡೆದು ಜೆಡಿಎಸ್‍ನಿಂದ ಮಧು ಬಂಗಾರಪ್ಪರನ್ನು ಕಣಕ್ಕಿಳಿಸಿದ್ದರು. ಸ್ವತಃ ಹೆಚ್ಡಿಕೆ ಕ್ಷೇತ್ರದಲ್ಲಿಯೇ ಬೀಡು ಬಿಟ್ಟು, ಬಿರುಸಿನ ಪ್ರಚಾರ ನಡೆಸಿದ್ದರು. ಇದು ಬಿಎಸ್​ವೈ ನಿದ್ದೆಗೆಡುವಂತೆ ಮಾಡಿತ್ತು. ಪುತ್ರನ ಗೆಲುವಿಗೆ ಭಾರೀ ಹರಸಾಸಹ ನಡೆಸುವಂತಾಗಿತ್ತು. ಶಿವಮೊಗ್ಗ ಕ್ಷೇತ್ರದಲ್ಲಿಯೇ ಅವರು ಹೆಚ್ಚಿನ ಗಮನ ಕೇಂದ್ರಿಕರಿಸುವಂತಾಗಿತ್ತು. ಅಂತಿಮವಾಗಿ ಪುತ್ರನನ್ನು ಗೆಲ್ಲಿಸಿಕೊಂಡು ಬರುವಲ್ಲಿ ಸಫಲವಾಗಿದ್ದರು.

ಆದರೆ ಪ್ರಸ್ತುತ ಸಾರ್ವತ್ರಿಕ ಚುನಾವಣೆಯಲ್ಲಿ, ಉಪ ಚುನಾವಣೆಯ ವೇಳೆ ಶಿವಮೊಗ್ಗ ಕ್ಷೇತ್ರಕ್ಕೆ ನೀಡಿದ್ದ ವಿಶೇಷ ಗಮನ ನೀಡುವುದು ಅಸಾಧ್ಯವಾಗಿದೆ. ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಸ್ಪರ್ಧಿಸುತ್ತಿರುವ ಹಾಸನ ಮತ್ತು ಮಂಡ್ಯ ಕ್ಷೇತ್ರಗಳತ್ತ ಹೆಚ್ಚಿನ ಗಮನ ಕೇಂದ್ರಕರಿಸಬೇಕಾಗಿದೆ. ಶಿವಮೊಗ್ಗದಲ್ಲಿ ಮೈತ್ರಿಕೂಟದ ಪ್ರಬಲ ಸ್ಪರ್ಧೆ ಎದುರಾಗದಿದ್ದರೆ, ಬಿಎಸ್​ವೈರನ್ನು ಕಟ್ಟಿಹಾಕಲು ಸಾಧ್ಯವಾಗುವುದಿಲ್ಲ ಎಂಬುವುದು ದೇವೆಗೌಡ ಹಾಗೂ ಕುಮಾರಸ್ವಾಮಿಯ ಲೆಕ್ಕಾಚಾರವಾಗಿದೆ. 

ಡಿಕೆಶಿಯತ್ತ ಚಿತ್ತ: ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬಳ್ಳಾರಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆ ವೇಳೆ, ಆ ಕ್ಷೇತ್ರದ ಹೊಣೆ ಹೊತ್ತಿದ್ದ ಡಿಕೆಶಿ, ಮೈತ್ರಿಕೂಟದ ಅಭ್ಯರ್ಥಿ ಉಗ್ರಪ್ಪರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಸಫಲವಾಗಿದ್ದರು. ಈ ಕಾರಣದಿಂದ ಶಿವಮೊಗ್ಗಕ್ಕೆ ಡಿಕೆಶಿಯನ್ನೇ ಉಸ್ತುವಾರಿಯಾಗಿ ನೇಮಿಸುವಲ್ಲಿ ದೇವೆಗೌಡ ಹಾಗೂ ಕುಮಾರಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಒಟ್ಟಾರೆ ಬಿಜೆಪಿ ಭದ್ರಕೋಟೆಯಾಗಿರುವ ಶಿವಮೊಗ್ಗದಲ್ಲಿ, ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿಯೂ ಮೈತ್ರಿಕೂಟ ಭಾರೀ ಗೇಮ್‍ ಪ್ಲ್ಯಾನ್ ಮಾಡುತ್ತಿದೆ. ಇದರ ಭಾಗವಾಗಿಯೇ ಡಿಕೆಶಿಗೆ ಕ್ಷೇತ್ರದ ಉಸ್ತುವಾರಿ ಜವಾಬ್ದಾರಿ ವಹಿಸಿದೆ. ಆದರೆ ಶಿವಮೊಗ್ಗದ ಹೊಣೆಯನ್ನು ಡಿಕೆಶಿ ಒಪ್ಪಿಕೊಳ್ಳುತ್ತಾರಾ ? ಇಲ್ಲವೇ? ಎಂಬುವುದು ಇನ್ನಷ್ಟೆ ಕಾದು ನೋಡಬೇಕಾಗಿದೆ. 

ಯಾವುದೇ ಪರಿಣಾಮ ಬೀರುವುದಿಲ್ಲ: ಬಿಜೆಪಿ ಶಾಸಕ ಕೆ.ಬಿ.ಅಶೋಕ್‍ ನಾಯ್ಕ್ 
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬೇರು ಗಟ್ಟಿಯಾಗಿದೆ. ಆಳವಾಗಿ ಬೇರೂರಿದೆ. ಬಲಿಷ್ಠ ಕಾರ್ಯಕರ್ತರ ಪಡೆ ಹೊಂದಿದೆ. ಪಕ್ಷದ ಸಂಘಟನೆ ಪರಿಣಾಮಕಾರಿಯಾಗಿದೆ. ಹೊರಗಿನ ಯಾವುದೇ ಶಕ್ತಿಯೂ ಬಿಜೆಪಿಗೆ ಸವಾಲು ಹಾಕಲು ಸಾಧ್ಯವಿಲ್ಲ. ಪಕ್ಷದ ಅಭ್ಯರ್ಥಿ ರಾಘವೇಂದ್ರ ಗೆಲುವು ಶತ ಸಿದ್ದವಾಗಿದೆ. 1 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಅವರು ಜಯ ಸಾಧಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಕ್ಷೇತ್ರಕ್ಕೆ ಮೈತ್ರಿಕೂಟದ ಉಸ್ತುವಾರಿಯಾಗಿ ಡಿ.ಕೆ.ಶಿವಕುಮಾರ್ ನಿಯೋಜನೆಯಿಂದ, ಬಿಜೆಪಿಯ ಗೆಲುವಿನ ಓಟಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಶಾಸಕ ಕೆ.ಬಿ.ಅಶೋಕ್‍ ನಾಯ್ಕ್ ರವರು ತಿಳಿಸುತ್ತಾರೆ. 

ಅವರು ಬಂದರೆ ಜಯ ನಿಶ್ಚಿತ: ಜೆಡಿಎಸ್ ಮುಖಂಡ ಎಂ.ಶ್ರೀಕಾಂತ್

ಕಾಂಗ್ರೆಸ್ ಪಕ್ಷದ ವರಿಷ್ಠ ಡಿ.ಕೆ.ಶಿವಕುಮಾರ್ ರವರಿಗೆ, ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ವಹಿಸಿರುವುದು ಸ್ವಾಗತಾರ್ಹ ಸಂಗತಿ. ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ, ಬಳ್ಳಾರಿಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಗೆಲುವಿನಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದ್ದರು. ಇದೀಗ ಡಿ.ಕೆ.ಶಿವಕುಮಾರ್ ರವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜವಾಬ್ದಾರಿ ವಹಿಸಲಾಗಿದೆ. ಅವರು ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪರನ್ನು ಗೆಲುವಿನ ದಡ ಸೇರಿಸುವುದರಲ್ಲಿ ಹಾಗೂ ಬಿಜೆಪಿ ಪಕ್ಷ ಧೂಳೀಪಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ. 

ಹೊಸ ಸಂಚಲನ ಸೃಷ್ಟಿಯಾಗಿದೆ : ಕಾಂಗ್ರೆಸ್ ಮುಖಂಡ ಕೆ.ರಂಗನಾಥ್

ಪಕ್ಷದ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ರವರಿಗೆ ಶಿವಮೊಗ್ಗದ ಉಸ್ತುವಾರಿ ವಹಿಸಲಾಗಿದೆ ಎಂಬ ಸುದ್ದಿಯೇ, ಪಕ್ಷದ ಸ್ಥಳೀಯ ಕಾರ್ಯಕರ್ತರು ಹಾಗೂ ನಾಯಕರಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಅವರು ಕ್ಷೇತ್ರಕ್ಕೆ ಬರುತ್ತಿದ್ದಂತೆ ಕ್ಷೇತ್ರದ ಚುನಾವಣೆಯ ಚಿತ್ರಣವೇ ಬದಲಾಗಲಿದೆ. ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಸಾಮರ್ಥ್ಯ ಅವರಲ್ಲಿದೆ. ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಜಯ ಖಚಿತವಾಗಿದೆ. ಇದು ನೂರಕ್ಕೆ ನೂರರಷ್ಟು ನಿಶ್ಚಿತವಾಗಿದೆ. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಮುಖಭಂಗಕ್ಕೀಡಾಗುವುದು ಖಚಿತ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡ ಕೆ. ರಂಗನಾಥ್‍ರವರು ಅಭಿಪ್ರಾಯಪಡುತ್ತಾರೆ. 

Writer - ವರದಿ: ಬಿ. ರೇಣುಕೇಶ್

contributor

Editor - ವರದಿ: ಬಿ. ರೇಣುಕೇಶ್

contributor

Similar News