ಪ್ರಣಾಳಿಕೆಗಳು: ‘‘ದೇಶಕ್ಕೆ ಒಳ್ಳೆಯದು; ಜನರಿಗೆ ಕಷ್ಟ!’’

Update: 2019-04-12 18:31 GMT

ಅಂಬೇಡ್ಕರ್ ಅವರು ನಮ್ಮ ದೇಶದ ಬಹುಸಂಖ್ಯಾತ ಅಭಿಮತವು ಒಂದು ಕೋಮು ಆಧಾರಿತ ಬಹುಮತವೇ ವಿನಃ (ಕಮ್ಯೂನಲ್ ಮೆಜಾರಿಟಿ) ಒಂದು ಪ್ರಜ್ಞಾವಂತ ರಾಜಕೀಯ ಬಹುಮತ (ಪೊಲಿಟಿಕಲ್ ಮೆಜಾರಿಟಿ)ವಾಗಿರುವುದಿಲ್ಲ ಎಂದು ಬಹುಹಿಂದೆಯೇ ಸ್ಪಷ್ಟ ಮುಂಗಾಣ್ಕೆಯನ್ನು ನೀಡಿದ್ದರು. ಹೀಗಾಗಿಯೇ ಜನರನ್ನು ಪ್ರಜ್ಞಾವಂತರನ್ನಾಗಿಸಿ ಅವರ ಪ್ರಜ್ಞಾಪೂರ್ಣ ಬೆಂಬಲವನ್ನು ಗಳಿಸಿಕೊಳ್ಳಬೇಕೆಂಬ ದರ್ದೇ ಇಂದು ಯಾವ ರಾಜಕೀಯ ಪಕ್ಷಗಳಿಗೂ ಇಲ್ಲ. ಪ್ರಜೆಗಳ ಬಗ್ಗೆ ಇರುವ ಈ ಧಾರ್ಷ್ಟ ಮತ್ತು ನಿರ್ಲಕ್ಷ್ಯಗಳು ಚುನಾವಣಾ ಪ್ರಕ್ರಿಯೆಯಲ್ಲಿ ಅವರು ಪ್ರಣಾಳಿಕೆಗಳ ಬಗ್ಗೆ ಕೊಡುವ ಒತ್ತಿನಲ್ಲೂ ವ್ಯಕ್ತವಾಗುತ್ತಿದೆ.


ಈ ದೇಶದ ಚುನಾವಣೆಗಳು ಈ ದೇಶದ ಪ್ರಜಾತಂತ್ರದ ಉಳಿವಿಗೆ ಎಷ್ಟು ಅಸಂಗವಾಗುತ್ತಿವೆಯೋ ಅಷ್ಟೇ ಮಟ್ಟಿಗೆ ಚುನಾವಣಾ ಪ್ರಕ್ರಿಯೆಗಳಿಗೆ ಪ್ರಣಾಳಿಕೆಗಳೂ ಅಸಂಗತವಾಗುತ್ತಿವೆ. ಒಂದು ಪ್ರಜಾತಂತ್ರದಲ್ಲಿ ಅದರಲ್ಲೂ ಸಂಸದೀಯ ಪ್ರಜಾತಂತ್ರದಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ದೇಶದ ಸಮಸ್ಯೆಗಳನ್ನು ರಾಜಕೀಯ ಪಕ್ಷಗಳು ಅರ್ಥಮಾಡಿಕೊಳ್ಳುವ ರೀತಿಯನ್ನು ಮತ್ತು ಅದಕ್ಕೆ ಒದಗಿಸುವ ಪರಿಹಾರದ ನೀಲನಕ್ಷೆಯನ್ನು ವಿವರಿಸುವ ಮಹತ್ವದ ಘೋಷಣಾ ಪತ್ರವಾಗಬೇಕಿತ್ತು. ಆದ್ದರಿಂದಲೇ ಪ್ರಜಾತಾಂತ್ರಿಕ ಪ್ರಕ್ರಿಯೆಗಳ ಬಗ್ಗೆ ಗಂಭೀರವಾಗಿರುವ ಒಂದು ರಾಜಕೀಯ ಪಕ್ಷಕ್ಕೆ ತನ್ನ ಪ್ರಣಾಳಿಕೆಯನ್ನು ಜನರ ಮುಂದಿಡಲು ಚುನಾವಣೆಗಳು ಘೋಷಣೆಯಾಗುವ ತನಕ ಕಾಯುವ ಅಗತ್ಯವೂ ಏನಿಲ್ಲ. ಆದರೆ ಹಲವು ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷಗಳು ಸ್ಥಾಪನೆಯಾಗುವಾಗ ರೂಪಿಸಿಕೊಂಡ ತಮ್ಮ ಪಕ್ಷದ ಸಂವಿಧಾನ ಮತ್ತು ಉದ್ದೇಶಗಳೇ ತಮ್ಮ ಪ್ರಣಾಳಿಕೆಯೆಂದು ಭಾವಿಸುತ್ತವೆ.

ಇನ್ನು ಬಿಜೆಪಿಯಂಥ ಪಕ್ಷಗಳು ಆರೆಸ್ಸೆಸ್‌ನ ಹಿಂದೂರಾಷ್ಟ್ರದ ನಿರ್ಮಾಣದ ತಮ್ಮ ಹಿಡನ್ ಅಜೆಂಡಾವನ್ನೇ ತಮ್ಮ ಅನುದಿನದ ರಾಜಕೀಯ ಕಾರ್ಯಾಚರಣೆಯ ಪ್ರೇರಣೆಯನ್ನಾಗಿ ಮಾಡಿಕೊಂಡಿರುವುದರಿಂದ ‘‘ತಮ್ಮ ಕಾರ್ಯಚಟುವಟಿಕೆಗಳೇ ತಮ್ಮ ಪ್ರಣಾಳಿಕೆ’’ ಎಂದು ಹೇಳುತ್ತವೆ. ಆದರೆ ಮತ್ತೊಂದು ಕಡೆ ಎಲ್ಲಾ ರಾಜಕೀಯ ಪಕ್ಷಗಳು ಸಂಸತ್ತು ಮತ್ತು ಶಾಸನ ಸಭೆಗಳ ಚುನಾವಣೆಯನ್ನೂ ಸಹ ಉದ್ದೇಶಪೂರ್ವಕವಾಗಿ ಆಯಾ ಕ್ಷೇತ್ರಗಳ ಆಡಳಿತ, ಸೇವಾ ಸೌಲಭ್ಯಗಳ ಪ್ರಶ್ನೆಗೆ ಮಾತ್ರ ಸೀಮಿತ ಮಾಡುತ್ತವೆ ಹಾಗೂ ದೇಶದ ಶಾಸನಕರ್ತರನ್ನು ತಮ್ಮ ರಾಜಕೀಯಕ್ಕೆ ಅನುಗುಣವಾಗಿ ಆಯ್ಕೆ ಮಾಡುವ ಮೂಲಕ ಈ ದೇಶದ ಶಾಸನ ರಚನಾ ಪ್ರಕ್ರಿಯೆಯಲ್ಲಿ ಪರೋಕ್ಷ ಪ್ರಾತಿನಿಧ್ಯದ ಮೂಲಕ ಭಾಗವಹಿಸುವ ಅವಕಾಶಗಳನ್ನೂ ‘ಪ್ರಜೆ’ಗಳಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ.

ಹೀಗೆ ಭಾರತದ ‘ಪ್ರಜಾಸತ್ತೆ’ಯಲ್ಲಿ ‘ಪ್ರಜೆ’ಗಳು ನಿಧಾನವಾಗಿ ಮಾಯವಾಗುತ್ತಿರುವ ಈ ಹೊತ್ತಿನಲ್ಲಿ ಜನರ ಅಭಿಮತವನ್ನು ಬಲವಂತವಾಗಿ ಅಥವಾ ‘ಸ್ವಪ್ರೇರಿತ’ವಾಗಿ ಧರ್ಮ, ಜಾತಿ ಹಾಗೂ ‘ದೇಶಪ್ರೇಮ’ಗಳ ಉನ್ಮಾದವನ್ನು ಬಡಿದೆಬ್ಬಿಸಿ ತಮಗೆ ಬೇಕಾದಂತೆ ತಿರುಚಬಲ್ಲ ಕಲೆಗಳೇ ಪ್ರಜಾತಾಂತ್ರಿಕ ಪ್ರಕ್ರಿಯೆಗಳಾಗಿ ಚಲಾವಣೆಯಾಗುತ್ತಿವೆ. ಇದು ನಮ್ಮ ಪ್ರಜಾತಂತ್ರ ಜಾತಿ, ಧರ್ಮ ಇನ್ನಿತ್ಯಾದಿ ಪಕ್ಷಪಾತಗಳನ್ನು ದಾಟಿದ ನಾಗರಿಕ ಗಣರಾಜ್ಯವಾಗುವ ದಿಕ್ಕಿನೆಡೆಗೆ ನಡೆಯುತ್ತಲೇ ಇಲ್ಲವೆಂಬುದಕ್ಕೆ ಮತ್ತೊಂದು ಪುರಾವೆಯನ್ನು ಒದಗಿಸುತ್ತದೆ. ಅದಕ್ಕೇ ಅಂಬೇಡ್ಕರ್ ಅವರು ನಮ್ಮ ದೇಶದ ಬಹುಸಂಖ್ಯಾತ ಅಭಿಮತವು ಒಂದು ಕೋಮು ಆಧಾರಿತ ಬಹುಮತವೇ ವಿನಃ (ಕಮ್ಯೂನಲ್ ಮೆಜಾರಿಟಿ) ಒಂದು ಪ್ರಜ್ಞಾವಂತ ರಾಜಕೀಯ ಬಹುಮತ (ಪೊಲಿಟಿಕಲ್ ಮೆಜಾರಿಟಿ)ವಾಗಿರುವುದಿಲ್ಲ ಎಂದು ಬಹುಹಿಂದೆಯೇ ಸ್ಪಷ್ಟ ಮುಂಗಾಣ್ಕೆಯನ್ನು ನೀಡಿದ್ದರು. ಹೀಗಾಗಿಯೇ ಜನರನ್ನು ಪ್ರಜ್ಞಾವಂತರನ್ನಾಗಿಸಿ ಅವರ ಪ್ರಜ್ಞಾಪೂರ್ಣ ಬೆಂಬಲವನ್ನು ಗಳಿಸಿಕೊಳ್ಳಬೇಕೆಂಬ ದರ್ದೇ ಇಂದು ಯಾವ ರಾಜಕೀಯ ಪಕ್ಷಗಳಿಗೂ ಇಲ್ಲ.

ಪ್ರಜೆಗಳ ಬಗ್ಗೆ ಇರುವ ಈ ಧಾರ್ಷ್ಟ ಮತ್ತು ನಿರ್ಲಕ್ಷ್ಯಗಳು ಚುನಾವಣಾ ಪ್ರಕ್ರಿಯೆಯಲ್ಲಿ ಅವರು ಪ್ರಣಾಳಿಕೆಗಳ ಬಗ್ಗೆ ಕೊಡುವ ಒತ್ತಿನಲ್ಲೂ ವ್ಯಕ್ತವಾಗುತ್ತಿದೆ. ಬಿಜೆಪಿಯು 2014ರ ಚುನಾವಣೆಯಲ್ಲಿ ತನ್ನ ಪ್ರಣಾಳಿಕೆಯನ್ನು ಹೊರ ತಂದದ್ದು ಮೊದಲ ಹಂತದ ಮತದಾನ ನಡೆಯುವ ದಿನ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಅದಕ್ಕೆ ಕೇವಲ ಕೆಲವು ದಿನಗಳ ಮೊದಲು! ಇದನ್ನು ಅತ್ಯಂತ ತಡವಾಗಿ ಗಮನಕ್ಕೆ ತೆಗೆದುಕೊಂಡ ಭಾರತದ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಮೊದಲ ಹಂತದ ಮತದಾನಕ್ಕೆ ಕನಿಷ್ಠ 72 ಗಂಟೆಗಳಷ್ಟು ಮುಂಚೆಯೇ ಬಿಡುಗಡೆ ಮಾಡಬೇಕೆಂದು ತಾಕೀತು ಮಾಡಿತು. ಆದ್ದರಿಂದಲೇ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮೊದಲ ಹಂತದ ಮತದಾನಕ್ಕೆ ವಾರದ ಮೊದಲು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರೆ ಬಿಜೆಪಿ ಮಾತ್ರ ಕೊನೆಯ ಗಳಿಗೆ ತನಕ ಕಾದಿದ್ದು ಮೊದಲ ಹಂತದ ಮತದಾನಕ್ಕೆ ಕೇವಲ 72 ಗಂಟೆ ಮೊದಲು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಜೆಡಿಎಸ್ ಪಕ್ಷವು ವಿಧಾನ ಸಭಾ ಚುನಾವಣೆಗಿಂತ ಭಿನ್ನವಾದ ಮತ್ತೊಂದು ಪ್ರಣಾಳಿಕೆಯ ಅಗತ್ಯವೇ ಇಲ್ಲ ಎಂದು ಘೋಷಿಸಿದ್ದರೆ ಬಿಎಸ್ಪಿ ಪಕ್ಷವಂತೂ ಯಾವತ್ತಿಗೂ ಚುನಾವಣಾ ಪ್ರಣಾಳಿಕೆಯಲ್ಲಿ ವಿಶ್ವಾಸವನ್ನಿರಿಸಿದ್ದೇ ಇಲ್ಲ. ಹಾಗಿದ್ದಲ್ಲಿ ಇಷ್ಟೊಂದು ಅವಿಶ್ವಾಸ ಮತ್ತು ಅರೆವಿಶ್ವಾಸಗಳಿಂದ ರಾಜಕೀಯ ಪಕ್ಷಗಳು ಬಿಡುಗಡೆ ಮಾಡಿರುವ ತಮ್ಮ ಪ್ರಣಾಳಿಕೆಗಳಲ್ಲಿ ಈ ಪಕ್ಷಗಳು ದೇಶಕ್ಕೆ ಮತ್ತು ಜನರಿಗೆ ಯಾವ ಯಾವ ರಾಜಕೀಯ ಪರಿಹಾರ ಮಾರ್ಗಗಳನ್ನು ಒದಗಿಸಿವೆ?

ಈ ಬಾರಿಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ಏನಿಲ್ಲವೆಂದರೂ ಉದ್ದೇಶಗಳ ದೃಷ್ಟಿಯಿಂದ ಮೆಚ್ಚಿಕೊಳ್ಳುವಂತಿದೆಯೆಂದೂ ಕಾಂಗ್ರೆಸ್‌ನ ಕಟು ವಿಮರ್ಶಕರು ಅಭಿಪ್ರಾಯ ಪಡುತ್ತಿದ್ದಾರೆ. ತಾವು ಸ್ವತಂತ್ರವಾಗಿ ಹೇಗಿದ್ದರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲವೆಂಬ ‘ಆತ್ಮ ವಿಶ್ವಾಸ’ವೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅದು ಪ್ರಸ್ತಾಪಿಸಿರುವ ಹಲವಾರು ‘ಕ್ರಾಂತಿಕಾರಕ’ ಧೋರಣೆಗಳ ಹಿಂದಿನ ಪ್ರೇರಣೆಯಿರಬೇಕು! ಏಕೆಂದರೆ ಕಾಂಗ್ರೆಸ್ ಪಕ್ಷವು ಮರಳಿ ಅಧಿಕಾರವನ್ನು ಪಡೆದ ರಾಜಸ್ಥಾನ, ಛತ್ತೀಸ್‌ಗಡ ಮತ್ತು ಮಧ್ಯಪ್ರದೇಶಗಳ ಕಾಂಗ್ರೆಸ್ ಸರಕಾರಗಳ ಆಡಳಿತದಲ್ಲಿ ಅಥವಾ ಅವುಗಳ ಜಾಡಿನಲ್ಲಿ ಕಾಂಗ್ರೆಸ್‌ನ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ವ್ಯಕ್ತವಾಗಿರುವ ಯಾವುದೇ ಕ್ರಾಂತಿಕಾರಕ ಧೋರಣೆಯೂ ಕಾಣಿಸುತ್ತಿಲ್ಲ. ಯಾವ ಮರುಚಿಂತನೆಯೂ ವ್ಯಕ್ತವಾಗುತ್ತಿಲ್ಲ. ಬದಲಿಗೆ ಅಲ್ಲಿನ ಕಾಂಗ್ರೆಸ್ ಸರಕಾರಗಳು ಹಲವಾರು ವಿಷಯಗಳಲ್ಲಿ ಈ ಹಿಂದಿನ ಬಿಜೆಪಿ ಸರಕಾರಗಳು ಅಲ್ಲಿ ಜಾರಿಗೆ ತಂದ ಹಿಂದುತ್ವವಾದಿ ಮತ್ತು ಕಾರ್ಪೊರೇಟ್‌ಪರ ಹಾಗೂ ಜನವಿರೋಧಿ ಕೇಸರಿ ಯೋಜನೆಗಳಿಗೆ ಸ್ವಲ್ಪಹಸಿರು ಮತ್ತು ಬಿಳಿ ಬಣ್ಣದ ಲೇಪನ ಮಾಡಿ ಮುಂದುವರಿಸುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ಜನರ ಬಿಕ್ಕಟ್ಟನ್ನು ತೀವ್ರಗೊಳಿಸಿದ ಮಾರುಕಟ್ಟೆ ಆರ್ಥಿಕತೆಯನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್ ಸರಕಾರ.

ಕಾರಣ ಸ್ವರೂಪಿಯಾಗಿರುವ ಕಾರ್ಪೊರೇಟ್‌ ಪರ ಆರ್ಥಿಕ ನೀತಿಯನ್ನು ಮೂಲಭೂತವಾಗಿ ಬದಲು ಮಾಡಬೇಕಾದ ಅಗತ್ಯ ಮತ್ತು ಉದ್ದೇಶಗಳ ಲವಲೇಶವೂ ಇಲ್ಲದ ಅದರ ಪ್ರಣಾಳಿಕೆಯಲ್ಲಿ ಕಾರ್ಪೊರೇಟ್ ಆರ್ಥಿಕತೆಯ ಪರಿಣಾಮಗಳಾಗಿರುವ ಕೃಷಿ ಬಿಕ್ಕಟ್ಟು, ನಿರುದ್ಯೋಗ, ದಾರುಣ ಬಡತನಗಳಿಗೆ ಮುಲಾಮು ಹಚ್ಚುವಂಥ ಯೋಜನೆಗಳು ಮಾತ್ರ ಇವೆ. ಹೀಗಾಗಿ ಅದು ಹೆಚ್ಚೆಂದರೆ ಜನರನ್ನು ನುಂಗುತ್ತಿರುವ ನಾಗರದ ಬಾಲದ ಜೊತೆಯ ತನ್ನ ದ್ವೇಷವನ್ನು ವ್ಯಕ್ತಪಡಿಸುತ್ತಿದೆ. ಆದರೆ ಅದರ ಹೆಡೆಯ ಜೊತೆಗಿರುವ ತನ್ನ ಸ್ನೇಹವನ್ನು ನಿಲ್ಲಿಸುವ ಯಾವ ಸೂಚನೆಯನ್ನೂ ಕಾಂಗ್ರೆಸ್ ಪ್ರಣಾಳಿಕೆ ನೀಡುವುದಿಲ್ಲ. ಬಿಜೆಪಿಯ ವಿರುದ್ಧದ ನಮ್ಮ ಸಕಾರಣ ಮತ್ತು ಆದ್ಯತೆಯ ಪ್ರತಿರೋಧಗಳು ಈ ವಾಸ್ತವಕ್ಕೆ ನಮ್ಮನ್ನು ಕುರುಡಾಗಿಸಬಾರದು. ಭಾರತವೆಂಬ ಪರಿಕಲ್ಪನೆಯನ್ನೇ ನಾಶ ಮಾಡಹೊರಟಿರುವ ಆರೆಸ್ಸೆಸ್-ಬಿಜೆಪಿಯ ಮುಂದೆ ಕಾಂಗ್ರೆಸ್ ಪ್ರಥಮ ಶತ್ರು ಖಂಡಿತ ಅಲ್ಲ. ಆದರೆ ಹಿಂದುತ್ವವಾದಿ ಫ್ಯಾಶಿಸ್ಟ್ ಶಕ್ತಿಗಳ ದಾಳಿಗಳಿಂದ ಭಾರತವನ್ನು ಒಂದು ಸಮಾಜವಾದಿ-ಜಾತ್ಯತೀತ-ಗಣರಾಜ್ಯವನ್ನಾಗಿ ಉಳಿಸಿಕೊಳ್ಳಬೇಕಾದ ಹೋರಾಟದಲ್ಲಿ ಕಾಂಗ್ರೆಸ್ ಮಿತ್ರನೂ ಆಗಲಾರದು ಎಂಬುದಕ್ಕೆ ಎಂಬುದಕ್ಕೆ ಸಾಕಷ್ಟು ಹಳೆಯ ಮತ್ತು ಹೊಸ ಪುರಾವೆಗಳಿವೆ.

ಅದೇನೇ ಇರಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶತ್ರುವಿನ ಚಹರೆಗಳನ್ನಾದರೂ ಒಂದಷ್ಟುಮಟ್ಟಿಗೆ ಗುರುತಿಸಲಾಗಿದೆ. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಶತ್ರುವನ್ನೇ ಮಿತ್ರನೆಂದೂ, ಸರ್ವನಾಶವನ್ನೇ ವಿಮೋಚನೆಯ ದಾರಿಯೆಂದೂ, ಸಂಕಷ್ಟವನ್ನು ಸಂಕಲ್ಪವೆಂದೂ ಬಣ್ಣಿಸಲಾಗಿದೆ. 2017ರಲ್ಲಿ ಬಿಜೆಪಿ ಸರಕಾರವು ಜಿಎಸ್‌ಟಿಯನ್ನು ಜಾರಿಗೆ ತಂದಾಗ ಕನ್ನಡದ ಪ್ರಮುಖ ದಿನಪತ್ರಿಕೆಯೊಂದು ‘‘ದೇಶಕ್ಕೆ ಒಳ್ಳೆಯದು-ಜನರಿಗೆ ಕಷ್ಟ’’ ಎಂಬ ತಲೆಬರಹದ ಹಾಸ್ಯಾಸ್ಪದ ಆದರೆ ಅಷ್ಟೇ ವಿಷಾದಕರ ಸಂಪಾದಕೀಯದ ಮೂಲಕ ಜಿಎಸ್‌ಟಿಯನ್ನು ಸಮರ್ಥಿಸಿಕೊಂಡಿತ್ತು. ಬಿಜೆಪಿಯ ಪ್ರಣಾಳಿಕೆಯೂ ಸಾರಾಂಶದಲ್ಲಿ ಅದನ್ನೇ ಹೇಳುತ್ತದೆ. ಜನರಿಗೆ ಕಷ್ಟವಾಗುವಂಥದ್ದು ದೇಶಕ್ಕೆ ಹೇಗೆ ಒಳ್ಳೆಯದಾಗುತ್ತದೆ? ಹಾಗಿದ್ದಲ್ಲಿ ಆ ದೇಶ ಅಂದರೆ ಏನು? ದೇಶದ ಹಿತ ಎಂದರೆ ಏನು? ಅಂಬಾನಿ-ಅದಾನಿಗಳ ಹಿತವೇ ದೇಶದ ಹಿತವೇ?

ಬಿಜೆಪಿ ದೇಶದ ಮುಂದಿಟ್ಟಿರುವ ಪ್ರಣಾಳಿಕೆ ಹೀಗೆ ದೇಶ ಮತ್ತು ಜನರ ನಡುವೆ ಒಡಕನ್ನು ಉಂಟು ಮಾಡುವ ಕುತಂತ್ರ ರಾಜಕಾರಣದ ಮುಂದುವರಿಕೆ ಯಾಗಿದೆ. ಜನರು ತಮಗೆ ಕಷ್ಟವಾಗುತ್ತಿದ್ದರೂ ದೇಶಕ್ಕೆ ಒಳ್ಳೆಯದಾಗುತ್ತಿದೆ ಎಂದು ಭಾವಿಸುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಕ್ಕೆ ನೋಟು ನಿಷೇಧದ ನಂತರವೂ ಬಿಜೆಪಿ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿತು. 2004ರ ಚುನಾವಣೆಯಲ್ಲಿ ಜನರು ಕಷ್ಟದಲ್ಲಿದ್ದರೂ ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಭ್ರಮೆ ಬಿತ್ತಲು ಬಿಜೆಪಿ ಪ್ರಯತ್ನಿಸಿ ವಿಫಲವಾಗಿತ್ತು. ಅದರಿಂದ ಪಾಠ ಕಲಿತ ಬಿಜೆಪಿ ಈಗ ‘‘ಜನರಿಗೆ ಕಷ್ಟವಾಗುತ್ತಿದ್ದರೂ ದೇಶಕ್ಕೆ ಒಳ್ಳೆಯದು’’ ಎಂದು ಹೇಳುತ್ತಿದೆ. ಹೀಗಾಗಿ ಈಗ ಜನರು ತಮಗೆ ಕಷ್ಟವಾಗುತ್ತಿದೆ ಎಂದು ಹೇಳುವುದನ್ನೂ ದೇಶದ್ರೋಹವನ್ನಾಗಿಸುತ್ತಿದೆ!

ತಮ್ಮ ಪಕ್ಷಕ್ಕೆ ‘‘ದೇಶ ಮೊದಲು, ನಂತರ ಪಕ್ಷ, ತದ ನಂತರ ವ್ಯಕ್ತಿ ಮುಖ್ಯವಾಗುತ್ತದೆ’’ ಎಂದು ಬಿಜೆಪಿ ಹೇಳುತ್ತದೆ. ಆದರೆ ಈ ಬಾರಿಯ ಬಿಜೆಪಿಯ ಪ್ರಣಾಳಿಕೆಯಲ್ಲಿ ಜನರೂ ಇಲ್ಲ, ದೇಶವೂ ಇಲ್ಲ, ಬಿಜೆಪಿ ಪಕ್ಷವೂ ಇಲ್ಲ. ಇರುವುದೆಲ್ಲಾ ಮೋದಿ ಎಂಬ ವ್ಯಕ್ತಿ ಮಾತ್ರ. 2014ರ ಪ್ರಣಾಳಿಕೆಯ ಮುಖಪುಟದಲ್ಲಿ ಮೋದಿಯ ಚಿತ್ರ ಆ ಪಕ್ಷದ ಇತರ ಹನ್ನೊಂದು ಹಿರಿಯ ನಾಯಕರ ಜೊತೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿತ್ತು. ಈ ಬಾರಿಯ ಪ್ರಣಾಳಿಕೆಯ ಮುಖಪುಟದಲ್ಲಿ ಮೋದಿಯನ್ನು ಬಿಟ್ಟರೆ ಬೇರೆ ಯಾವ ನಾಯಕರ ಚಿತ್ರವೂ ಇಲ್ಲ. ಅಷ್ಟೇ ಅಲ್ಲ, ಇಡೀ ಪ್ರಣಾಳಿಕೆಯಲ್ಲಿ ಬಿಜೆಪಿಯ ಹೆಸರು 22 ಬಾರಿ ಪುನರಾವರ್ತನೆಯಾಗಿದ್ದರೆ ಮೋದಿಯ ಹೆಸರು 32 ಬಾರಿ ಕಾಣಿಸಿಕೊಳ್ಳುತ್ತದೆ! ಇನ್ನು ಸಾಮಾಜಿಕ ನ್ಯಾಯ ಪ್ರಸ್ತಾಪವಾಗುವುದು ಒಂದೇ ಬಾರಿ. ಅದೂ ಮೇಲ್ಜಾತಿಗಳಿಗೆ ಶೇ.10 ಮೀಸಲಾತಿಯ ಜೊತೆಗೆ!

2014ರ ಚುನಾವಣೆಯಲ್ಲಿ ಬಿಜೆಪಿಯು ಪ್ರಧಾನವಾಗಿ ಕಾಂಗ್ರೆಸ್ ಆಳ್ವಿಕೆಯಿಂದ ದೇಶವು ಎದುರಿಸಬೇಕಾಗಿ ಬಂದ ಭ್ರಷ್ಟಾಚಾರ, ನಿರುದ್ಯೋಗ ಹಾಗೂ ದೇಶದ ಅಭಿವೃದ್ಧಿಯ ಹಿನ್ನೆಡೆಗಳನ್ನು ಪ್ರಸ್ತಾಪ ಮಾಡಿತ್ತು. ಆದರೆ ಕಳೆದ ಐದು ವರ್ಷಗಳ ಮೋದಿ ಆಳ್ವಿಕೆಯಲ್ಲಿ ನಿರುದ್ಯೋಗ, ಕೃಷಿ ಬಿಕ್ಕಟ್ಟು ಮತ್ತು ಒಟ್ಟಾರೆಯಾಗಿ ದೇಶದ ಬಡಜನರ ಬದುಕಿನ ದಾರುಣತೆಗಳು ಹಿಂದೆಂದಿಗಿಂತ ಹೆಚ್ಚಾಗಿವೆ. ಮತ್ತು ಕಳೆದ ಐದು ವರ್ಷಗಳಲ್ಲಿ ಒಂದು ನಯಾಪೈಸೆಯಷ್ಟು ಕಪ್ಪುಹಣವನ್ನೂ ಮೋದಿ ಸರಕಾರ ವಾಪಸ್ ತಂದಿಲ್ಲ. ಬದಲಿಗೆ ನೀರವ್, ಲಲಿತ್ ಮೋದಿ, ಚೋಕ್ಸಿ ಮತ್ತು ಮಲ್ಯರಂಥ ದೇಶದ ಬೊಕ್ಕಸವನ್ನು ಲೂಟಿ ಮಾಡಿದ ದರೋಡೆಕೋರರು ದೇಶ ಬಿಟ್ಟು ಓಡಿಹೋಗಲು ಅವಕಾಶ ಮಾಡಿಕೊಟ್ಟು ಭ್ರಷ್ಟಾಚಾರ ಹೆಚ್ಚಿಸಿದೆ. ಮತ್ತೊಂದು ಕಡೆ ಈ ದೇಶದ ದಲಿತ-ಅಲ್ಪಸಂಖ್ಯಾತ-ಮುಸ್ಲಿಂ ಸಮುದಾಯಗಳ ಮೇಲೆ ಮೋದಿ ಸರಕಾರದ ಬೆಂಬಲದೊಂದಿಗೆ ದಿನನಿತ್ಯ ದಾಳಿ, ಕೊಲೆ, ದೌರ್ಜನ್ಯಗಳು, ನಡೆಯುತ್ತಿದ್ದು ಇಡೀ ದೇಶದ ಮೇಲೆ ಭಯದ ಮೋಡ ಆವರಿಸಿಕೊಂಡಿದೆ. ಹೀಗಾಗಿಯೇ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ, ಸಂತಸದ ಸೂಚ್ಯಂಕದಲ್ಲಿ ಮತ್ತು ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತವು ಮೋದಿ ಆಡಳಿತದ ಕಳೆದ ಐದು ವರ್ಷಗಳಲ್ಲಿ 10-20 ಅಂಶಗಳಷ್ಟು ಕೆಳಗೆ ಕುಸಿದಿದೆ. ಬಡದೇಶಗಳು ನಮಗಿಂತ ಉತ್ತಮ ಪರಿಸ್ಥಿತಿಯಲ್ಲಿವೆ. ಈ ಒಟ್ಟಾರೆ ವೈಫಲ್ಯಗಳ ಪರಿಣಾಮದಿಂದಾಗಿ ಬಿಜೆಪಿಯು ಈ ಬಾರಿ ಪ್ರಣಾಳಿಕೆಯಲ್ಲಿ ಜನರ ಭದ್ರತೆಯ ಪ್ರಶ್ನೆಯನ್ನು ಕೈಬಿಟ್ಟು ದೇಶದ ಭದ್ರತೆಯ ಪ್ರಶ್ನೆಯನ್ನು ಪ್ರಮುಖವಾಗಿಸಿಕೊಂಡಿದೆ. ಅಲ್ಲೂ ಕೂಡಾ ಯಾವುದೇ ದೂರಗಾಮಿ ಪರಿಹಾರ ದೃಷ್ಟಿಯನ್ನು ಜನರ ಮುಂದಿರಿಸಿಲ್ಲ. ಬದಲಿಗೆ ಕಾಶ್ಮೀರವನ್ನು ಮತ್ತಷ್ಟೂ ಸೈನ್ಯೀಕರಿಸಿ ಯೋಧರನ್ನು ಬಲಿಗೊಡುವ, ಈಶಾನ್ಯ ರಾಜ್ಯಗಳಲ್ಲಿ ರಾಷ್ಟ್ರೀಯ ನಾಗರಿಕ ದಾಖಲಾತಿ (ಎನ್‌ಆರ್ಸಿ) ಯೋಜನೆಯ ಮೂಲಕ ಮುಸ್ಲಿಮರನ್ನು ಬಲಿತೆಗೆದುಕೊಳ್ಳುವ ಅಜೆಂಡಾವನ್ನು ಮುಂದಿರಿಸಿದೆ.

ಹಾಗೆಯೇ ಇತರ ದೇಶಗಳಿಂದ ವಲಸೆ ಬರುವ ಹಿಂದೂ ವಲಸಿಗರಿಗೆ ಅಥವಾ ಮುಸ್ಲಿಮೇತರ ವಲಸಿಗರಿಗೆ ನಾಗರಿಕತ್ವವನ್ನು ನೀಡುವ ಕಾಯ್ದೆಯನ್ನು ತಂದು ಈಶಾನ್ಯ ಭಾರತದಲ್ಲಿ ಧರ್ಮವಾರು ಜನಸಮತೋಲವನ್ನು ಮಾರ್ಪಡಿಸಲು ಮುಂದಾಗಿದೆ. ಹಾಗೆಯೇ ಭಾರತ ರಾಷ್ಟ್ರೀಯತೆಯನ್ನು ಸಂವಿಧಾನ ಬಾಹಿರವಾಗಿ ಹಿಂದೂ ರಾಷ್ಟ್ರೀಯತೆಯನ್ನಾಗಿಸುವ ಹುನ್ನಾರದಲ್ಲಿ ತೊಡಗಿದೆ. ಇದರ ಜೊತೆಗೆ ರಾಮಮಂದಿರ ಕಟ್ಟುವ, ಧಾರ್ಮಿಕ-ಐತಿಹಾಸಿಕ ವಿಷಯಗಳಲ್ಲಿ ಸತ್ಯ-ಸಾಕ್ಷಿ-ಪುರಾವೆಗಳಿಗಿಂತ ಬಹುಸಂಖ್ಯಾತರ ಶ್ರದ್ಧೆಗಳನ್ನೇ ಎತ್ತಿಹಿಡಿಯುವ, ಆರ್ಟಿಕಲ್ 370 ಮತ್ತು 34-ಎ ರದ್ದು ಮಾಡುತ್ತ ಹಾಡಹಗಲೇ ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಉದ್ದೇಶವನ್ನು ಬಿಜೆಪಿ ಪ್ರಣಾಳಿಕೆ ಪ್ರಕಟಿಸಿದೆ.

ಮತ್ತೊಂದು ಕಡೆ ಹಿಂದೂಗಳೇ ಆಗಿರುವ ಬಹುಸಂಖ್ಯಾತ ರೈತಾಪಿ ಎದುರಿಸುತ್ತಿರುವ ಭೀಕರ ಕೃಷಿ ಬಿಕ್ಕಟ್ಟನ್ನು ಪರಿಹರಿಸಲು ಮಾತ್ರ ಯಾವ ದೂರಗಾಮಿ ಯೋಜನೆಯನ್ನೂ ಬಿಜೆಪಿ ಮುಂದಿರಿಸಿಲ್ಲ. ಬದಲಿಗೆ 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟುಗೊಳಿಸುವ ಬಣ್ಣದ ಬಲೂನು ಹಾರಿಸಿದೆ. ಕಾಂಗ್ರೆಸ್‌ನ ‘ನ್ಯಾಯ್’ ಯೋಜನೆಗೆ ಬೇಕಾದ 3,.6 ಲಕ್ಷ ಕೋಟಿ ರೂ. ಎಲ್ಲಿಂದ ಬರುತ್ತದೆ ಎಂದು ಕೇಳುತ್ತಿದ್ದ ಬಿಜೆಪಿ ಈಗ ಗ್ರಾಮೀಣ ಕ್ಷೇತ್ರಕ್ಕೆ 25 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಹೇಳಿದೆ. ರೈತರ ಬೆಳೆಗಳಿಗೆ ಸ್ವಾಮಿನಾಥನ್ ಅಯೋಗದ ಪ್ರಕಾರ ಸಿ2+ಶೇ.50 ಬೆಲೆ ಕೊಡುವ ಮತ್ತು ಅದನ್ನು ಎಲ್ಲಾ ರೈತರ ಎಲ್ಲಾ ಬೆಳೆಗಳಿಗೆ ದಕ್ಕುವಂತೆ ಮಾಡುವ ಯಾವುದೇ ಯೋಜನೆಯಿರದ ಬಿಜೆಪಿ ಪ್ರಣಾಳಿಕೆ ಇಡೀ ಕೃಷಿಯನ್ನು ಮಾರುಕಟ್ಟೆ ಶಕ್ತಿಗಳಿಗೆ ತೆರೆದಿಡುವ ಪ್ರಸ್ತಾಪಗಳನ್ನು ಹೊಂದಿದೆ.

ಇಂದು ದೇಶವು ಕಳೆದ 45 ವರ್ಷಗಳಲ್ಲೇ ಕಾಣದಷ್ಟು ನಿರುದ್ಯೋಗವನ್ನು ಎದುರಿಸುತ್ತಿದೆ. ಅತಂತ್ರ ಉದ್ಯೋಗ ಅದರ ಎರಡು ಪಟ್ಟಿದೆ. ಈ ಪರಿಸ್ಥಿತಿಯು ನೋಟು ನಿಷೇಧ ಮತ್ತು ಜಿಎಸ್‌ಟಿಯಿಂದಾಗಿ ಇನ್ನಷ್ಟು ಬಿಗಡಾಯಿಸಿದೆ. ಇದನ್ನು ಪರಿಹರಿಸಲು ಖಾಲಿ ಇರುವ ಕೇಂದ್ರದ 4 ಲಕ್ಷದ ಉದ್ಯೋಗಗಳನ್ನು ಮತ್ತು ರಾಜ್ಯ ಗಳಲ್ಲಿನ 40 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡುವ ಹುಸಿ ಭರವಸೆಯನ್ನಾದರೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಈ ದೇಶದ ಯುವಕರನ್ನು ಇನ್ನಷ್ಟು ‘ಪಕೋಡಾ ಉದ್ಯಮಿ’ಗಳನ್ನಾಗಿ ಮಾಡುವ ಯೋಜನೆಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಅಂದಹಾಗೆ ಮುಂದೆ ರಕ್ಷಣಾ ಮತ್ತು ಔಷಧ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಮಾಡುವ ಸಾಧ್ಯತೆಗಳನ್ನು ‘ಪರಿಶೀಲಿಸುವ’ ಭರವಸೆಯನ್ನೂ ನೀಡಲಾಗಿದೆ. 2047ರ ವೇಳೆಗೆ 100 ಲಕ್ಷ ಕೋಟಿ ಕೈಗಾರಿಕಾ ಹೂಡಿಕೆಯನ್ನು ಮಾಡುವುದಾಗಿ ಪ್ರಣಾಳಿಕೆ ಹೇಳುತ್ತದೆ ಹಾಗೂ ಭಾರತವನ್ನು ಆ ವೇಳೆಗೆ ಬೃಹತ್ ಆರ್ಥಿಕ ಶಕ್ತಿಯನ್ನಾಗಿ ಮಾಡುವ ಭರವಸೆಯನ್ನು ನೀಡಲಾಗಿದೆ. ಅದಾಗಬೇಕೆಂದರೆ ಈಗಿರುವ ಅಭಿವೃದ್ಧಿ ದರ ಶೇ.7ರಿಂದ ಶೇ.50ರಷ್ಟು ಅಂದರೆ ಏಳುಪಟ್ಟು ಹೆಚ್ಚಾಗಬೇಕು. ಇಂತಹ ಪವಾಡಗಳು ಪುರಾಣಗಳಲ್ಲೂ ಸಂಭವಿಸಿಲ್ಲ. ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಕೇರಳದಲ್ಲಿ ಮಾಡಿದ ಭಾಷಣವೊಂದಲ್ಲಿ ‘‘ಒಂದು ಡಾಲರ್‌ಗೆ 65 ರೂ. ಇರುವ ಈಗಿರುವ ಪರಿಸ್ಥಿತಿಯನ್ನು ಮೋದಿಯವರು ಬದಲಾಯಿಸಿ ಒಂದು ರೂಪಾಯಿಗೆ 65 ಡಾಲರ್ ಆಗುವ ಪರಿಸ್ಥಿತಿಯನ್ನು ತರುತ್ತಾರೆ’’ ಎಂದು ಅಸಂಬದ್ಧವಾಗಿ ಬಡಬಡಿಸಿದ್ದರು, ಪ್ರಣಾಳಿಕೆಯ ಈ ಭಾಗವನ್ನು ಅವರೇ ಬರೆದಿರುವಂತಿದೆ!

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News

ನಾಸ್ತಿಕ ಮದ