18 ವರ್ಷಗಳಲ್ಲಿ 13 ಜಿಲ್ಲಾಧಿಕಾರಿಗಳಿಗೆ ಸಾರಥಿ!
ಉಡುಪಿ, ಮಾ.26: ತನ್ನ 31 ವರ್ಷಗಳ ಸರಕಾರಿ ಸೇವೆಯಲ್ಲಿ ಸುಧೀರ್ಘ 18 ವರ್ಷಗಳ ಕಾಲ 13 ಜಿಲ್ಲಾಧಿಕಾರಿಗಳಿಗೆ ಕಾರು ಚಾಲಕರಾಗಿ ದುಡಿದ ರುಕ್ಮಯ್ಯ ನಾಯ್ಕ(60) ಇದೀಗ ನಿವೃತ್ತಿಯ ಹೊಸ್ತಿಲಿನಲ್ಲಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಅಪಘಾತ ರಹಿತ ಸರಕಾರಿ ಕಾರು ಚಾಲಕರಾಗಿ ಸೇವೆ ಸಲ್ಲಿಸಿದ್ದ ರುಕ್ಮಯ್ಯ ನಾಯ್ಕ, ಮಾ.30ರಂದು ನಿವೃತ್ತಿ ಹೊಂದಲಿದ್ದಾರೆ. ಈ ಮೊದಲು ಕುಂದಾಪುರ ಎಸಿ ಕಚೇರಿಯಲ್ಲಿ ಚಾಲಕರಾಗಿದ್ದ ಇವರು ತನ್ನ ಸೇವೆಯ ಬಹುವರ್ಷ ಐಎಎಸ್ ಅಧಿಕಾರಿಗಳಿಗೆ ಸಾರಥಿಯಾಗಿ ಕರ್ತವ್ಯ ನಿರ್ವಹಿಸಿರುವುದು ವಿಶೇಷವಾಗಿದೆ. ಮೂಲತಃ ಬೆಳ್ತಂಗಡಿಯ ಕಣಿಯೂರು ಗ್ರಾಮದ ಉಪ್ಪಿನೀರ ಹಳ್ಳದ ರುಕ್ಮಯ್ಯ ನಾಯ್ಕಿ, ಕಳೆದ ಹಲವು ವರ್ಷಗಳಿಂದ ಉಡುಪಿಯ ಬೈಲೂರಿನಲ್ಲಿ ವಾಸವಾಗಿದ್ದಾರೆ. ಇವರ ಪತ್ನಿ ವಿಜಯಾ ಬಾಯಿ, ಆದಿ ಉಡುಪಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಇಬ್ಬರು ಮಕ್ಕಳ ಪೈಕಿ ಹಿರಿಯ ಮಗ ಕೆ.ಆರ್.ಅಜಯ್ ಅಮೆರಿಕದ ಕಾಲಿಫೋರ್ನಿಯದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರೆ, ಕಿರಿಯ ಮಗ ಕೆ.ಆರ್.ಅಕ್ಷಯ್ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆ ಬಿಟ್ಟು ಕ್ಲೀನರ್ ವೃತ್ತಿ: 7ನೇ ತರಗತಿ ಅನುತ್ತೀರ್ಣರಾದ ರುಕ್ಮಯ್ಯ ನಾಯ್ಕಿ ಸಣ್ಣ ಪ್ರಾಯದಲ್ಲೇ ಕೆಲಸಕ್ಕೆ ಸೇರಿಕೊಂಡರು. ಮಂಗಳೂರಿನ ಲಾರಿಯೊಂದರಲ್ಲಿ ಕ್ಲೀನರ್ ಆಗಿ ವೃತ್ತಿ ಜೀವನ ಆರಂಭಿಸಿದ ಅದರು, ಮುಂದೆ ಡ್ರೈವಿಂಗ್ ಕಲಿತು ಅದೇ ಲಾರಿಯಲ್ಲಿ ಚಾಲಕನಾಗಿ ಮುಂದುವರೆದರು. 1988ರ ಫೆ.20ರಂದು ತನ್ನ 29ನೇ ವಯಸ್ಸಿನಲ್ಲಿ ಸರಕಾರಿ ಚಾಲಕನಾಗಿ ಸೇವೆಗೆ ಸೇರಿಕೊಂಡ ಇವರು, ಮೊದಲು ಕುಂದಾಪುರದ ತಾಪಂನಲ್ಲಿ ಚಾಲಕರಾಗಿ ಕರ್ತವ್ಯ ಆರಂಭಿಸಿದರು. ಅಲ್ಲಿ ಎರಡು ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದು, ನಂತರ ಕುಂದಾಪುರ ತಾಲೂಕು ಕಚೇರಿಗೆ ವರ್ಗಾವಣೆಗೊಂಡರು. ಅಲ್ಲಿಂದ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ (ಎಸಿ)ರ ಕಾರು ಚಾಲಕರಾಗಿ ನಿಯುಕ್ತಿಗೊಂಡರು.
ಸುಮಾರು 9-10ವರ್ಷಗಳ ಕಾಲ ಎಸಿ ಕಾರು ಚಾಲಕರಾಗಿದ್ದ ಇವರಿಗೆ, ಈ ಮಧ್ಯೆ ಎಸಿಯಾಗಿ ಬಂದ ಐಎಎಸ್ ಅಧಿಕಾರಿ ಗೌರವ ಗುಪ್ತ ಆತ್ಮೀಯರಾದರು. ಗೌರವ ಗುಪ್ತರಿಗೆ ಒಂದು ವರ್ಷ ಎಂಟು ತಿಂಗಳ ಕಾಲ ಚಾಲಕರಾಗಿದ್ದು, ಇವರ ಸೇವೆಯ ಬಗ್ಗೆ ಸಾಕಷ್ಟು ಮೆಚ್ಚಿಕೊಂಡಿದ್ದರು. ಮುಂದೆ 2000ರಲ್ಲಿ ಉಡುಪಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿ ಬಂದ ಗೌರವ ಗುಪ್ತ, ಎಸಿ ಕಚೇರಿಯಲ್ಲಿದ್ದ ತನ್ನ ಮೆಚ್ಚಿನ ಚಾಲಕ ರುಕ್ಮಯ್ಯ ನಾಯ್ಕಿರನ್ನು ತನ್ನ ಕಾರಿನ ಚಾಲಕನಾಗಿ ನೇಮಿಸಿಕೊಂಡರು. ಅಲ್ಲಿಂದ ಇಲ್ಲಿಯವರೆಗೆ 18ವರ್ಷಗಳ ಕಾಲ 13 ಜಿಲ್ಲಾಧಿಕಾರಿಗಳಿಗೆ ಸಾರಥಿಯಾಗಿ ಸೇವೆ ಸಲ್ಲಿಸಿದ ರುಕ್ಮಯ್ಯ ನಾಯ್ಕಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ರುಕ್ಮಯ್ಯ ನಾಯ್ಕ 18ವರ್ಷಗಳಲ್ಲಿ ಉಡುಪಿಯ ಜಿಲ್ಲಾಧಿಕಾರಿಗಳಾದ ಗೌರವ್ ಗುಪ್ತಾ (2000-02), ಎಸ್.ಆರ್.ಉಮಾ ಶಂಕರ್ (2002-04), ಶಾಮ್ ಭಟ್ (2004-06), ಶಾಂತರಾಜ್ (ಪ್ರಭಾರ), ವಿ.ಪೊನ್ನುರಾಜ್ (2006-08), ಹೇಮಲತಾ (2008-11), ಡಾ.ಎಂ.ಟಿ.ರೇಜು (2011- 14), ಡಾ.ಮುದ್ದು ಮೋಹನ್ (2014), ಎಸ್.ಎಸ್.ಪಟ್ಟಣಶೆಟ್ಟಿ (2014), ಡಾ.ವಿಶಾಲ್ ಆರ್. (2014-16), ಟಿ.ವೆಂಕಟೇಶ್ (2016-17), ಪ್ರಿಯಾಂಕಾ ಮೇರಿ ಫ್ರಾನ್ಸಿಸ್ (2017-19), ಹೆಫ್ಸಿಬಾ ರಾಣಿ ಕೊರ್ಲಪಾಟಿ (2019) ಅವರಿಗೆ ಚಾಲಕರಾಗಿ ದುಡಿದಿದ್ದಾರೆ.
ಜಿಲ್ಲೆಯ ಅತ್ಯುತ್ತಮ ಹುದ್ದೆಯಲ್ಲಿರುವ ಐಎಎಸ್ ಅಧಿಕಾರಿಗಳಿಗೆ ಉತ್ತಮ ಸೇವೆ ಸಲ್ಲಿರುವ ನೆಮ್ಮದಿ, ಆತ್ಮತೃಪ್ತಿ ನನಗೆ ಇದೆ. ನನ್ನ ಸೇವಾ ಅವಧಿಯಲ್ಲಿ ಜಿಲ್ಲೆಯಾದ್ಯಂತ ಸಾಕಷ್ಟು ಕಡೆ ಜಿಲ್ಲಾಧಿಕಾರಿಗಳನ್ನು ಕರೆದುಕೊಂಡು ಹೋಗಿದ್ದೇನೆ. ಅಗತ್ಯ ಬಿದ್ದಾಗ ಬೆಂಗಳೂರಿಗೂ ಕರೆದುಕೊಂಡು ಹೋಗಿದ್ದೇನೆ.
ರುಕ್ಮಯ್ಯ ನಾಯ್ಕ.
ಅಪಘಾತ ರಹಿತ ಚಾಲನೆ! ರುಕ್ಮಯ್ಯ ನಾಯ್ಕ
ತನ್ನ 31ವರ್ಷಗಳ ಚಾಲಕ ಸೇವೆಯಲ್ಲಿ ಎಂದಿಗೂ ಅಪಘಾತಕ್ಕೆ ಒಳಗಾಗಿಲ್ಲ. ಜಿಲ್ಲಾಧಿಕಾರಿಗಳಿಗೆ ಆರಂಭದಲ್ಲಿ ಅಂಬಾಸಿಡರ್, ನಂತರ ಎಸ್‌ಎಸ್ ಫೋರ್, ಇದೀಗ ಇನ್ನೋವಾ ಕಾರುಗಳ ಡ್ರೈವರ್ ಆಗಿ ದುಡಿದ ಅನುಭವ ಇವರದ್ದಾಗಿದೆ. ಕಾರುಗಳ ನಿರ್ವಹಣೆಗೆ ಆದ್ಯತೆ ನೀಡುತ್ತಿದ್ದ ಅವರು ಪ್ರತಿದಿನ ವಾಹನವನ್ನು ಶುಚಿಗೊಳಿಸುತ್ತಿದ್ದರು. ಆ ಕಾರಣದಿಂದಲೇ ಎಂದಿಗೂ ಈ ಕಾರುಗಳು ದಾರಿ ಮಧ್ಯೆ ಇವರಿಗೆ ಕೈಕೊಟ್ಟಿಲ್ಲ. ಇವರ ಸೇವೆಯನ್ನು ವೆುಚ್ಚಿ ಆಗಿನ ಜಿಲ್ಲಾಧಿಕಾರಿ ಉಮಾಶಂಕರ್ ಅತ್ಯುತ್ತಮ ನಾಗರಿಕ ಸೇವಾ ಜಿಲ್ಲಾ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು.