ಇವಿಎಂ ಜವಾಬ್ದಾರಿ ಹೊಂದಿದ್ದ ಅಧಿಕಾರಿ ನಾಪತ್ತೆ !
ಕೋಲ್ಕತಾ, ಎ.19: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆದ ಮರುದಿನವಾದ ಶುಕ್ರವಾರವೂ ಪಶ್ಚಿಮ ಬಂಗಾಳದಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದಿದ್ದು, ದಾರ್ಜಿಲಿಂಗ್ ಲೋಕಸಭಾ ಕ್ಷೇತ್ರದ ಚೋಪ್ರಾ ಎಂಬಲ್ಲಿ ಟಿಎಂಸಿ- ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ. ಘರ್ಷಣೆ ನಡೆದ ಸ್ಥಳದಲ್ಲಿ ಹಾದುಹೋಗುತ್ತಿದ್ದ ಏಳನೇ ತರಗತಿಯ ವಿದ್ಯಾರ್ಥಿಯ ಕಾಲಿಗೆ ಗುಂಡೇಟು ಬಡಿದಿದ್ದು, ಈ ಬಗ್ಗೆ ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರರ ಮೇಲೆ ದೋಷಾರೋಪ ಮಾಡಿದ್ದಾರೆ. ಈ ಮಧ್ಯೆ, ಇವಿಎಂ ಯಂತ್ರದ ಜವಾಬ್ದಾರಿ ಹೊಂದಿದ್ದ ನಾಡಿಯಾದ ಮತದಾನ ಅಧಿಕಾರಿ ಅರ್ನಾಬ್ ರಾಯ್ ಗುರುವಾರದಿಂದ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ರಣಾಗತ್ ಸಂಸದೀಯ ಕ್ಷೇತ್ರದ ಇವಿಎಂ ಮತ್ತು ವಿವಿಪ್ಯಾಟ್‌ಗಳ ಜವಾಬ್ದಾರಿಯನ್ನು ಹೊಂದಿದ್ದ ಅರ್ನಾಬ್ ರಾಯ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಅವರ ಪತ್ತೆ ಕಾರ್ಯಾಚರಣೆ ಆರಂಭವಾಗಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ರವಾನಿಸಲಾಗಿದ್ದು ಅರ್ನಾಬ್ ಅವರ ಬದಲಿಯಾಗಿ ಮತ್ತೊಬ್ಬ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ಆರಂಭವಾದಾಗ ಅದೇ ಪ್ರದೇಶದಲ್ಲಿ ನಡೆದು ಹೋಗುತ್ತಿದ್ದ ಮುಹಮ್ಮದ್ ಅಬ್ದುಲ್ ಎಂಬ ವಿದ್ಯಾರ್ಥಿಯ ಕಾಲಿಗೆ ಗುಂಡು ಬಡಿದಿದೆ. ಈತನನ್ನು ತಕ್ಷಣ ಆಸ್ಪತೆಗೆ ದಾಖಲಿಸಲಾಗಿದೆ. ಕಾಲಿಗೆ ಗಂಭೀರ ಗಾಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಗುರುವಾರ ತಮಗೆ ಮತದಾನ ನಡೆಸಲು ತಡೆಯೊಡ್ಡಲಾಗಿದೆ ಎಂದು ಚೋಪ್ರಾ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ 31ರಲ್ಲಿ ಪ್ರತಿಭಟನೆ ನಡೆಸಿದರು. ತಕ್ಷಣ ಕ್ಷಿಪ್ರ ಕಾರ್ಯಪಡೆ ಸ್ಥಳಕ್ಕೆ ಧಾವಿಸಿದಾಗ ಗ್ರಾಮಸ್ಥರು ಅವರತ್ತ ಕಲ್ಲೆಸೆದು ಮುಂದುವರಿಯದಂತೆ ತಡೆದರು. ಬಳಿಕ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಗುಂಪನ್ನು ಚದುರಿಸಿದರು. ನಂತರ ಗ್ರಾಮಸ್ಥರು ಕೇಂದ್ರ ಭದ್ರತಾ ಪಡೆಗಳ ಉಪಸ್ಥಿತಿಯಲ್ಲಿ ಮತ ಚಲಾಯಿಸಿದರು.
ಚೋಪ್ರಾದ ಮಕ್ದುಮಿ ಪ್ರದೇಶದಲ್ಲಿ ಕೆಲವು ಬೂತ್‌ಗಳ ಇವಿಎಂಗಳಲ್ಲಿ ಬಿಜೆಪಿ ಅಭ್ಯರ್ಥಿಯ ಹೆಸರು ಮತ್ತು ಫೋಟೋಗೆ ಕಪ್ಪು ಬಣ್ಣದ ಟೇಪ್ ಅಂಟಿಸಲಾಗಿದೆ ಎಂದು ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಇವಿಎಂ ಯಂತ್ರವನ್ನು ಒಡೆಯಲು ಮುಂದಾದ ಘಟನೆ ನಡೆದಿದೆ. ದಾರ್ಜಿಲಿಂಗ್‌ನ ಕಲೀಂಪೋಂಗ್‌ನಲ್ಲಿ ಜನ ಆಂದೋಲನ ಪಕ್ಷದ ಮುಖಂಡ ಹರ್ಕ ಬಹಾದೂರ್ ಚೆತ್ರಿ ಮತ ಚಲಾಯಿಸಲು ಬೂತ್‌ನೊಳಗೆ ಹೋದಾಗ ಮೊಬೈಲ್ ಫೋನ್ ಕೊಂಡೊಯ್ದ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಯನ್ನು ಬದಲಿಸಲಾಗಿದೆ.
ರಾಜ್‌ಗಂಜ್ ಎಂಬಲ್ಲಿ ಸಿಪಿಎಂ ಅಭ್ಯರ್ಥಿ ಮುಹಮ್ಮದ್ ಸಲೀಂ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಜಲ್‌ಪಾಯ್‌ಗುರಿಯ ಮತಗಟ್ಟೆಯೊಂದರಲ್ಲಿ ಕೆಲವರು ಮತಗಟ್ಟೆ ಪ್ರವೇಶಿಸಿ ಗುಂಡಿನ ದಾಳಿ ನಡೆಸಿ ಪರಾರಿಯಾದರು ಎಂದು ವರದಿಯಾಗಿದೆ. ಆದರೆ ಮುಖ್ಯ ಚುನಾವಣಾಧಿಕಾರಿ ಗುಂಡು ಹಾರಾಟದ ಘಟನೆಯನ್ನು ನಿರಾಕರಿಸಿದ್ದಾರೆ.