ಮೋದಿ ಕುರಿತ ವೆಬ್ ಸೀರಿಸ್ ಪ್ರಸಾರ ನಿಷೇಧಿಸಿದ ಚುನಾವಣಾ ಆಯೋಗ
Update: 2019-04-20 11:39 GMT
ಹೊಸದಿಲ್ಲಿ, ಎ.20: ಪ್ರಧಾನಿ ನರೇಂದ್ರ ಮೋದಿ ಕುರಿತಾದ ವೆಬ್ ಸೀರಿಸ್ ನ ಆನ್ಲೈನ್ ಪ್ರಸಾರವನ್ನು ಮುಂದಿನ ಆದೇಶದ ತನಕ ನಿಲ್ಲಿಸುವಂತೆ ಚುನಾವಣಾ ಆಯೋಗ ಶನಿವಾರ ಸೂಚನೆ ನೀಡಿದೆ.
ನರೇಂದ್ರ ಮೋದಿ ಜೀವನ ವೃತ್ತಾಂತದ ಚಲನಚಿತ್ರವನ್ನು ಚುನಾವಣೆ ಮುಗಿಯುವ ತನಕ ಪ್ರದರ್ಶಿಸುವುದನ್ನು ನಿಷೇಧಿಸಿ ತಾನು ಎಪ್ರಿಲ್ 10ರಂದು ನೀಡಿದ್ದ ಆದೇಶವನ್ನು ಉಲ್ಲೇಖಿಸಿದ ಚುನಾವಣಾ ಆಯೋಗ ಅದೇ ರೀತಿಯ ನಿಷೇಧವನ್ನು ವೆಬ್ ಸರಣಿ “ಮೋದಿ- ಜರ್ನಿ ಆಫ್ ಎ ಕಾಮನ್ ಮ್ಯಾನ್”ಗೂ ವಿಧಿಸಿದೆ.
``ಈಗಾಗಲೇ ಒಪ್ಪಿಕೊಂಡಂತಹ ವಾಸ್ತವಗಳು ಜತೆಗೆ ಲಭ್ಯ ದಾಖಲೆಗಳಿಂದ ಈ ವೆಬ್ ಸರಣಿಯು ಪ್ರಧಾನಿಯೂ, ರಾಜಕೀಯ ನಾಯಕರೂ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸಂಭಾವ್ಯ ಅಭ್ಯರ್ಥಿಯೂ ಆಗಿರುವ ನರೇಂದ್ರ ಮೋದಿ ಕುರಿತಾದ ಮೂಲ ವೆಬ್ ಸರಣಿಯಾಗಿರುವುದರಿಂದ ಅದನ್ನು ಪ್ರಸಾರ ಮಾಡುವುದು ಸಾಧ್ಯವಿಲ್ಲ'' ಎಂದು ಚುನಾವಣಾ ಆಯೋಗ ಹೇಳಿದೆ.