ನಿರುದ್ಯೋಗದ ಬಗ್ಗೆ ಸಚಿವರನ್ನು ಪ್ರಶ್ನಿಸಿದ ಯುವಕನ ಬಂಧನ !
ಪಣಜಿ, ಎ. 19: ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರಲ್ಲಿ ನಿರುದ್ಯೋಗದ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ಉತ್ತರ ಗೋವಾದ ವಾಲಪೋಯಿ ಕ್ಷೇತ್ರದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಲೋಕಸಭಾದ ಬಿಜೆಪಿ ಅಭ್ಯರ್ಥಿ ಶ್ರೀಪಾದ್ ನಾಯ್ಕ್ ಅವರ ಪರ ಚುನಾವಣಾ ಪ್ರಚಾರದ ಬಗ್ಗೆ ಚರ್ಚೆ ನಡೆಸಲು ಗುರುವಾರ ರಾತ್ರಿ ಆಯೋಜಿಸಲಾದ ಸಭೆಯಲ್ಲಿ ಈ ಘಟನೆ ನಡೆದಿದೆ. “ಕಳೆದ ಒಂದು ದಶಕಗಳಿಂದ ಸಚಿವರ ಸಕ್ರಿಯ ಬೆಂಬಲಿಗನಾಗಿರುವ ಹೊರತಾಗಿಯೂ ನನಗೆ ನೀವು ಯಾಕೆ ಉದ್ಯೋಗ ನೀಡಿಲ್ಲ” ಎಂದು ರಾಣೆ ಅವರನ್ನು ಯುವಕ ದರ್ಶನ್ ಗಾಂವ್ಕರ್ ಪ್ರಶ್ನಿಸಿದ್ದರು. “ಕಳೆದ ಕೆಲವು ವರ್ಷಗಳಿಂದ ಭರವಸೆ ನೀಡಿದ ಹೊರತಾಗಿಯೂ ನನಗೆ ಉದ್ಯೋಗ ಯಾಕೆ ನೀಡಿಲ್ಲ ಎಂದು ಮಾತ್ರ ನಾನು ಕೇಳುತ್ತಿದ್ದೇನೆ. ಸಚಿವರು ನನಗೆ ಉದ್ಯೋಗದ ಭರವಸೆ ನೀಡಿದ ಹೊರತಾಗಿಯೂ ಈಡೇರಿಸದೇ ಇರುವುದಕ್ಕೆ ನಾನು ಪ್ರಶ್ನೆ ಎತ್ತಿದೆ. ಈ ಕಾರಣಕ್ಕೆ ಸಭೆ ಮುಗಿದ ಬಳಿಕ ನನ್ನನ್ನು ಬಂಧಿಸಲಾಯಿತು” ಎಂದು ದರ್ಶನ್ ಗೋಯಂಕರ್ ಆರೋಪಿಸಿದ್ದಾರೆ.
ವಾಲಪೋಯಿ ಪೊಲೀಸ್ ಠಾಣೆಯ ಪೊಲೀಸರು ದರ್ಶನ್ ಗೋಯಂಕರ್ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಅನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಈ ಬೆಳವಣಿಗೆ ಬಗ್ಗೆ ರಾಣೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ‘‘ಪ್ರಶ್ನೆ ಕೇಳಲು ಶಿಸ್ತು ಇದೆ. ದರ್ಶನ್ ಗಾಂವ್ಕರ್ ಪ್ರತಿಪಕ್ಷದಿಂದ ಪ್ರೇರಿತನಾಗಿ ಪ್ರತಿಯೊಬ್ಬರನ್ನೂ ಮುಜುಗರಕ್ಕೀಡು ಮಾಡಲು ಅಶಿಸ್ತಿನಿಂದ ಪ್ರಶ್ನೆ ಕೇಳಿದ್ದರು ಹಾಗೂ ಗೊಂದಲ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೆಲವರು ದೂರು ದಾಖಲಿಸಿದ್ದರು ಎಂದು ಸಚಿವರ ನಿಕಟ ಮೂಲಗಳು ತಿಳಿಸಿವೆ.