ಕರ್ಕರೆ ಮನೆಗೆ ಬಂದಿದ್ದರು ಮೋದಿ: ಬಿಜೆಪಿಗೆ ನೆನಪಿಸಿದ ಮಾಜಿ ಡಿಜಿಪಿ
ಮುಂಬೈ, ಎ.20: ನನ್ನ ಶಾಪದಿಂದಾಗಿ ಹೇಮಂತ್ ಕರ್ಕರೆ ಹತ್ಯೆಯಾದರು ಎಂದು ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಶಂಕಿತ ಭಯೋತ್ಪಾದಕಿ ಸಾಧ್ವಿ ಪ್ರಜ್ಞಾಸಿಂಗ್ ನೀಡಿರುವ ಹೇಳಿಕೆ ಬಗ್ಗೆ ನಿಷ್ಠಾವಂತ ಪೊಲೀಸ್ ಅಧಿಕಾರಿಯ ಮಾಜಿ ಸಹೋದ್ಯೋಗಿಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಮಾಜಿ ಡಿಜಿಪಿ ಅನಾಮಿ ರಾವ್ ಈ ಬಗ್ಗೆ ಪ್ರತಿಕ್ರಿಯಿಸಿ, "ಈ ಅನೈತಿಕ ಹೇಳಿಕೆಯಿಂದ ನಿಜಕ್ಕೂ ದಿಗಿಲು ಉಂಟಾಗಿದೆ" ಎಂದು ಹೇಳಿದ್ದಾರೆ. ರಾಯ್ ಅಧೀನದಲ್ಲಿದ್ದ ಹೇಮಂತ್ ಕರ್ಕರೆ ನೇತೃತ್ವದ ಎಟಿಎಸ್ ತಂಡ ಮಲೇಗಾಂವ್ ಸ್ಫೋಟ ಪ್ರಕರಣದ ಸಂಬಂಧ ಠಾಕೂರ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.
2008ರ ನವೆಂಬರ್ 28ರಂದು ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹೇಮಂತ್ ಕರ್ಕರೆಯವರ ಮುಂಬೈ ನಿವಾಸಕ್ಕೆ ಭೇಟಿ ನೀಡಿ, ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಭದ್ರತಾ ಪಡೆಯ ಯೋಧರ ಕುಟುಂಬಗಳಿಗೆ ಒಂದು ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದ ಭರವಸೆಯನ್ನು ಕೂಡಾ ಪ್ರಜ್ಞಾ ಸಿಂಗ್ ಹೇಳಿಕೆ ಮುನ್ನಲೆಗೆ ತಂದಿದೆ.
ಹನ್ನೊಂದು ವರ್ಷಗಳ ಹಿಂದೆ ಒಬೆರಾಯ್ ಹೋಟೆಲ್‌ನ ಹೊರಗೆ ಮೋದಿ, "ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕಲು ನಾವು ಬದ್ಧರಾಗಬೇಕು.. ನಾನು ಧೈರ್ಯಶಾಲಿ ಪೊಲೀಸ್ ಅಧಿಕಾರಿಗಳಾದ ಕರ್ಕರೆ ಮತ್ತು ಸಲಸ್ಕರ್ ನಿವಾಸಕ್ಕೆ ಭೇಟಿ ನೀಡಿದ್ದೆ... ಉಗ್ರರ ವಿರುದ್ಧ ಹೋರಾಟದಲ್ಲಿ ಹುತಾತ್ಮರಾದವರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾವನ್ನು ಗುಜರಾತ್ ಸರ್ಕಾರದಿಂದ ನೀಡುವ ಘೋಷಣೆಯನ್ನೂ ಮಾಡಿದ್ದೇನೆ.. ಪ್ರಧಾನಿ ಮನಮೋಹನ್ ಸಿಂಗ್ ನಿನ್ನೆ ದೇಶಕ್ಕೆ ಸಂದೇಶ ನೀಡಿದ್ದಾರೆ. ನಾನು ಕೂಡಾ ಮಾಧ್ಯಮಗಳ ಮೂಲಕ ನನ್ನ ಭಾವನೆಗಳನ್ನು ಅಭಿವ್ಯಕ್ತಪಡಿಸಿದ್ದೇನೆ. ಆದರೆ ದೇಶಕ್ಕೆ ಪ್ರಧಾನಿಯಿಂದ ಹಲವು ನಿರೀಕ್ಷೆಗಳಿವೆ. ಅವರ ಸಂದೇಶ ಸಮಾಧಾನ ತರುವಂಥದ್ದಲ್ಲ" ಎಂದು ಹೇಳಿದ್ದರು. ಗುಜರಾತ್ ಸರ್ಕಾರದ ಈ ನೆರವಿನ ವಾಗ್ದಾನವನ್ನು ಕರ್ಕರೆ ಪತ್ನಿ ಕವಿತಾ ತಿರಸ್ಕರಿಸಿದ್ದರು.
ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ರಾಯ್, "ಠಾಕೂರ್ ಹೇಳಿಕೆ ನಿಜಕ್ಕೂ ನೋವು ತಂದಿದೆ. ಆದ್ದರಿಂದ ತಮ್ಮನ್ನು ಸಮರ್ಥಿಸಿಕೊಳ್ಳಲು ಈಗ ಇಲ್ಲದ ಅಧಿಕಾರಿಯ ಪರವಾಗಿ ನಾನು ಸಮರ್ಥನೆ ಮಾಡುತ್ತಿದ್ದೇನೆ. ಎಟಿಎಸ್ ನನಗೆ ವರದಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯ ಮೇಲ್ವಿಚಾರಣೆಯನ್ನು ನಾನು ನಡೆಸಿದ್ದೆ. ನಾನು ಆ ಆರೋಪಪಟ್ಟಿಯ ಪರವಾಗಿದ್ದೇನೆ. ಅತ್ಯಂತ ವೃತ್ತಿಪರವಾಗಿ ಹಾಗೂ ಯಾವುದೇ ಒತ್ತಡಕ್ಕೆ ಮಣಿಯದೇ ಸಿದ್ಧಪಡಿಸಿದ ಆರೋಪಪಟ್ಟಿ ಅದು. ಆರೋಪಪಟ್ಟಿ ಸಮರ್ಥನೀಯ ಹಾಗೂ ಆರೋಪಿಗಳ ಖುಲಾಸೆಯಾಗಿಲ್ಲ. ವಿಚಾರಣೆ ನಡೆಯುತ್ತಿದೆ" ಎಂದು ಸ್ಪಷ್ಟಪಡಿಸಿದರು.
"ಹೇಮಂತ್ ಕರ್ಕರೆ ವೃತ್ತಿಪರ ಅಧಿಕಾರಿ. ಯಾವುದೇ ರಾಜಕೀಯ ಪಕ್ಷಗಳ ಪರ ಒಲವು ಅವರಿಗೆ ಇರಲಿಲ್ಲ. ತನ್ನನ್ನು ಸಮರ್ಥಿಸಿಕೊಳ್ಳಲು ಆ ವ್ಯಕ್ತಿ ಇಂದು ಇಲ್ಲ. ಅವರ ಸಹೋದ್ಯೋಗಿಯಾಗಿ, ಇಂಥ ಹೇಳಿಕೆಗಳನ್ನು ಕೇಳುತ್ತಿರುವುದು ನಿಜಕ್ಕೂ ನೋವಿನ ಸಂಗತಿ" ಎಂದರು.
ಮಾಜಿ ಐಪಿಎಸ್ ಅಧಿಕಾರಿ ಮೀರನ್ ಬೋರ್ವಾಂಕರ್ ಕೂಡಾ ಠಾಕೂರ್ ಹೇಳಿಕೆಯಿಂದ ತೀವ್ರ ನೋವಾಗಿದೆ ಎಂದು ಹೇಳಿದ್ದಾರೆ.