ಶಿವಮೊಗ್ಗ ಲೋಕಸಭಾ ಕ್ಷೇತ್ರ: ಕಳೆದೊಂದು ದಶಕದಿಂದ ಬದಲಾಗುತ್ತಿರುವ ರಾಜಕೀಯ ಸಮೀಕರಣ

Update: 2019-04-09 18:22 GMT

ಶಿವಮೊಗ್ಗ, ಎ. 9: ಒಂದಾನೊಂದುಕಾಲದಲ್ಲಿ ಸಮಾಜವಾದಿಗಳು ಹಾಗೂ ಹೋರಾಟಗಾರರ ನೆಲೆಬೀಡಾಗಿದ್ದ ಶಿವಮೊಗ್ಗ ಜಿಲ್ಲೆಯು, ರಾಜ್ಯ ರಾಜಕಾರಣಕ್ಕೆ ಹಲವು ಘಟಾನುಘಟಿ ರಾಜಕಾರಣಿಗಳನ್ನು ನೀಡಿದೆ. ಅತೀ ಹೆಚ್ಚು ಬಾರಿ ಸಿಎಂ ಹುದ್ದೆ ಅಲಂಕರಿಸಿದ ಕೀರ್ತಿಯೂ ಜಿಲ್ಲೆಯ ಜನಪ್ರತಿನಿಧಿಗಳದ್ದಾಗಿದೆ. ಇತ್ತೀಚಿನ ವರ್ಷಗಳಲ್ಲಿ ರಾಜಕಾರಣದ ಕಾರಣದಿಂದಲೇ, ಜಿಲ್ಲೆ ರಾಷ್ಟ್ರ-ರಾಜ್ಯದ ಗಮನ ತನ್ನತ್ತ ಸೆಳೆಯುತ್ತಿದೆ. 

ಶಿವಮೊಗ್ಗ ಲೋಕಸಭಾ ಕ್ಷೇತ್ರದ 67 ವರ್ಷಗಳ ಸುದೀರ್ಘ ಚುನಾವಣಾ ಇತಿಹಾಸ ಅವಲೋಕಿಸಿದರೆ, ಕಳೆದ 5 ದಶಕಗಳಿಗಿಂತ ಇತ್ತೀಚಿನ ಸುಮಾರು ಒಂದು ದಶಕದ ಅವಧಿಯಲ್ಲಿನ ಚುನಾವಣಾ ರಾಜಕಾರಣ ಹಲವು ಗುರುತರ ಬದಲಾವಣೆಗಳಿಗೆ ಕ್ಷೇತ್ರ ಸಾಕ್ಷಿಯಾಗಿರುವುದು ಕಂಡುಬರುತ್ತದೆ. ರಾಜಕೀಯ ಸಮೀಕರಣ, ಲೆಕ್ಕಾಚಾರಗಳು ಬದಲಾಗಿರುವುದು ಗೋಚರವಾಗುತ್ತದೆ. 

ಲೋಕಸಭಾ ಚುನಾವಣೆ ಆರಂಭದಿಂದ, ಸುಮಾರು ನಾಲ್ಕು ದಶಕಗಳ ದೀರ್ಘಾವದಿವರೆಗೆ ಪಕ್ಷ ಪ್ರತಿಷ್ಠೆಯೇ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಸಾಧಿಸಿತ್ತು. ನಂತರದ ಸುಮಾರು ಒಂದು ದಶಕಗಳ ಅವದಿಯಲ್ಲಿ ಪಕ್ಷ ಪ್ರಾಮುಖ್ಯತೆ ನಗಣ್ಯವಾಗಿ, ವ್ಯಕ್ತಿ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿತ್ತು. ಇತ್ತೀಚಿನ ಸರಿಸುಮಾರು ಒಂದು ದಶಕದ ಅವಧಿಯಲ್ಲಿ ಪಕ್ಷ ಹಾಗೂ ವ್ಯಕ್ತಿ-ಕುಟುಂಬದ ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗಿದೆ. ಕಳೆದ ಮೂರ್ನಾಲ್ಕು ಅವಧಿಯ ಲೋಕಸಭಾ ಚುನಾವಣೆಗಳನ್ನು ಸೂಕ್ಷ್ಮವಾಗಿ ಆವಲೋಕಿಸಿದರೆ, ಕ್ಷೇತ್ರದ ಬದಲಾದ ರಾಜಕೀಯ ಸಮೀಕರಣದ ಅಂಶಗಳು ಸ್ಪಷ್ಟವಾಗುತ್ತವೆ. 

ಅವಲೋಕನ: ಸ್ವಾತಂತ್ರ್ಯ ನಂತರದ 1952 ರಿಂದ ಇತ್ತೀಚಿನವರೆಗಿನ 2018 ರವರೆಗೆ ಶಿವಮೊಗ್ಗ ಕ್ಷೇತ್ರಕ್ಕೆ ಒಟ್ಟಾರೆ 18 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ಇದರಲ್ಲಿ 16 ಸಾರ್ವತ್ರಿಕ ಹಾಗೂ 2 ಉಪ ಚುನಾವಣೆಗಳಾಗಿವೆ. 1952 ರಿಂದ 1991 ರವರೆಗೂ ನಡೆದ 10 ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ 9 ಬಾರಿ ಜಯಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಪ್ರಾಬಲ್ಯಕ್ಕೆ ಸಾಕ್ಷಿಯಾಗಿತ್ತು. ಆ ಪಕ್ಷದಿಂದ ಯಾರೇ ಕಣಕ್ಕಿಳಿದರೂ ಜಯ ನಿಶ್ಚಿತವೆಂಬ ವಾತಾವರಣ ಕ್ಷೇತ್ರದಲ್ಲಿತ್ತು. 

ಕಾಂಗ್ರೆಸ್ ಹೊರತುಪಡಿಸಿದರೆ ಅತೀ ಹೆಚ್ಚು ಬಾರಿ ಕ್ಷೇತ್ರದಲ್ಲಿ ಜಯ ಸಾಧಿಸಿದ ಮತ್ತೊಂದು ಪಕ್ಷ ಬಿಜೆಪಿಯಾಗಿದೆ. ಆ ಪಕ್ಷ 5 ಬಾರಿ ಜಯಿಸಿದೆ. ಕಳೆದೊಂದು ದಶಕದಿಂದಿಚೇಗೆ ಆ ಪಕ್ಷ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿಕೊಂಡು ಬರುತ್ತಿದೆ. ಉಳಿದಂತೆ ಜನತಾ ಪಕ್ಷ, ಕೆಸಿಪಿ 1 ಹಾಗೂ ಸಮಾಜವಾದಿ ಪಕ್ಷ (ಎಸ್.ಪಿ.) ತಲಾ ಒಂದೊಂದು ಬಾರಿ ಜಯ ಸಾಧಿಸಿದೆ. 

ಕ್ಷೇತ್ರಕ್ಕೆ 1952 ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಿ.ಒಡೆಯರ್ ಗೆಲುವು ಸಾಧಿಸಿದ್ದರು. 1957 ರಲ್ಲಿಯೂ ಅವರೇ ಪುನಾರಾಯ್ಕೆಯಾಗಿದ್ದರು. 1962 ರಲ್ಲಿ ಕಾಂಗ್ರೆಸ್‍ನ ಎಸ್.ವಿ.ಕೃಷ್ಣಮೂರ್ತಿ ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದರು. 1967 ರ ಚುನಾವಣೆಯಲ್ಲಿ ಜೆ.ಹೆಚ್.ಪಟೇಲರು ಎಸ್‍ಎಸ್‍ಪಿ ಪಕ್ಷದಿಂದ ಕಣಕ್ಕಿಳಿದು, ಕಾಂಗ್ರೆಸ್ ಮಣಿಸಿ ಸಂಸತ್ ಪ್ರವೇಶಿಸಿದ್ದರು. 

ತದನಂತರ 1971 ರಿಂದ 1991 ರವರೆಗೆ ನಡೆದ ಆರು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಆಯ್ಕೆಯಾಗಿದ್ದರು. ವಿವಿಧ ಹಂತಗಳಲ್ಲಿ ಟಿ.ವಿ.ಚಂದ್ರಶೇಖರಪ್ಪರವರು ಮೂರು ಬಾರಿ, ಎ.ಆರ್.ಬದರಿನಾರಾಯಣ, ಎಸ್.ಟಿ.ಖಾದ್ರಿ ಹಾಗೂ ಕೆ.ಜಿ.ಶಿವಪ್ಪರವರು ತಲಾ ಒಂದು ಬಾರಿ ಆಯ್ಕೆಯಾಗಿದ್ದರು. 

1996 ರಲ್ಲಿ ಎಸ್.ಬಂಗಾರಪ್ಪರವರು ಕೆಸಿಪಿ ಪಕ್ಷದಿಂದ ಲೋಕಸಭಾ ಅಖಾಡಕ್ಕಿಳಿದು ಜಯ ಸಾಧಿಸಿದ್ದರು. 1998 ರಲ್ಲಿ ಬಿಜೆಪಿಯಿಂದ ಆಯನೂರು ಮಂಜುನಾಥ್, 1999 ರಲ್ಲಿ ಕಾಂಗ್ರೆಸ್‍ನಿಂದ ಎಸ್.ಬಂಗಾರಪ್ಪ, 2004 ರಲ್ಲಿ ಬಿಜೆಪಿಯಿಂದ ಹಾಗೂ 2005 ರಲ್ಲಿ ಸಮಾಜವಾದಿ ಪಕ್ಷದಿಂದ ಎಸ್.ಬಂಗಾರಪ್ಪ ಕಣಕ್ಕಿಳಿದು ಆಯ್ಕೆಯಾಗಿದ್ದರು. ನಾಲ್ಕು ಬಾರಿ ಅವರು ಬೇರೆ ಬೇರೆ ಪಕ್ಷಗಳಿಂದ ಕಣಕ್ಕಿಳಿದು ಜಯ ಸಾಧಿಸಿದ್ದರು. 

2009 ರಲ್ಲಿ ಬಿಜೆಪಿಯಿಂದ ಬಿ.ವೈ.ರಾಘವೇಂದ್ರ ಸ್ಪರ್ಧಿಸಿ ಆಯ್ಕೆಯಾಗಿದ್ದರು. 2014 ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಬಿ.ಎಸ್.ಯಡಿಯೂರಪ್ಪ ಜಯ ಸಾಧಿಸಿದ್ದರು. 2018 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಆಯ್ಕೆಯಾಗಿದ್ದರು. ಇದೀಗ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರ ಯಾವ ಪಕ್ಷದ ಪಾಲಾಗಲಿದೆ ಎಂಬುವುದು ಕಾದು ನೋಡಬೇಕಾಗಿದೆ. 

ಬಂಗಾರಪ್ಪ-ಯಡಿಯೂರಪ್ಪ ರಾಜೀನಾಮೆಯಿಂದ ನಡೆದ ಉಪ ಚುನಾವಣೆಗಳು!
ಶಿವಮೊಗ್ಗ ಲೋಕಸಭಾ ಕ್ಷೇತ್ರವು ಎರಡು ಉಪ ಚುನಾವಣೆಗಳಿಗೆ ಸಾಕ್ಷಿಯಾಗಿದೆ. ಇದಕ್ಕೆ ಕಾರಣಕರ್ತರಾದವರು ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ ಎಂಬುವುದು ಮತ್ತೊಂದು ವಿಶೇಷವಾಗಿದೆ. 2004 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಸ್.ಬಂಗಾರಪ್ಪ ಆಯ್ಕೆಯಾಗಿದ್ದರು. ಆದರೆ ಆ ಪಕ್ಷದಿಂದ ಹೊರಬಂದಿದ್ದ ಅವರು, ಆಯ್ಕೆಯಾಗಿದ್ದ 6 ತಿಂಗಳಲ್ಲಿ ಸಂಸತ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಇದರಿಂದ 2005 ರಲ್ಲಿ ಉಪ ಚುನಾವಣೆ ನಿಗದಿಯಾಗಿತ್ತು. ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದು ಎಸ್.ಬಂಗಾರಪ್ಪ ಮತ್ತೆ ಆಯ್ಕೆಯಾಗಿದ್ದರು. 

2014 ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಬಿ.ಎಸ್.ಯಡಿಯೂರಪ್ಪರವರು, ಭಾರೀ ಮತಗಳ ಅಂತರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 2018 ರ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಶಿಕಾರಿಪುರ ಅಸೆಂಬ್ಲಿಯಿಂದ ಕಣಕ್ಕಿಳಿದು ಆಯ್ಕೆಯಾಗಿದ್ದರು. ಈ ಕಾರಣದಿಂದ ಅವರು ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. 2018 ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಉಪ ಚುನಾವಣೆ ನಿಗದಿಯಾಗಿತ್ತು. ಬಿಜೆಪಿಯಿಂದ ಕಣಕ್ಕಿಳಿದ ಬಿ.ವೈ.ರಾಘವೇಂದ್ರ ಆಯ್ಕೆಯಾಗಿದ್ದರು. 

67 ವರ್ಷಗಳಲ್ಲಿ 18 ಚುನಾವಣೆಗಳು 
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ವಾತಂತ್ರ್ಯನಂತರ ಇಲ್ಲಿಯವರೆಗೂ (1952 ರಿಂದ 2018) ಒಟ್ಟಾರೆ 18 ಲೋಕಸಭೆ ಚುನಾವಣೆಗಳು ನಡೆದಿವೆ. ಇದರಲ್ಲಿ 16 ಸಾರ್ವತ್ರಿ ಹಾಗೂ 2 ಉಪ ಚುನಾವಣೆಗಳಾಗಿವೆ. ಇದರಲ್ಲಿ ಕಾಂಗ್ರೆಸ್ ಪಕ್ಷ 10 ಬಾರಿ, ಬಿಜೆಪಿ 5, ಜನತಾ ಪಕ್ಷ, ಕರ್ನಾಟಕ ಕಾಂಗ್ರೆಸ್ ಪಕ್ಷ, ಎಸ್.ಪಿ. ಪಕ್ಷವು ತಲಾ ಒಂದೊಂದು ಬಾರಿ ಜಯ ಸಾಧಿಸಿದೆ. 
 
ವರ್ಷ -ಗೆದ್ದವರು- ಪಕ್ಷ 

1952  ಕೆ.ಜಿ.ಒಡೆಯರ್ - ಕಾಂಗ್ರೆಸ್
1957  ಕೆ.ಜಿ.ಒಡೆಯರ್ - ಕಾಂಗ್ರೆಸ್
1962  ಎಸ್.ವಿ.ಕೃಷ್ಣಮೂರ್ತಿ - ಕಾಂಗ್ರೆಸ್
1967  ಜೆ.ಹೆಚ್.ಪಟೇಲ್ - ಎಸ್.ಎಸ್.ಪಿ.
1971  ಟಿ.ವಿ.ಚಂದ್ರಶೇಖರಪ್ಪ - ಕಾಂಗ್ರೆಸ್
1977  ಎ.ಆರ್.ಬದರಿನಾರಾಯಣ - ಕಾಂಗ್ರೆಸ್
1980  ಎಸ್.ಟಿ.ಖಾದ್ರಿ - ಕಾಂಗ್ರೆಸ್
1984  ಟಿ.ವಿ.ಚಂದ್ರಶೇಖರಪ್ಪ - ಕಾಂಗ್ರೆಸ್
1989  ಟಿ.ವಿ.ಚಂದ್ರಶೇಖರಪ್ಪ - ಕಾಂಗ್ರೆಸ್
1991  ಕೆ.ಜಿ.ಶಿವಪ್ಪ - ಕಾಂಗ್ರೆಸ್
1996  ಎಸ್.ಬಂಗಾರಪ್ಪ - ಕೆ.ಸಿ.ಪಿ.
1998  ಆಯನೂರು ಮಂಜುನಾಥ್ - ಬಿಜೆಪಿ
1999  ಎಸ್. ಬಂಗಾರಪ್ಪ -  ಕಾಂಗ್ರೆಸ್
2004  ಎಸ್. ಬಂಗಾರಪ್ಪ -  ಬಿಜೆಪಿ
2005  ಎಸ್.ಬಂಗಾರಪ್ಪ - ಎಸ್.ಪಿ. 
2009  ಬಿ.ವೈ.ರಾಘವೇಂದ್ರ - ಬಿಜೆಪಿ
2014  ಬಿ.ಎಸ್.ಯಡಿಯೂರಪ್ಪ - ಬಿಜೆಪಿ
2018  ಬಿ.ವೈ.ರಾಘವೇಂದ್ರ - ಬಿಜೆಪಿ 

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News