ಹಿಂದುತ್ವದ ಭಯೋತ್ಪಾದನೆ ಎಂದು ವ್ಯಾಖ್ಯಾನಿಸುವವರು ರಾಷ್ಟ್ರ ವಿರೋಧಿಗಳು: ಪ್ರಜ್ಞಾ ಸಿಂಗ್
ಭೋಪಾಲ, ಎ. 20: ಭೋಪಾಲದ ಲೋಕಸಭಾ ಸ್ಥಾನಕ್ಕೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ಅಭ್ಯರ್ಥಿತನವನ್ನು ಪ್ರಧಾನಿ ಮೋದಿ ಸಮರ್ಥಿಸಿಕೊಂಡ ಒಂದು ದಿನ ಬಳಿಕ ಪ್ರಜ್ಞಾ ಸಿಂಗ್ ಠಾಕೂರ್, ಹಿಂದುತ್ವವನ್ನು ಭಯೋತ್ಪಾದನೆ ಎಂದು ವ್ಯಾಖ್ಯಾನಿಸುವವರು ರಾಷ್ಟ್ರ ವಿರೋಧಿಗಳು ಎಂದಿದ್ದಾರೆ.
‘‘1984ರ ದಂಗೆ ದಂಗೆಯಲ್ಲ. ಹತ್ಯಾಕಾಂಡ. ಈ ದಂಗೆಯಲ್ಲಿ ತಪ್ಪೆಸಗಿದವರು ಮಧ್ಯಪ್ರದೇಶದ ಮುಖ್ಯಮಂತ್ರಿ. ಹಿಂದುತ್ವವನ್ನು ಭಯೋತ್ಪಾದನೆ ಎಂದು ವ್ಯಾಖ್ಯಾನಿಸುವವರು ರಾಷ್ಟ್ರ, ಸೇನೆ, ಧರ್ಮ ವಿರೋಧಿಗಳು. ಈ ಹಿಂದುತ್ವ ಹಾಗೂ ಸಮಾಜ ವಿರೋಧಿ ಜನರು ತಮ್ಮ ಅಂತ್ಯದ ಬಗ್ಗೆ ಚಿಂತಿಸಬೇಕು’’ ಎಂದು ಪ್ರಜ್ಞಾ ಸಿಂಗ್ ಹೇಳಿದ್ದಾರೆ.
ಶುಕ್ರವಾರ ಸಂದರ್ಶನವೊಂದರಲ್ಲಿ ಮೋದಿಯವರು, ‘‘1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆಯಾದಾಗ ಅವರ ಪುತ್ರ, ದೊಡ್ಡ ಮರಗಳು ಉರುಳಿದಾಗ, ಭೂಮಿ ಕಂಪಿಸುತ್ತದೆ ಎಂದಿದ್ದರು. ಅನಂತರ ಸಾವಿರಾರು ಸಿಕ್ಖರ ಹತ್ಯೆ ನಡೆಯಿತು. ಇದು ಭಯೋತ್ಪಾದನೆ ಅಲ್ಲವೇ ?’’ ಎಂದು ಪ್ರಶ್ನಿಸಿದ್ದರು. ಹೇಮಂತ್ ಕರ್ಕರೆ ವಿರುದ್ಧದ ಹೇಳಿಕೆ ಬಗ್ಗೆ ಮಾತನಾಡಿದ ಪ್ರಜ್ಞಾ ಸಿಂಗ್ ಠಾಕೂರ್, “ನಾನು ಎಂದಿಗೂ ವಿವೇಚನಾ ರಹಿತ ಹೇಳಿಕೆ ನೀಡಲಾರೆ. ಏನಿದೆಯೋ ಅದನ್ನು ಮಾತನಾಡುತ್ತೇನೆ. ನನ್ನ ಹೇಳಿಕೆಗೆ ಈಗಾಗಲೇ ಕ್ಷಮೆ ಕೋರಿದ್ದೇನೆ” ಎಂದರು.