ಭಾರತದ ಮುಖ್ಯ ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳ: ಆರೋಪ
ಹೊಸದಿಲ್ಲಿ, ಎ.20: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಕಿರಿಯ ಸಹಾಯಕಿಯಾಗಿ ಕರ್ತವ್ಯನಿರ್ವಹಿಸುತ್ತಿದ್ದ 35 ವರ್ಷದ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ನ 22 ನ್ಯಾಯಾಧೀಶರಿಗೆ ಬರೆದ ಪತ್ರವೊಂದರಲ್ಲಿ ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯಿ ಅವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು scroll.in ವರದಿ ಮಾಡಿದೆ.
2018ರ ಅಕ್ಟೋಬರ್ 10 ಹಾಗೂ 11ರಂದು ಮುಖ್ಯ ನ್ಯಾಯಾಧೀಶರು ತನ್ನ ಗೃಹ ಕಚೇರಿಯಲ್ಲಿ ನನ್ನ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ ಎಂದು ಎಪ್ರಿಲ್ 19ರಂದು ಈ ಮಹಿಳೆ ಪತ್ರ ಬರೆದಿದ್ದಾರೆ. ‘‘ಅವರು ನನ್ನನ್ನು ಆಲಂಗಿಸಿದ್ದು, ನನ್ನ ಇಡೀ ಮೈ ಸ್ಪರ್ಶಿಸಿ ನನ್ನನ್ನು ಹಿಡಿದುಕೊಂಡರು ಮತ್ತು ನನ್ನನ್ನು ಹೋಗಲು ಬಿಡಲಿಲ್ಲ. ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ನನ್ನನ್ನು ಹಿಡಿದಿಟ್ಟುಕೊಂಡರು’’ ಎಂದು ಮಹಿಳೆ ಪತ್ರದೊಂದಿಗೆ ಕಳುಹಿಸಿರುವ ಅಫಿದವಿತ್‌ನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್‌ನ ಮಹಾ ಕಾರ್ಯದರ್ಶಿ, ಇದು ಸಂಪೂರ್ಣ ಸುಳ್ಳು ಹಾಗೂ ದುರುದ್ದೇಶಪೂರಿತ ಆರೋಪ ಎಂದು ಹೇಳಿದ್ದಾರೆ. ಇದರ ಹಿಂದೆ ಸುಪ್ರೀಂ ಕೋರ್ಟ್‌ಗೆ ಕಳಂಕ ತರಲು ಪ್ರಯತ್ನಿಸುವ ದುಷ್ಟಶಕ್ತಿಗಳ ಪಾತ್ರ ಇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಈ ಘಟನೆ ನಡೆದ ಬಳಿಕ ತನನ್ನು ಮೊದಲು ಮುಖ್ಯ ನ್ಯಾಯಾಧೀಶರ ಕಚೇರಿಯಿಂದ ವರ್ಗಾಯಿಸಲಾಯಿತು. ಎರಡು ತಿಂಗಳ ಬಳಿಕ ನನ್ನನ್ನು ವಜಾ ಮಾಡಲಾಯಿತು ಎಂದು ಮಹಿಳೆ ದೂರಿದ್ದಾರೆ.