ಕಿರುಕುಳಗಳ ಕಾರಣ ಪ್ರಜ್ಞಾ ಸಿಂಗ್ ಕರ್ಕರೆ ವಿರುದ್ಧ ಹೇಳಿಕೆ ನೀಡಿರಬಹುದು ಎಂದ ಬಿಜೆಪಿ!
ಹೊಸದಿಲ್ಲಿ, ಎ.19: 26/11 ಹೀರೋ, ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆಯವರ ಬಗ್ಗೆ ಬಿಜೆಪಿ ಅಭ್ಯರ್ಥಿ, ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆ ವಿವಾದ ಸೃಷ್ಟಿಸಿರುವಂತೆಯೇ ಈ ಬಗ್ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದೆ.
ಹೇಮಂತ್ ಕರ್ಕರೆ ಬಗ್ಗೆ ಪ್ರಜ್ಞಾ ಸಿಂಗ್ ನೀಡಿರುವ ಹೇಳಿಕೆ ಆಕೆಯ ವೈಯಕ್ತಿಕ ಅಭಿಪ್ರಾಯ. ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 2008ರಲ್ಲಿ ಜೈಲಿನಲ್ಲಿದ್ದಾಗ ಎದುರಿಸಿದ ಕಿರುಕುಳಗಳ ಕಾರಣದಿಂದಾಗಿ ಈ ಹೇಳಿಕೆ ನೀಡಿರಬಹುದು ಎಂದು ಬಿಜೆಪಿ ಪ್ರಕಟನೆಯಲ್ಲಿ ತಿಳಿಸಿದೆ.
‘ನೀವು ಸಾಯುತ್ತೀರಿ ಎಂದು ನಾನು ಹೇಳಿದೆ. ಅದಾಗಿ 2 ತಿಂಗಳುಗಳಲ್ಲಿ ಉಗ್ರರಿಂದ ಕೊಲ್ಲಲ್ಪಟ್ಟರು” ಎಂದು ಪ್ರಜ್ಞಾ ಸಿಂಗ್ ಪತ್ರಿಕಾಗೋಷ್ಟಿಯಲ್ಲಿ ಕರ್ಕರೆ ವಿರುದ್ಧ ಹೇಳಿಕೆ ನೀಡಿದ್ದರು.
ಪ್ರಜ್ಞಾ ಸಿಂಗ್ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, “ಅವರನ್ನು ಬಿಜೆಪಿ ಹುತಾತ್ಮ ಎಂದು ಪರಿಗಣಿಸುತ್ತದೆ. ಸಾಧ್ವಿ ಪ್ರಜ್ಞಾ ಎದುರಿಸಿದ ಮಾನಸಿಕ ಮತ್ತು ದೈಹಿಕ ಕಿರುಕುಳಗಳಿಂದಾಗಿ ಆಕೆ ಈ ಹೇಳಿಕೆ ನೀಡಿರಬಹುದು ಮತ್ತು ಇದು ಆಕೆಯ ವೈಯಕ್ತಿಕ ಹೇಳಿಕೆ” ಎಂದಿದೆ.