ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧೆ ?
ಮೈಸೂರು,ಮಾ.19: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕಳೆದೆರಡು ಮೂರು ದಿನಗಳಿಂದ ರಾಜಕೀಯ ವಲಯ ಮತ್ತು ಸಾರ್ವಜನಿಕ ವಲಯಗಳಲ್ಲಿ ಚರ್ಚೆಯಾಗುತ್ತಿದ್ದು, ಮೈಸೂರು ಮತ್ತೊಂದು 'ಹೈವೋಲ್ಟೇಜ್' ಕ್ಷೇತ್ರವಾದರೂ ಅಚ್ಚರಿಪಡುವಂತಿಲ್ಲ.
ಅದಕ್ಕೆ ಪುಷ್ಟಿ ನೀಡುವಂತೆ ರವಿವಾರ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ದಿಢೀರನೇ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರು, ಶಾಸಕರು ಮತ್ತು ಮುಖಂಡರ ಸಭೆ ನಡೆಸಿ ರಾಹುಲ್ ಸ್ಪರ್ಧೆ ಕುರಿತು ಮಾತನಾಡಿದ್ದಾರೆ ಎನ್ನಲಾಗಿದೆ. ಇನ್ನು, ಮೈಸೂರಿನಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡುವಂತೆ ಕೇಳಿದ್ದೇವೆ ಎಂಬ ಹೇಳಿಕೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿದೆ.
ಮೈಸೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜೊತೆ ಹಠಕ್ಕೆ ಬಿದ್ದು ಕಾಂಗ್ರೆಸ್ ಪಾಲಾಗುವಂತೆ ನೋಡಿಕೊಂಡಿದ್ದಾರೆ. ಒಂದು ಹಂತದಲ್ಲಿ ಅವರ ಬೆಂಬಲಿಗ ಸಿ.ಎಚ್.ವಿಜಯಶಂಕರ್ ಸ್ಪರ್ಧೆ ಮಾಡಲು ಸಿದ್ದರಾಮಯ್ಯ ಹಠಕ್ಕೆ ಬಿದ್ದಿದ್ದಾರೆ ಎಂಬ ಅಂಶ ಮೇಲ್ನೋಟಕ್ಕೆ ಕಂಡರೂ, ಇದರ ಹಿಂದೆ ಬಲವಾದ ಕಾರಣವಿದೆ ಎಂಬುದು ತಿಳಿದು ಬರುತ್ತಿದೆ.
ಈಗಾಗಲೇ ರಾಜ್ಯದ ಕೆಪಿಸಿಸಿ ಘಟಕ ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧೆ ಮಾಡಲಿ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿಯವರು ಉತ್ತರ ಪ್ರದೇಶದ ಅಮೇಠಿ ಜೊತೆ ಕರ್ನಾಟಕದಿಂದಲೂ ಸ್ಪರ್ಧೆ ಮಾಡಲು ಇಚ್ಚಿಸಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ. ಕಳೆದ ವಾರ ಚಾಮರಾಜನಗರದಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ರ‍್ಯಾಲಿಯಲ್ಲೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಹುಲ್ ಕರ್ನಾಟದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದರು.
ದಿನೇ ದಿನೇ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಹೇಳಿಕೆ ನೀಡುತ್ತಿರುವುದರ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇರುವುದರಿಂದ ಸಾರ್ವಜನಿಕವಾಗಿ ಮತ್ತು ಜೆಡಿಎಸ್ ಪಕ್ಷದಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡುವ ತಂತ್ರವಾಗಿದೆ.
ರಾಹುಲ್ ಸ್ಪರ್ಧೆಗೆ ಸಿದ್ದು ತಂತ್ರ: ಕರ್ನಾಟಕದಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡುತ್ತಾರೆ ಎಂದು ಕಂಡು ಬಂದರೆ ಸಿದ್ದರಾಮಯ್ಯ ಎಲ್ಲಿ ಹೇಳುತ್ತಾರೆ ಅಲ್ಲಿ ನಿಲ್ಲಲು ರಾಹುಲ್ ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಿದ್ದರಾಮಯ್ಯ ಮೈಸೂರಿನಿಂದ ಸ್ಪರ್ಧೆ ಮಾಡಿಸುವ ಚಿಂತನೆಯಲ್ಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ತೀರ್ಮಾನ ಮಾಡಿರುವ ಸಿದ್ದರಾಮಯ್ಯ ರಾಹುಲ್ ಗಾಂಧಿಯನ್ನು ರಾಜ್ಯದಲ್ಲಿ ಅಖಾಡಕ್ಕಿಳಿಸುವ ತಂತ್ರಗಾರಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಮೈಸೂರಿನಿಂದ ರಾಹುಲ್ ನಿಂತರೆ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ ಎಂಬ ಲೆಕ್ಕಾಚಾರವನ್ನು ಹಾಕಲಾಗುತ್ತಿದೆ. ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ 5.03 ಲಕ್ಷ ಮತಗಳನ್ನು ಪಡೆದು ಜಯಸಾಧಿಸಿದ್ದರು. ಇನ್ನು, ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದ್ದ ಎಚ್.ವಿಶ್ವನಾಥ್ 4.72 ಲಕ್ಷ, ಜೆಡಿಎಸ್ ನ ನಿವೃತ್ತ ನ್ಯಾಯಾದೀಶ ಚಂದ್ರಶೇಖರಯ್ಯ 1.38 ಲಕ್ಷ ಮತಗಳನ್ನು ಪಡೆದಿದ್ದರು.
ಈ ಬಾರಿ ಮೈತ್ರಿ ಇರುವುದರಿಂದ ಕಾಂಗ್ರೆಸ್-ಜೆಡಿಎಸ್ ಮತಗಳು ಕ್ರೊಢೀಕರಣಗೊಂಡರೆ ಸುಲಭವಾಗಿ ಜಯ ಸಾಧಿಸಬಹುದು ಎಂಬ ಲೆಕ್ಕಾಚಾರ ಸಿದ್ದರಾಮಯ್ಯ ಅವರದ್ದು ಎಂದು ಹೇಳಲಾಗುತ್ತಿದೆ. ಒಟ್ಟಾರೆ ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು. ರಾಹುಲ್ ಗಾಂಧಿ ಮೈಸೂರಿನಿಂದ ಸ್ಪರ್ಧೆ ಮಾಡಿದರೂ ಅಚ್ಚರಿ ಪಡುವ ಹಾಗಿಲ್ಲ.