ತೇಜಸ್ವಿನಿ ಅನಂತಕುಮಾರ್ ಗೆ ಏಕೆ ಟಿಕೆಟ್ ಸಿಗಲಿಲ್ಲ ?

Update: 2019-03-27 10:34 GMT

‘’ನಾನ್ ಸಾಯದ್ನೆ ಕಾಯ್ತಿದಾರೆ, ನೋಡ್ತಿರು... ನಿನ್ನ ಹಿಟ್ಟಾಡಸ್ತಾರೆ ’’ ಎನ್ನುವುದು ನಮ್ಮ ಹಳ್ಳಿಯ ಕಡೆ ಹಿರಿಜೀವಗಳು ಕೆಮ್ಮುತ್ತ ಕೊನೆಯುಸಿರು ಎಳೆಯುವಾಗ, ತನ್ನ ಮಡದಿಗೆ ಹೇಳುವ ಮಾತಿದು. ಹಿಟ್ಟು ಅಂದರೆ ತಿನ್ನುವ ಮುದ್ದೆ, ಅದನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎಸೆದಾಡುವಂತೆ, ಮಕ್ಕಳು ನಿನ್ನನ್ನು ಆ ಮನೆಯಿಂದ ಈ ಮನೆಗೆ, ಈ ಮನೆಯಿಂದ ಆ ಮನೆಗೆ ಓಡಾಡಿಸಿ ಹಿಟ್ಟು ಸಿಗದಂತೆ ಮಾಡುತ್ತಾರೆ. ಅಸ್ತಿತ್ವವಿಲ್ಲದ ಅತಂತ್ರ ಸ್ಥಿತಿಗೆ ದೂಡುತ್ತಾರೆ ಎನ್ನುವುದು ಆ ಮಾತಿನ ಮರ್ಮ.

ಇದು ಈ ಕ್ಷಣದಲ್ಲಿ ನೆನಪಾದದ್ದು- ತೇಜಸ್ವಿನಿ ಅನಂತಕುಮಾರ್ ಅವರ ಸದ್ಯದ ಸ್ಥಿತಿಯನ್ನು ಕಂಡು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು 1996 ರಿಂದ 2014ರವರೆಗೆ, ಸತತವಾಗಿ ಆರು ಬಾರಿ ಗೆದ್ದು, ಕೇಂದ್ರದಲ್ಲಿ ಹಲವಾರು ಖಾತೆಗಳನ್ನು ನಿರ್ವಹಿಸಿ, ಭಾರತೀಯ ಜನತಾ ಪಕ್ಷದ ದೆಹಲಿ ಮಟ್ಟದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅನಂತ ಕುಮಾರ್, ಅಕಾಲಿಕ ಸಾವನ್ನಪ್ಪಿದರು. ನಂತರ, ದೆಹಲಿಯಿಂದ ಬೆಂಗಳೂರಿಗೆ ಬಂದ ಬಿಜೆಪಿ ನಾಯಕರು, ತೇಜಸ್ವಿನಿಯವರಿಗೆ ಸಾಂತ್ವನ ಹೇಳುವ ನೆಪದಲ್ಲಿ, ‘’ಚುನಾವಣೆಗೆ ಸಿದ್ಧವಾಗಿರಿ’’ ಎಂದು ಹೇಳಿಹೋಗಿದ್ದರು. ಸಂಘಪರಿವಾರದವರು ಜೊತೆಗಿದ್ದೇವೆ ಎಂದು ಧೈರ್ಯ ತುಂಬಿದ್ದರು. ಅನುಕಂಪದ ಅಲೆಯ ಮೇಲೆ ಗೆಲ್ಲುವುದು ಸುಲಭ ಎನ್ನುವ ಮಾತು ಸಹಜವಾಗಿ ಆ ಸಂದರ್ಭದಲ್ಲಿ ಚಾಲ್ತಿಯಲ್ಲಿತ್ತು.

ತೇಜಸ್ವಿನಿ ಅನಂತಕುಮಾರ್ ಅವರು ಕೂಡ ಈಗಾಗಲೇ ‘ಅದಮ್ಯ ಚೇತನ’ದ ಮೂಲಕ ಜನರ ಜೊತೆ ಸೇರಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಪತಿಯ ಜತೆಗೂಡಿ ರಾಜಕಾರಣದ ಒಳ-ಹೊರಗನ್ನು ಅರ್ಥ ಮಾಡಿಕೊಂಡಿದ್ದರು. ಜೊತೆಗೆ ಅನಂತಕುಮಾರ್ ಕೇಂದ್ರ ಮಂತ್ರಿಯಾಗಿ ಹಲವು ವ್ಯವಹಾರ ಗಳಲ್ಲಿ ಹಣ ತೊಡಗಿಸಿದ್ದು, ಆ ವ್ಯವಹಾರಗಳ ರಕ್ಷಣೆ, ಭದ್ರತೆ ಮತ್ತು ಮುಂದುವರಿಕೆಗಾಗಿ ರಾಜಕಾರಣದಲ್ಲಿರಬೇಕಾದ್ದು ಅನಿವಾರ್ಯವಾಗಿತ್ತು. ಹಾಗಾಗಿ ತೇಜಸ್ವಿನಿಯವರು ರಾಜಕಾರಣಕ್ಕಿಳಿಯಲು, ನಾಯಕರು ನೀಡಿದ ಆಶ್ವಾಸನೆಯಿಂದಾಗಿ ಚುನಾವಣೆಗೆ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧರಾದರು.

ಹಿತೈಷಿಗಳು, ಆಪ್ತರನ್ನು ಕರೆದು ಮಾತಾಡಿ ಚುನಾವಣೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳತೊಡಗಿದರು. ಅಭ್ಯರ್ಥಿ ಎಂಬ ಉಮೇದಿನಲ್ಲಿ ಓಡಾಡತೊಡ ಗಿದರು. ಅದಕ್ಕೆ ತಕ್ಕಂತೆ ಪಕ್ಷದ ಹಿರಿಯ ನಾಯಕರು ಸ್ಪಂದಿಸತೊಡಗಿದರು. ಬೆಂಗಳೂರು ಲೋಕಸಭಾ ಕ್ಷೇತ್ರಕ್ಕೊಳಪಡುವ ಶಾಸಕರಾದ ಅಶೋಕ್, ಸೋಮಣ್ಣ, ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ ಸಭೆ ಸೇರಿ ತೇಜಸ್ವಿನಿಯವರ ಹೆಸರನ್ನೇ ಶಿಫಾರಸ್ಸು ಮಾಡಿದರು. ರಾಜ್ಯಾಧ್ಯಕ್ಷ ಯಡಿಯೂರಪ್ಪನವರೂ ಎಸ್ ಎಂದರು.

ಆದರೆ ದೆಹಲಿಯಲ್ಲಾದ ದಿಢೀರ್ ಬೆಳವಣಿಗೆಯಿಂದಾಗಿ ತೇಜಸ್ವಿನಿ ಅನಂತಕುಮಾರ್ ಅವರನ್ನು ಕೈ ಬಿಟ್ಟು, ತೇಜಸ್ವಿ ಸೂರ್ಯ ಎಂಬ ಯುವಕನಿಗೆ ಟಿಕೆಟ್ ನೀಡಲಾಗಿದೆ.

ದಿಢೀರ್ ಬೆಳವಣಿಗೆಯಿಂದಾಗಿ ಕಂಗಾಲಾದ ತೇಜಸ್ವಿನಿ ಬೆಂಬಲಿತ ಬಿಜೆಪಿ ಕಾರ್ಯಕರ್ತರು- ರಾಜ್ಯ ಬಿಜೆಪಿ ನಾಯಕರು, ಸಂಘ ಪರಿವಾರದ ಮುಖಂಡರ ವಿರುದ್ಧ ಆಕ್ರೋಶಗೊಂಡು ಬೀದಿಗೆ ಇಳಿದರು. ಅವರ ಷಡ್ಯಂತ್ರಗಳ ವಿರುದ್ಧ ಧಿಕ್ಕಾರ ಕೂಗಿದರು. ಟಿಕೆಟ್ ಪಡೆದ ತೇಜಸ್ವಿ ಸೂರ್ಯ ಎಂಬ ಹುಡುಗನಿಗೆ ‘ಗೋ ಬ್ಯಾಕ್ ತೇಜಸ್ವಿ’ ಎಂದು ಘೋಷಣೆ ಕೂಗಿದರು. ಅಷ್ಟೇ ಅಲ್ಲ, ದೂರದ ವಿಜಯಪುರದಲ್ಲಿ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ‘’ತೇಜಸ್ವಿ ಸೂರ್ಯ ಯಾರು, ಈ ಬಾರಿ ಅಯೋಗ್ಯರಿಗೆಲ್ಲ ಟಿಕೆಟ್ ನೀಡಲಾಗಿದೆ, ತೇಜಸ್ವಿನಿಯವರಿಗೆ ಟಿಕೆಟ್ ತಪ್ಪಿಸಿದವರಿಗೆ ತಕ್ಕ ಉತ್ತರ ಸದ್ಯದಲ್ಲಿಯೇ ಸಿಗಲಿದೆ, ಅಸಂತೋಷವಾಗಲಿದೆ’’ ಎಂದು ಮಾರ್ಮಿಕವಾಗಿಯೇ ಪ್ರತಿಕ್ರಿಯಿಸಿದರು.

ತೇಜಸ್ವಿನಿ ಅನಂತಕುಮಾರ್ ಮನೆ ಮುಂದೆ ನಿಂತು ಬಿಜೆಪಿ ನಾಯಕರಿಗೆ ಧಿಕ್ಕಾರ ಕೂಗುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿನಿಯವರು, ‘’ಪಕ್ಷದ ನಿರ್ಧಾರಕ್ಕೆ ತಲೆಬಾಗುವೆ, ನನ್ನೆಲ್ಲ ಅಸಮಾಧಾನವನ್ನು ಬದಿಗಿಟ್ಟು ತೇಜಸ್ವಿ ಸೂರ್ಯನಿಗೆ ಬೆಂಬಲಿಸುವೆ, ಟಿಕೆಟ್ ತಪ್ಪಿದ್ದೇಕೆ ಎಂದು ಕಾರ್ಯಕರ್ತರು ಕೇಳುತ್ತಿರುವ ಪ್ರಶ್ನೆಗೆ ನಾನೂ ಕೂಡ ಉತ್ತರ ಬಯಸುತ್ತೇನೆ’ ಎಂಬ ಜಾಣ್ಮೆಯ ಮಾತುಗಳನ್ನೇ ಆಡಿದ್ದಾರೆ. ಆದರೂ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ‘’ಅನಂತಕುಮಾರ್ ದೆಹಲಿ ಮಟ್ಟದಲ್ಲಿ ಅಡ್ವಾಣಿಯವರ ಗುಂಪಿನಲ್ಲಿ ಗುರುತಿಸಿಕೊಂಡವರು. ವೆಂಕಯ್ಯ ನಾಯ್ಡು ಅವರಿಗೆ ಆಪ್ತರು. ಆದರೆ ಇವತ್ತು ಟಿಕೆಟ್ ನೀಡುವ ಸಂದರ್ಭದಲ್ಲಿ ಮೋದಿ ಮತ್ತು ಶಾ ಅವರೇ ಮುಂಚೂಣಿ ನಾಯಕರು. ಸ್ಥಳೀಯ ಸಂಘ ಪರಿವಾರ ದವರೊಬ್ಬರ ಚಿತಾವಣೆಯಿಂದಾಗಿ ತೇಜಸ್ವಿನಿ ಮೇಡಂಗೆ ಟಿಕೆಟ್ ತಪ್ಪಿಸಲಾಗಿದೆ. ಇದಕ್ಕೆ ತಕ್ಕ ಉತ್ತರ ಕೊಡಲಿದ್ದೇವೆ’’ ಎಂದಿದ್ದಾರೆ.

ಅನಂತಕುಮಾರ್ ಸತತವಾಗಿ ಆರು ಬಾರಿ ಗೆದ್ದ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯಂತಾಗಿಸಿದ್ದರು. ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ, 3ರಲ್ಲಿ ಕಾಂಗ್ರೆಸ್ ಶಾಸಕರಿದ್ದು, ಕಾಂಗ್ರೆಸ್ಸಿನ ನಾಯಕರನ್ನೂ ಸಂಭಾಳಿಸುವಷ್ಟು ವರ್ಚಸ್ಸು ಮತ್ತು ವಜನ್ನುವುಳ್ಳವರಾಗಿದ್ದರು. ಒಕ್ಕಲಿಗರ ಅಶೋಕ್, ಲಿಂಗಾಯತರ ಸೋಮಣ್ಣ, ರೆಡ್ಡಿ ಸಮುದಾಯಕ್ಕೆ ಸೇರಿದ ಸತೀಶ್ ರೆಡ್ಡಿಗಳ ಜೊತೆಗೆ ಆರೆಸೆಸ್ ಮತ್ತು ಬಿಜೆಪಿಯ ಬೆಂಬಲಿತ ಬ್ರಾಹ್ಮಣರ ಮತಗಳ ಬಲದಿಂದ ಅನಂತಕುಮಾರ್, ಗೆಲುವನ್ನು ದಾಖಲಿಸುತ್ತ ದಾಖಲೆ ಬರೆದಿದ್ದರು.

ಇಂತಹ ಭದ್ರಕೋಟೆ ನಿರ್ಮಿಸಿ, ಭರವಸೆಯ ನಾಯಕನಾಗಿ ಹೊರಹೊಮ್ಮಿದ್ದ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೂ ಆಗಿದ್ದ ಅನಂತಕುಮಾರ್ ಅವರಿಗೆ ವಿರೋಧಿಗಳಿರಲಿಲ್ಲವೇ ಎಂದರೆ, ‘’ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಅವರಿಗೆ ಶತ್ರುಗಳಿಗಿಂತ ಮಿತ್ರರೇ ಹೆಚ್ಚಾಗಿದ್ದರು. ಜನಪರ ಕೆಲಸಗಳಿಂದ ಜನಾನುರಾಗಿ ನಾಯಕರಾಗಿ ರೂಪಗೊಂಡಿದ್ದರು. ಜನಸಾಮಾನ್ಯರ ಜತೆ ಬೆರೆತು ಬಾಂಧವ್ಯ ವೃದ್ಧಿಸಿಕೊಂಡಿದ್ದರು. ಹಾಗೆ ನೋಡಿದರೆ, ಅವರಿಗೆ ಬಿಜೆಪಿಯಲ್ಲಿಯೇ ವಿರೋಧಿಗಳು ಹೆಚ್ಚಾಗಿದ್ದರು.

ಕೇಂದ್ರದಲ್ಲಿ ಮಂತ್ರಿಯಾಗಿದ್ದು, ಅಡ್ವಾಣಿಗೆ ಹತ್ತಿರದವರಾಗಿದ್ದರಿಂದ, ಸ್ಥಳೀಯ ನಾಯಕರು ಮತ್ತು ಸಂಘ ಪರಿವಾರ ಮುಖಂಡರು ಸುಮ್ಮನಾಗಿದ್ದರು. ಈಗ ಅವರಿಲ್ಲದಾಗ, ಅಡ್ವಾಣಿಯವರೂ ಮೂಲೆಗುಂಪಾದಾಗ ಇವರೆಲ್ಲ ಎದ್ದು ನಿಂತಿದ್ದಾರೆ. ಗಂಡಸರಿಲ್ಲದ ಮನೆಯ ಹೆಂಗಸನ್ನು ಹೆದರಿಸಿ ದೂರ ಸರಿಯುವಂತೆ ಮಾಡಿದ್ದಾರೆ. ತೇಜಸ್ವಿನಿಯವರಿಗೆ ಟಿಕೆಟ್ ತಪ್ಪಿಸುವ ಮೂಲಕ ಹಳೆಯ ಸೇಡು ತೀರಿಸಿಕೊಂಡಿದ್ದಾರೆ. ಇವರಾರು ಎಂಬುದು ಜನಕ್ಕೆ ಗೊತ್ತಿದೆ, ಅದು ಅದಷ್ಟು ಬೇಗ ಹೊರಬರಲಿದೆ’’ ಎನ್ನುತ್ತಾರೆ, ಹೆಸರು ಹೇಳಲು ಇಚ್ಛಿಸದ ಬಿಜೆಪಿ ನಾಯಕರು.

ಅಂದರೆ, ಅನಂತಕುಮಾರ್ ಇರುವವರೆಗೂ ಬಾಲ ಮುದುರಿಕೊಂಡಿದ್ದ ಭಾರತೀಯ ಜನತಾ ಪಕ್ಷದೊಳಗೇ ಇದ್ದ ಮುಖೇಡಿ ನಾಯಕರು ಹಾಗೂ ಬೆನ್ನ ಹಿಂದಿನ ಕೆಲಸಗಳಲ್ಲಿ ನಿಷ್ಣಾತರಾದ ಸಂಘಪರಿವಾರದ ‘ಸಂಭಾವಿತರು’ ಈಗ ಮುಂಚೂಣಿಗೆ ಬಂದು ನಿಂತಿದ್ದಾರೆ. ವಿಧವೆ ತೇಜಸ್ವಿನಿಯವರನ್ನು ಚೆಂಡಾಡು ತ್ತಿದ್ದಾರೆ. ವಿಪರ್ಯಾಸಕರ ಸಂಗತಿ ಎಂದರೆ, ಅನಂತಕುಮಾರ್ ನಿಧನರಾದಾಗ, ಹಾಡಿ ಹೊಗಳಿದ ಆಚಾರ್ಯರು, ಪುಟಗಟ್ಟಲೆ ಬರೆದ ಪತ್ರಕರ್ತರು, ಪರಾಕು ಹೇಳಿದ ಪುಢಾರಿಗಳು ಈಗ ಅಪ್ಪಟ ಅವಕಾಶವಾದಿಗಳಾಗಿ ಅಂತರ್ದಾನವಾಗಿದ್ದಾರೆ. ಹಾಗೆಯೇ ಅತ್ತ ಮಂಡ್ಯದಲ್ಲಿಯೂ ಅಂಬರೀಷ್ ರಿಲ್ಲದ ಸುಮಲತಾ ಅವರನ್ನು, ತಮ್ಮ ಅನುಕೂಲಕ್ಕೆ ತಕ್ಕಂತೆ ಬಿಜೆಪಿ ಬಳಸಿಕೊಂಡು ಬಯಲಾಗಿದೆ.

ತಾಯಿಯನ್ನು ತನ್ನ ಮಕ್ಕಳು ಮನೆಯಲ್ಲಿಯೇ ಅತಂತ್ರ ಸ್ಥಿತಿಗೆ ದೂಡುವಂತೆ, ಬಿಜೆಪಿ-ಸಂಘ ಪರಿವಾರದ ನಾಯಕರೆ ಬಿಜೆಪಿಯ ಅನಂತಕುಮಾರ್ ಪತ್ನಿ ತೇಜಸ್ವಿನಿಯವರಿಗೆ ಟಿಕೆಟ್ ತಪ್ಪಿಸಿ ಅಸಹಾಯಕ ಸ್ಥಿತಿಗೆ ದೂಡಿದ್ದಾರೆ. ಹಾಗೆಯೇ, ಹಳ್ಳಿಯ ಹಿರಿಯರ ‘ಹಿಟ್ಟಾಡಸ್ತಾರೆ’ ಎಂಬುದು ಮತ್ತೆ ಮತ್ತೆ ನಿಜವಾಗುತ್ತಲೇ ಇದೆ.

Writer - -ಬಸು ಮೇಗಲಕೇರಿ

contributor

Editor - -ಬಸು ಮೇಗಲಕೇರಿ

contributor

Similar News

ನಾಸ್ತಿಕ ಮದ