ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ: ಬೆಚ್ಚಿಬೀಳಿಸುವ ಮಾಹಿತಿಗಳು

Update: 2019-04-20 11:25 GMT

ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿರುವ ಸುಪ್ರೀಂ ಕೋರ್ಟ್ ನ ಮಾಜಿ ಕಿರಿಯ ಸಹಾಯಕಿ ಸುಪ್ರೀಂ ಕೋರ್ಟ್‌ ನ 22 ನ್ಯಾಯಾಧೀಶರುಗಳಿಗೆ ಬರೆದ ಪತ್ರದಲ್ಲಿ ದೂರು ನೀಡಲು ಮಹಿಳೆ ಕೊಟ್ಟ ಕಾರಣ ಇಲ್ಲಿದೆ…

ಸಿಜೆಐ ವಿರುದ್ಧ ಆರೋಪ ಮಾಡಿರುವ ಮಹಿಳೆ, ಮತ್ತಾಕೆಯ ಪತಿಯನ್ನು ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಆಕೆಯ ಮೈದುನ, ಆತನ ಪತ್ನಿ ಮತ್ತೊಬ್ಬ ಪುರುಷ ಸಂಬಂಧಿ ಜತೆ ವಶಕ್ಕೆ ಪಡೆದುಕೊಳ್ಳಲಾಗಿತ್ತು ಎಂದು ಅಫಿದಾವಿತ್ ತಿಳಿಸಿದೆ. ಅಲ್ಲಿ ತಮಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗಿತ್ತು, ಕೈಕಾಲುಗಳಿಗೆ ಕೋಳ ತೊಡಿಸಲಾಗಿತ್ತು ಹಾಗೂ 24 ಗಂಟೆಗಳ ಕಾಲ ನೀರು ಮತ್ತು ಆಹಾರ ನಿರಾಕರಿಸಲಾಗಿತ್ತು ಎಂದು ಅಫಿದಾವಿತ್ ನಲ್ಲಿ ಆರೋಪಿಸಲಾಗಿದೆ.

ದಂಪತಿ ಜನವರಿ 11, 2018ರಂದು ತಿಲಕ್ ಮಾರ್ಗ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಜತೆ ನಡೆಸಿದ ಸಂವಾದದ ವೀಡಿಯೋವನ್ನು ಕೂಡ ಅದು ಒಳಗೊಂಡಿದೆ. ಆಕೆ ಜಸ್ಟಿಸ್ ಗೊಗೊಯಿ ಅವರ ಪತ್ನಿಯಿಂದ ಕ್ಷಮೆ ಕೇಳಿದ್ದರಿಂದ ಅವರು ಅನುಭವಿಸುತ್ತಿದ್ದ ಕಿರುಕುಳವೆಲ್ಲವೂ ಇನ್ನು ನಿಲ್ಲುವುದು ಎಂದು ಠಾಣಾಧಿಕಾರಿ ಅವರಿಗೆ ಆಶ್ವಾಸನೆ ನೀಡುವುದು ವಿಡಿಯೋದಲ್ಲಿದೆ.

ಸಂಭಾಷಣೆ ವೇಳೆ ಹಲವು ಬಾರಿ ಮಹಿಳೆ ಬಿಕ್ಕಳಿಸುತ್ತಾರೆ. “ಸರ್, ನನ್ನ ಇಡೀ ಕುಟುಂಬ ಒತ್ತಡದಲ್ಲಿದೆ” ಎಂದು ಆಕೆ ಹಿಂದಿಯಲ್ಲಿ ಪೊಲೀಸ್ ಅಧಿಕಾರಿಗೆ ಹೇಳುತ್ತಾಳೆ. “ನನಗೆ ತುಂಬ ತಪ್ಪಿತಸ್ಥ ಭಾವನೆ ಕಾಡುತ್ತಿದೆ. ಒಂದೆಡೆ ನೀವು ಯಾವುದೇ ತಪ್ಪು ಮಾಡಿಲ್ಲ, ಇನ್ನೊಂದೆಡೆ ನಿಮ್ಮನ್ನು ಇಷ್ಟೊಂದು ಶಿಕ್ಷಿಸಲಾಗುತ್ತಿದೆ”, “ಒಬ್ಬ ದೊಡ್ಡ ವ್ಯಕ್ತಿ ತಪ್ಪು ಮಾಡಿದಾಗ ಅವರು ಅದನ್ನು ಒಪ್ಪಿಕೊಳ್ಳುತ್ತಾರೆಯೇ?'' ಎಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ. “ಇದು ಸಹಜ ಸರ್, ಅವರು ಒಪ್ಪಿಕೊಳ್ಳುವುದಿಲ್ಲ'' ಎಂದು ಆಕೆ ಪ್ರತಿಕ್ರಿಯಿಸುತ್ತಾಳೆ.

“ಮುಖ್ಯ ನ್ಯಾಯಮೂರ್ತಿಗಳ ಅನುಚಿತ ವರ್ತನೆಯನ್ನು ವಿರೋಧಿಸಿದ್ದಕ್ಕಾಗಿ ಹಾಗೂ ಅವರ ಇಚ್ಛೆಯಂತೆ ನಡೆದುಕೊಳ್ಳಲು ನಿರಾಕರಿಸಿದ್ದಕ್ಕಾಗಿ ನನ್ನನು ಬಲಿಪಶುವನ್ನಾಗಿಸಲಾಗಿದೆ. ನನ್ನ ಇಡೀ ಕುಟುಂಬಕ್ಕೂ ಇದರಿಂದ ಕಿರುಕುಳವುಂಟಾಗಿದೆ''ಎಂದು ಆಕೆ ತಮ್ಮ ಅಫಿದಾವಿತ್ ನಲ್ಲಿ ಆರೋಪಿಸಿದ್ದಾರೆ.

“ಈ ಕಿರುಕುಳ ಸಹಿಸಲಸಾಧ್ಯ ಮಟ್ಟಕ್ಕೆ  ತಲುಪಿದಾಗ ಹಾಗೂ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಪೊಲೀಸ್ ಕಸ್ಟಡಿಗೆ ಪಡೆದು ಹಿಂಸಿಸಿದ್ದರಿಂದ ನನ್ನ ಜೀವಕ್ಕೆ ಅಪಾಯವಿದೆ ಹಾಗೂ ನನ್ನನ್ನು ಹಾಗೂ ನನ್ನ ಕುಟುಂಬವನ್ನು ರಕ್ಷಿಸಲು ನಾನೀಗ ಸಂಪೂರ್ಣ ಸತ್ಯವನ್ನು ಹೇಳುವ ಅನಿವಾರ್ಯತೆಯಲ್ಲಿದ್ದೇನೆ'' ಎಂದು ಆಕೆ ಬರೆದಿದ್ದಾಳೆ.

“ಈ ಪತ್ರದ ಮೂಲಕ ನಾನು ಸುಪ್ರೀಂ ಕೋರ್ಟಿನ ಸನ್ಮಾನ್ಯ ನ್ಯಾಯಾಧೀಶರುಗಳಿಗೆ ಲೈಂಗಿಕ ಕಿರುಕುಳ ಆರೋಪದ ಕುರಿತಂತೆ ವಿಶೇಷ ತನಿಖಾ ಸಮಿತಿ ರಚಿಸಿ ತನಿಖೆ ನಡೆಸುವಂತೆ  ಮನವಿ ಮಾಡುತ್ತಿದೇನೆ” ಎಂದವರು ಹೇಳಿದ್ದಾರೆ.

scroll.in ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ಎಪ್ರಿಲ್ 19ರಂದು ಪ್ರಶ್ನೆಗಳನ್ನು ಇಮೇಲ್ ಮಾಡಿ ಅಫಿದಾವಿತ್  ಮತ್ತು ಪತ್ರದಲ್ಲಿ ಮಾಡಲಾಗಿರುವ ಆರೋಪಗಳ ಬಗ್ಗೆ ಅವರ ಪ್ರತಿಕ್ರಿಯೆ ಕೇಳಿತ್ತು. ಶನಿವಾರ ಬೆಳಗ್ಗೆ ಸುಪ್ರೀಂ ಕೋರ್ಟಿನ ಸೆಕ್ರಟರಿ ಜನರಲ್ ಈ ಪ್ರಶ್ನೆಗಳಿಗೆ ಇಮೇಲ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಕಿರಿಯ ಕೋರ್ಟ್ ಸಹಾಯಕಿಯನ್ನು ಉಲ್ಲೇಖಿಸಿ ಇಮೇಲ್‍ ನಲ್ಲಿ ಹೀಗೆ ಹೇಳಲಾಗಿದೆ ``ಆಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ಗೃಹ ಕಚೇರಿಯಲ್ಲಿ ಅಲ್ಪಾವಧಿಗೆ ಕೆಲಸ ಮಾಡಿದ್ದರು ಹಾಗೂ ತಿಳಿಯಪಡಿಸಿದಂತೆ ಆಕೆಯ ಕರ್ತವ್ಯದ ಸ್ವರೂಪದಂತೆ ಆಕೆಗೆ ಮುಖ್ಯ ನ್ಯಾಯಮೂರ್ತಿಯ ಜತೆ ನೇರವಾಗಿ ಸಂವಹನ ನಡೆಸುವ ಸಂದರ್ಭವಿರಲಿಲ್ಲ” ಎಂದಿದ್ದಾರೆ.

ನಿಯಮಾನುಸಾರ ಆಕೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು ಎಂದು ಇಮೇಲ್ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿಗಳ ಸೆಕ್ರಟೇರಿಯಟ್ ಆಕೆಯ ಅನುಚಿತ ವರ್ತನೆಯ ಬಗ್ಗೆ ಸೆಕ್ರಟರಿ ಜನರಲ್ ಅವರಿಗೆ ನೀಡಿದ ದೂರುಗಳಿವೆ  ಹಾಗೂ ಇದು ಸಿಜೆಐ ಅವರ ಗೃಹಕಚೇರಿಯಿಂದ ಆಕೆಯ ವರ್ಗಾವಣೆಗೆ ಕಾರಣವಾಯಿತು. ಸೆಕ್ರಟೇರಿಯಟ್ ತನ್ನ ದೂರಿನಲ್ಲಿ ದಾಖಲಿಸಿರುವ ಅನುಚಿತ ನಡವಳಿಕೆಯ ಹೊರತಾಗಿ ಆಕೆಯ ಇತರ ಅನುಚಿತ ವರ್ತನೆಗಳೂ ಇದ್ದವು'' ಎಂದ ಇಮೇಲ್ ತಿಳಿಸಿದೆ.

ಆದರೆ ಮಹಿಳೆಯ ಅನುಚಿತ ವರ್ತನೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಇಮೇಲ್ ನೀಡಿಲ್ಲ. ಆಕೆಯ ಅಮಾನತಿಗೆ ಕಾರಣವಾದ ತನಿಖಾ ಸಮಿತಿ ವರದಿಯು ಆಕೆಯನ್ನು ಮುಖ್ಯ ನ್ಯಾಯಮೂರ್ತಿಗಳ ಕಚೇರಿಯಿಂದ  ವರ್ಗಾಯಿಸಿದ ನಂತರ ಆಕೆಯ ವಿರುದ್ಧದ ದೂರುಗಳನ್ನು ಮಾತ್ರ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News