ನ್ಯಾಯವಿಲ್ಲದ ‘ಶಕ್ತಿ’ ಮತ್ತು ಶಕ್ತಿಯಿಲ್ಲದ ‘ನ್ಯಾಯ’

Update: 2019-03-29 18:35 GMT

ಅಮೆರಿಕದ ಸಾಮಂತನಾಗಿ ದಕ್ಷಿಣ ಏಶ್ಯಾದಲ್ಲಿ ಭಾರತವು ಹುಲಿ ಸವಾರಿ ಮಾಡಲು ಹೊರಟಿದೆ. ಪ್ರಧಾನಿ ಮೋದಿ ಹೇಳಿದಂತೆ ಇಂದು ಈ ಉಪಗ್ರಹ ನಿರೋಧಕ ತಂತ್ರಜ್ಞಾನವಿರುವುದು ಕೇವಲ ಅಮೆರಿಕ, ರಶ್ಯಾ ಹಾಗೂ ಚೀನಾಗಳಲ್ಲಿ ಮಾತ್ರ. ಈಗ ಭಾರತವೂ ಅದನ್ನು ಪಡೆದುಕೊಂಡಿರುವುದರಿಂದ ದೇಶವು ಹೆಮ್ಮೆ ಪಡಬೇಕೆಂದು ಅವರು ಬಯಸುತ್ತಿದ್ದಾರೆ. ಆದರೆ ಅಮೆರಿಕ, ರಶ್ಯಾ ಹಾಗೂ ಚೀನಾಗಳ ಜಿಡಿಪಿಗಳು, ಅಲ್ಲಿಯ ಜನರ ಬದುಕಿನ ಮಟ್ಟ-ಸೌಲಭ್ಯಗಳು ಭಾರತಕ್ಕಿಂತ ಹಲವು ಪಟ್ಟು ಜಾಸ್ತಿ ಇವೆ. ಆದರೆ ನಮ್ಮ ದೇಶ?


ಕಾಂಗ್ರೆಸ್ ಪಕ್ಷವು ಘೋಷಿಸಿದ ‘ನ್ಯಾಯ್’ ಯೋಜನೆಗೆ ಉತ್ತರವೇನೋ ಎಂಬಂತೆ ಮೋದಿ ಸರಕಾರವು ಮೊನ್ನೆ ‘ಮಿಷನ್ ಶಕ್ತಿ’ಯ ಯಶಸ್ಸನ್ನು ಘೋಷಿಸಿದೆ. ವಾಸ್ತವವೇನೆಂದರೆ ಮೋದಿಯ ‘ಶಕ್ತಿ’ಯಲ್ಲಿ ನ್ಯಾಯವೂ ಇಲ್ಲ. ಕಾಂಗ್ರೆಸ್‌ನ ‘ನ್ಯಾಯ್’ಕ್ಕೆ ಜಾರಿಗೆ ಬೇಕಿರುವಷ್ಟು ಶಕ್ತಿಯೂ ಇಲ್ಲ. ಮೊನ್ನೆ ತಾನೇ ಕಾಂಗ್ರೆಸ್ ಪಕ್ಷವು ತಾನು ಅಧಿಕಾರಕ್ಕೆ ಬಂದರೆ ಬಡವರಿಗೆ ವಾರ್ಷಿಕ ರೂ. 72,000 ಆದಾಯವನ್ನು ಖಾತರಿಗೊಳಿಸುವ ‘ನ್ಯೂನತಮ್ ಆದಾಯ ಯೋಜನಾ- ನ್ಯಾಯ್’ ಎಂಬ ಯೋಜನೆಯನ್ನು ಜಾರಿಗೆ ತರುವ ಚುನಾವಣಾ ಭರವಸೆಯನ್ನು ನೀಡಿತು. ಇದರ ಸಾಧ್ಯಾಸಾಧ್ಯತೆಗಳೇನು? ಮಾರುಕಟ್ಟೆ ಆರ್ಥಿಕತೆಯನ್ನು ಜಾರಿಗೆ ತಂದು ಈ ದೇಶದ ಬಡವರನ್ನು ನಿತ್ರಾಣಗೊಳಿಸಿದ ಕಾಂಗ್ರೆಸ್ ಪಕ್ಷಕ್ಕೆ ಈ ಯೋಜನೆಯ ಬಗ್ಗೆ ನಿಜಕ್ಕೂ ಎಷ್ಟು ಬದ್ಧತೆ ಇದೆ? ಎಂಬ ಹಲವಾರು ಸಕಾರಣವಾದ ಪ್ರಶ್ನೆಗಳನ್ನದು ಹುಟ್ಟುಹಾಕಿದೆ. ಅದೇನೇ ಇದ್ದರೂ ಫುಲ್ವಾಮ-ಬಾಲಕೋಟ್ ನಂತರ ದೇಶ, ಮೋದಿ ಮತ್ತು ಸೇನೆಯನ್ನು ಬಿಟ್ಟು ಜನರ ಸಮಸ್ಯೆಗಳನ್ನು ಪ್ರಸ್ತಾಪಿಸುವುದೇ ದೇಶದ್ರೋಹವೆಂದಾಗಿರುವಾಗ ‘ನ್ಯಾಯ್’ ಘೋಷಣೆಯು ಏನಿಲ್ಲವೆಂದರೂ ಜನರ ಬದುಕಿನ ಸಮಸ್ಯೆಗಳನ್ನು ಮತ್ತೆ ಪ್ರಸ್ತಾಪಿಸಿದೆ. ಆದ್ದರಿಂದ ಹೀಗಾದರೂ ಜನರ ಅಜೆಂಡಾಗಳು ಮತ್ತೊಮ್ಮೆ ಮುನ್ನೆಲೆಗೆ ಬರಬಹುದೆಂಬ ನಿರೀಕ್ಷೆಯನ್ನೂ ಹಲವರು ಇಟ್ಟುಕೊಂಡಿದ್ದರು. ಆದರೆ ಈಗ ಬಿಜೆಪಿಯು ‘ಮಿಷನ್ ಶಕ್ತಿ’ಯ ಮೂಲಕ ಜನರ ಗಮನವು ಮತ್ತೊಮ್ಮೆ ನೆಲವನ್ನು ಬಿಟ್ಟು ಆಕಾಶದೆಡೆಗೆ ತಿರುಗುವಂತೆ ಮಾಡಿದೆ.

ನೆಲದಿಂದ 300 ಕಿ.ಮೀ. ಎತ್ತರದಲ್ಲಿರುವ ಭಾರತದ ಅಂತರಿಕ್ಷ ಪರಿಸರದಲ್ಲಿ ಅನಪೇಕ್ಷಿತವಾಗಿ ಕಂಡುಬರುವ ಉಪಗ್ರಹಗಳನ್ನು ಹೊಡೆದುರುಳಿಸುವ ಬಾಹ್ಯಾಂತರಿಕ್ಷ ‘ಆ್ಯಂಟಿ ಸೆಟಿಲೈಟ್- ಎಎಸ್‌ಎಟಿ’ ಎಂಬ ಉಪಗ್ರಹ ನಿರೋಧ ಕ್ಷಿಪಣಿಯನ್ನು ನಮ್ಮ ವಿಜ್ಞಾನಿಗಳು ಯಶಸ್ವಿಯಾಗಿ ತಯಾರಿಸಿ, ಪ್ರಯೋಗಾರ್ಥ ಉಡಾಯಿಸಿ ಯಶಸ್ವಿಯಾಗಿದ್ದಾರೆ. ಈ ಯೋಜನೆ 2010ರಿಂದಲೂ ಜಾರಿಯಲ್ಲಿತ್ತು. ಆದರೆ ಬಿಜೆಪಿಯ ಗೊಬೆಲ್ಸ್ ಫ್ಯಾಕ್ಟರಿಯು ವಿಜ್ಞಾನಿಗಳ ಈ ಸಾಧನೆಯನ್ನು ‘ಮಿಷನ್ ಮೋದಿ’ ಯ ಸಾಧನೆಯೆಂಬಂತೆ ಪ್ರಚಾರ ಪ್ರಾರಂಭಿಸಿವೆ. ಇಂತಹ ‘ಶಕ್ತಿ’ ಮಿಷನ್ನುಗಳು ಭೂಗ್ರಹಕ್ಕೆ, ಜಾಗತಿಕ ಮಾನವಕುಲದ ಭವಿಷ್ಯಕ್ಕೆ ‘ಅನ್ಯಾಯ’ ಮಾಡುತ್ತವಾದ್ದರಿಂದ ಇಂತಹ ಯೋಜನೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಜಾಗತಿಕ ಸಮುದಾಯ ‘ಶಕ್ತ’ ರಾಷ್ಟ್ರಗಳ ಮೇಲೆ ಒತ್ತಡ ಹಾಕುತ್ತಲೇ ಬಂದಿವೆ. ಅದರೆ ಯುಪಿಎ ಕಾಲದಿಂದಲೂ ಭಾರತವು ಈ ಕರೆಗೆ ಕಿಂಚಿತ್ತೂ ಕಿವಿಗೊಡದೆ ಜಗತ್ತನ್ನು ಬಲಿಗೊಡುವ ‘ಶಕ್ತ’ ರಾಷ್ಟ್ರವಾಗುವ ಯೋಜನೆಗಳನ್ನು ಮುಂದುವರಿಸಿಕೊಂಡು ಬಂದಿವೆ.

ಅಂತಹ ಒಂದು ಯೋಜನೆಯ ಒಂದು ಪ್ರಯೋಗ ಮೋದಿ ಕಾಲದಲ್ಲಿ ಯಶಸ್ವಿಯಾಗಿದೆಯೇ ವಿನಃ ಇದರಲ್ಲಿ ಮೋದಿ ಸರಕಾರದ ಸಾಧನೆ ಏನಿಲ್ಲ. ಮತ್ತದು ಬಿಜೆಪಿ ಪಕ್ಷದ ಯೋಜನೆಯೂ ಅಲ್ಲ. ಹಾಗೆಯೇ ಜಗತ್ತಿನ ಮತ್ತು ಮನುಕುಲದ ಒಳಿತಿನ ದೃಷ್ಟಿಯಿಂದ ನೋಡುವುದಾದರೆ ಇದರಲ್ಲಿ ಹೆಮ್ಮೆ ಪಟ್ಟ್ಟುಕೊಳ್ಳುವಂಥದ್ದೂ ಏನಿಲ್ಲ. ಭೂಮ್ಯಾಂತರಿಕ್ಷಕ್ಕೆ ಈವರೆಗೆ ಜಗತ್ತಿನ ಬೇರೆಬೇರೆ ದೇಶಗಳು 5,000ಕ್ಕೂ ಹೆಚ್ಚು ಉಪಗ್ರಹಗಳನ್ನು ಹಾರಿಬಿಟ್ಟಿವೆ. ಅವುಗಳಲ್ಲಿ 1,000ಕ್ಕೂ ಹೆಚ್ಚು ಉಪಗ್ರಹಗಳು ಜಗತ್ತಿನ ಮತ್ತು ತಮ್ಮ ತಮ್ಮ ಜನಕ ದೇಶಗಳ ಅರ್ಥಿಕತೆ, ಕೃಷಿ, ವಾತಾವರಣ, ಬೇಹುಗಾರಿಕೆ ಇನ್ನಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕಳಿಸುತ್ತಿವೆ. ಅವುಗಳಲ್ಲಿ ರಶ್ಯಾ, ಜಪಾನ್ ಹಾಗೂ ಐರೋಪ್ಯ ಒಕ್ಕೂಟ ಮತ್ತು ಇದೀಗ ಚೀನಾಗಳಿಗೆ ಸೇರಿದ ಉಪಗ್ರಹಗಳೇ ಹೆಚ್ಚು. ಅಮೆರಿಕ-ರಶ್ಯಾ ಶೀತಲ ಸಮರದ ಕಾಲದಲ್ಲೇ ಮತ್ತೊಬ್ಬರ ಬೇಹುಗಾರಿಕಾ ಉಪಗ್ರಹಗಳನ್ನು ಕೆಡಹುವ ಅಥವಾ ನಿಷ್ಕ್ರಿಯಗೊಳಿಸುವಂಥ ’ಆ್ಯಂಟಿ ಸೆಟಿಲೈಟ್- ಎಎಸ್‌ಎಟಿ’ ಕ್ಷಿಪಣಿ ಸಾಧನಗಳನ್ನು ಆ ದೇಶಗಳು ಅಭಿವೃದ್ಧಿಪಡಿಸಿದ್ದವು. ಅವೆರಡು ದೇಶಗಳು 1950ರಲ್ಲೇ ಈ ಕ್ಷಿಪಣಿಗಳನ್ನು ಮಾಡಿಟ್ಟುಕೊಂಡರೆ, ಚೀನಾ 2007ರಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು. ಆದ್ದರಿಂದಲೇ ಅಂದಿನ ಯುಪಿಎ ಸರಕಾರ ಆಗಿನ ವಿರೋಧ ಪಕ್ಷವಾಗಿದ್ದ ಬಿಜೆಪಿಯ ಸಂಪೂರ್ಣ ಬೆಂಬಲದೊಂದಿಗೆ ಅಮೆರಿಕದ ಶರತ್ತುಗಳಿಗೆಲ್ಲ ಒಪ್ಪುತ್ತಾ ಮತ್ತಷ್ಟು ಅಮೆರಿಕದ ಶರಣುಹೋಯಿತು. ಹಾಗೂ ಅವಮಾನಕಾರಿ ನ್ಯೂಕ್ಲಿಯರ್ ಒಪ್ಪಂದಕ್ಕೆ ಸಹಿ ಹಾಕಿತು. ಮಾತ್ರವಲ್ಲದೆ ಅದರ ಪರೋಕ್ಷ ಸಹಕಾರ ಮತ್ತು ಬೆಂಬಲದೊಂದಿಗೆ 2010ರಿಂದಲೇ ‘ಮಿಷನ್ ಶಕ್ತಿ’ಯ ತಯಾರಿಗಳನ್ನು ಪ್ರಾರಂಭಿಸಿತ್ತು. ಮೋದಿ ಅಧಿಕಾರಕ್ಕೆ ಬಂದ ಮೇಲೆ ಈ ಅಮೆರಿಕ ಗುಲಾಮಿಕೆ ಇನ್ನೂ ಹೆಚ್ಚಾಗಿದ್ದು ಮಾತ್ರವಲ್ಲದೆ ಇಸ್ರೇಲಿನ ಕೊಲೆೆಗಡುಕ ನೆಂಟಸ್ತಿಕೆ ಮತ್ತು ತಾಂತ್ರಿಕ ಮಿಲಿಟರಿ ಸಹಾಯವೂ ದೊರೆಯಿತು. ಇದೆಲ್ಲದರ ಹಿನ್ನೆಲೆಯಲ್ಲಿ ‘ದೇಶೀಯ ತಂತ್ರಜ್ಞಾನ’ವನ್ನೇ ಆಧರಿಸಿ ‘ಮಿಷನ್ ಶಕ್ತಿ’ ಈಗ ಯಶಸ್ಸನ್ನು ಕಂಡಿದೆ. ಆದರೆ ಹೀಗೊಮ್ಮೆ ಅಂತರಿಕ್ಷದಲ್ಲಿ ಉಪಗ್ರಹಗಳನ್ನು ನಾಶಗೊಳಿಸಲು ಪ್ರಾರಂಭಿಸಿದರೆ ಅವುಗಳ ಅವಶೇಷಗಳು ಭೂಮ್ಯಾಂತರಿಕ್ಷದಲ್ಲೇ ಶಾಶ್ವತವಾಗಿ ಉಳಿದುಕೊಂಡು ಭೂಮಿಯ ವಾತಾವರಣದ ಮೇಲೆ ಅನಾಹುತಕಾರಿ ಪರಿಣಾಮಗಳನ್ನುಂಟು ಮಾಡುತ್ತವೆ ಎಂದು ಜಾಗತಿಕ ಸಮುದಾಯವು 1980ರಿಂದಲೂ ಜಗತನ್ನು ಎಚ್ಚರಿಸುತ್ತಾ ಬಂದಿದೆ. ಅಷ್ಟು ಮಾತ್ರವಲ್ಲ ನ್ಯೂಕ್ಲಿಯರ್ ತಂತ್ರಜ್ಞಾನದಂತೆ ಈ ತಂತ್ರಜ್ಞಾನವು ಕೇವಲ ಶತ್ರುಗಳನ್ನು ಬೆದರಿಸಲು ಉಪಯುಕ್ತವೇ ವಿನಃ ಯಾವ ದೇಶಗಳೂ ಇದನ್ನು ಬಳಸಲಾಗುವುದಿಲ್ಲ.

ಏಕೆಂದರೆ ಅದರಿಂದ ಪರಸ್ಪರರ ಸರ್ವನಾಶ ಖಂಡಿತ. ಅದಕ್ಕೆ ಅದನ್ನು ‘ವೆಪನ್ ಆಫ್ ಮ್ಯೂಚುಯಲ್ ಡಿಸ್ಟ್ರಕ್ಷನ್’ ಎಂದು ಕರೆಯುತ್ತಾರೆ. ಆದರೂ ಸರ್ವನಾಶಕ್ಕೆ ಪೈಪೋಟಿ ನಡೆಸುವಂತೆ ‘ಶಕ್ತ’ ರಾಷ್ಟ್ರಗಳು ಎಂದಿಗೂ ಬಳಸದ ಸಾವಿನ ಸರಕಿನ ದಾಸ್ತಾನನ್ನು ಹೆಚ್ಚಿಸಿಕೊಳ್ಳುತ್ತಲೇ ಹೋದವು. ಇಂತಹ ಮಿಲಿಟರಿ ಯೋಜನೆಗಳಿಗಾಗಿ ಮಾಡುತ್ತಲೇ ಇರಬೇಕಾದ ವೆಚ್ಚವನ್ನು ಸರಿದೂಗಿಸಿಕೊಳ್ಳಲು ತಮ್ಮ ತಮ್ಮ ದೇಶಗಳಲ್ಲಿ ಜನರ ಕಲ್ಯಾಣಕ್ಕಾಗಿ ಮಾಡುತ್ತಿದ್ದ ವೆಚ್ಚಗಳನ್ನು ಕಡಿತಗೊಳಿಸುತ್ತಾ ಹೋದವು. ಹೀಗಾಗಿಯೇ ಇಂದು ಇತರ ಶ್ರೀಮಂತ ದೇಶಗಳಿಗೆ ಹೋಲಿಸಿದಲ್ಲಿ ಈ ‘ಎಎಸ್‌ಎಟಿ’ ದೇಶಗಳಲ್ಲಿ ಮಾತ್ರ ಆರ್ಥಿಕ ಅಸಮಾನತೆ ಮತ್ತು ರಾಜಕೀಯ ಅರಾಜಕತೆ ಅತ್ಯಂತ ಹೆಚ್ಚಾಗಿದೆ. ಅಮೆರಿಕ ಹಾಗೂ ರಶ್ಯಾಗಳಿಗೆ ಈ ಹಿಂದೆ ಜಗತ್ತಿನ ಮೇಲಿದ್ದ ಹಿಡಿತವೂ ತಪ್ಪಿದೆ. ಹುಲಿ ಸವಾರಿಯ ಸಹಜ ಅಪಾಯಗಳಿವು.

ಉಪಗ್ರಹ ನಾಶದ ಕ್ಷಿಪಣಿಯಲ್ಲಿ ನಮ್ಮ ವಿಜ್ಞಾನಿಗಳ ಜ್ಞಾನದ ಫಲವಿದೆ. ಆದರೆ ಜ್ಞಾನಕ್ಕೆ ಇರಬೇಕಾದ ಸರ್ವೋದಯದ ‘ಶೀಲ’ವನ್ನು, ಜಗತ್ತಿನ ಒಂದು ನಾಗರಿಕ ರಾಷ್ಟ್ರವಾಗಲು ಇರಬೇಕಾದ ‘ಕರುಣಾ-ಮೈತ್ರಿ’ಯನ್ನು ಮೋದಿ ಸರಕಾರ ನಾಶಮಾಡಿದೆ. ಹೀಗಾಗಿ ‘ಮಿಷನ್ ಶಕ್ತಿ’ ಒಂದು ಶೀಲವಿಲ್ಲದ ಜ್ಞಾನದ ಸಂಕೇತವೂ ಆಗಿದೆ. ಅಮೆರಿಕದ ಸಾಮಂತನಾಗಿ ದಕ್ಷಿಣ ಏಶ್ಯಾದಲ್ಲಿ ಭಾರತವು ಹುಲಿ ಸವಾರಿ ಮಾಡಲು ಹೊರಟಿದೆ. ಪ್ರಧಾನಿ ಮೋದಿ ಹೇಳಿದಂತೆ ಇಂದು ಈ ಉಪಗ್ರಹ ನಿರೋಧಕ ತಂತ್ರಜ್ಞಾನವಿರುವುದು ಕೇವಲ ಅಮೆರಿಕ, ರಶ್ಯಾ ಹಾಗೂ ಚೀನಾಗಳಲ್ಲಿ ಮಾತ್ರ. ಈಗ ಭಾರತವೂ ಅದನ್ನು ಪಡೆದುಕೊಂಡಿರುವುದರಿಂದ ದೇಶವು ಹೆಮ್ಮೆ ಪಡಬೇಕೆಂದು ಅವರು ಬಯಸುತ್ತಿದ್ದಾರೆ. ಆದರೆ ಅಮೆರಿಕ, ರಶ್ಯಾ ಹಾಗೂ ಚೀನಾಗಳ ಜಿಡಿಪಿಗಳು, ಅಲ್ಲಿಯ ಜನರ ಬದುಕಿನ ಮಟ್ಟ-ಸೌಲಭ್ಯಗಳು ಭಾರತಕ್ಕಿಂತ ಹಲವು ಪಟ್ಟು ಜಾಸ್ತಿ ಇವೆ. ಆದರೆ ನಮ್ಮ ದೇಶ? ಹತ್ತು ಮೀಟರ್ ಮೂವತ್ತು ಅಡಿ ಆಳದ ಒಳಚರಂಡಿಗಿಳಿಯುವ ಯಂತ್ರಗಳಿಲ್ಲದೆ ದಿನಂಪ್ರತಿ ಹತ್ತಾರು ದಲಿತ ಕಾರ್ಮಿಕರು ಚರಂಡಿಗಳಲ್ಲೇ ಉಸಿರುಗಟ್ಟಿ ಸಾಯುತ್ತಿರುವ ದೇಶದಲ್ಲಿ ಮುನ್ನೂರು ಕಿಲೋಮೀಟರ್ ದೂರದ ಅಂತರಿಕ್ಷಕ್ಕೆ ಹಾರುವ ವಿನಾಶಕಾರಿ ಕ್ಷಿಪಣಿ ತಯಾರಿಸಲು ಸಾಧ್ಯವಾದದ್ದು ನಮ್ಮ ನಾಗರಿಕತೆಯಲ್ಲೇ ಹರಿದುಬಂದಿರುವ ಕ್ರೌರ್ಯದ ಸಂಕೇತವೇ ಹೊರತು ಸಾಧನೆಯ ಸಂಕೇತವಲ್ಲ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News

ನಾಸ್ತಿಕ ಮದ